ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಸುಗಮ; 1476 ಗೈರು

ವಿಜಯಪುರದಲ್ಲಿ ಪರೀಕ್ಷೆ ಬರೆದ ಹೊರಜಿಲ್ಲೆಯ 917 ವಿದ್ಯಾರ್ಥಿಗಳು
Last Updated 18 ಜೂನ್ 2020, 12:43 IST
ಅಕ್ಷರ ಗಾತ್ರ

ವಿಜಯಪುರ: ಮಾರ್ಚ್ 23ರಂದು ನಡೆಯಬೇಕಾಗಿದ್ದ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಕೋವಿಡ್‌ ಹಿನ್ನೆಲೆಯಲ್ಲಿ ಮೂರು ತಿಂಗಳ ಬಳಿಕ ಜಿಲ್ಲೆಯ 41 ಕೇಂದ್ರಗಳಲ್ಲಿ ಗುರುವಾರ ಸುಗಮವಾಗಿ ನಡೆಯಿತು.

ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 23562 ವಿದ್ಯಾರ್ಥಿಗಳ ಪೈಕಿ 22086 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 1476 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್‌.ಎ.ಜಹಗೀರದಾರ್‌ ತಿಳಿಸಿದರು.

ಜಿಲ್ಲೆಯಿಂದ ವಲಸೆ ಹೋಗಿರುವವರು, ಮದುವೆ ಆಗಿರುವವರು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದರು ಎಂದು ಅವರು ಹೇಳಿದರು.

ಹೊರ ಜಿಲ್ಲೆಯ 917 ಮತ್ತು ಮಹಾರಾಷ್ಟ್ರದಿಂದ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಹ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿರುವುದಾಗಿ ಅವರು ತಿಳಿಸಿದರು.

ನಿಗದಿತ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ನಡೆದಿದೆ. ಎಲ್ಲಿಯೂ ನಕಲು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.

ಕೊಠಡಿಯಲ್ಲಿ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಜಿಗ್‌ಜಾಗ್‌ ಮಾದರಿಯಲ್ಲಿ ಕೂರಿಸಿ, ಪರೀಕ್ಷೆ ಬರೆಯಿಸಲಾಯಿತು ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಹೆಲ್ತ್‌ ಸೆಂಟರ್‌ ತೆರೆಯಲಾಗಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಪರೀಕ್ಷೆಯ ವೇಳೆ ಸೋಂಕು ಲಕ್ಷಣ ಇರುವ ಯಾವೊಬ್ಬ ವಿದ್ಯಾರ್ಥಿಯೂ ಕಂಡುಬರಲಿಲ್ಲ ಎಂದರು.

ಬೆಳಿಗ್ಗೆಯೇ ಬಂದ ವಿದ್ಯಾರ್ಥಿಗಳು

ಕೋವಿಡ್‌ ಹಿನ್ನೆಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಬಂದಿದ್ದರು.

ಬಸ್, ಖಾಸಗಿ ಶಾಲಾ ವಾಹನ, ಕಾರು, ಬೈಕು, ಆಟೊ ರಿಕ್ಷಾಗಳಲ್ಲಿ ಬಂದ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿದ್ದರು. ಸರದಿ ಪ್ರಕಾರ ಪರೀಕ್ಷಾ ಕೇಂದ್ರದ ಆವರಣದೊಳಗೆ ಬಿಡಲಾಯಿತು.

ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಸುಣ್ಣದಿಂದ ಬಾಕ್ಸ್‌ಗಳನ್ನು ಹಾಕಲಾಗಿತ್ತು. ಈ ಸಂಬಂಧದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಸಿಂಪಡಿಸಿ, ಥರ್ಮಲ್‌ ಸ್ಯಾನರ್‌ ಮೂಲಕ ಆರೋಗ್ಯ ತಪಾಸಣೆ ಮಾಡಿ ಪರೀಕ್ಷಾ ಕೊಠಡಿಯೊಳಗೆ ಬಿಡಲಾಯಿತು. ಮಾಸ್ಕ್‌ ಧರಿಸದೇ ಬಂದ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಒದಗಿಸಲಾಯಿತು.

ಮೊದಲೇ ಪರೀಕ್ಷೆ ನಡೆಯಬೇಕಿತ್ತು

ಮಾರ್ಚ್‌ 23ರಂದೇ ಪರೀಕ್ಷೆ ನಡೆಸಬೇಕಾಗಿತ್ತು. ಆವಾಗ ಕೋವಿಡ್‌ ಇಷ್ಟೊಂದು ವ್ಯಾಪಿಸಿರಲಿಲ್ಲ. ಅನಗತ್ಯವಾಗಿ ಮುಂದೂಡಿರುವುದರಿಂದ ಇದೀಗ ಪರೀಕ್ಷೆ ಬರೆಯುವಂತಾಯಿತು. ಮೂರು ತಿಂಗಳು ಅವಕಾಶವೇನೋ ಸಿಕ್ಕಿತು. ಅಭ್ಯಾಸ ಮಾಡದವರಿಗೆ ಒಳ್ಳೆಯದಾಯಿತು ಎಂದು ವಿಜಯಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರಾದ ದಾನೇಶ್ವರಿ ಪಾಟೀಲ, ನಜಿಯಾ ಇನಾಂದಾರ್‌ ಮತ್ತು ವಿದ್ಯಾರ್ಥಿ ಪ್ರಜ್ವಲ್‌ ವಂಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಇಟಿ, ಜೆಇಇ, ಜೆಇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಈಗ ಸಮಯವೇ ಇಲ್ಲ. ಮೂರು ತಿಂಗಳಿಂದ ಕೇವಲ ಇಂಗ್ಲಿಷ್‌ಗೆ ಆದ್ಯತೆ ನೀಡಿದೆವು ಎಂದು ವಿದ್ಯಾರ್ಥಿನಿಯರಾದ ಸಮರಿನ್‌ ಧಾರವಾಡಕರ್‌, ನೇಹಾ ಗಿಡ್ಡೆ ಹೇಳಿದರು.

ಹ್ಯಾಂಡ್‌ ಸ್ಯಾನಿಟೈಜರ್‌ ಸಿಂಪಡಣೆ

ಬಿ.ಎಲ್.ಡಿ.ಇ ಸಂಸ್ಥೆ ಸಂಗನಬಸವ ಮಹಾಸ್ವಾಮೀಜಿ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಗರ ವ್ಯಾಪ್ತಿಯಲ್ಲಿರುವ ಪಿಯುಸಿ 15 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 11 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಹ್ಯಾಂಡ್ ಸ್ಯಾನಿಟೈಜರ್ ಸಿಂಪಡಿಸಲಾಯಿತು ಎಂದು ಪ್ರಾಚಾರ್ಯ ಆರ್.ಬಿ.ಕೋಟ್ನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT