ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾರಿ ಭಾಳ ಮಂದಿಗೆ ಹಾಹಾಕಾರಿ: ಶಿವಯ್ಯ ಮಹಾಸ್ವಾಮಿ ಗುರು ಕರುಣೆಯ ನುಡಿ

Last Updated 8 ಏಪ್ರಿಲ್ 2019, 15:06 IST
ಅಕ್ಷರ ಗಾತ್ರ

ವಿಜಯಪುರ:‘ಇದು ವಿಕಾರಿ ನಾಮ ಸಂವತ್ಸರ. ವಿಕಾರಿ ಕೆಲವೊಂದು ಮಂದಿಗೆ ದುಃಖಾರಿ, ಕೆಲವೊಂದು ಮಂದಿಗೆ ಶಿಕಾರಿ, ಕೆಲವೊಂದು ಮಂದಿಗೆ ಅಹಂಕಾರಿ, ಕೆಲವೊಂದು ಮಂದಿಗೆ ನಿರಂಹಕಾರಿ, ಭಾಳ ಮಂದಿಗೆ ಹಾಹಾಕಾರಿ..!’

ವಿಜಯಪುರ ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ತ್ಯಾರ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಶ್ರೀ ಮಠದ ಪೀಠಾಧೀಶ ಶಿವಯ್ಯ ಮಹಾಸ್ವಾಮಿ ನುಡಿದ ಗುರು ಕರುಣೆಯ ಅಂತ:ಕರಣದ ನುಡಿಗಳಿವು.

ಗ್ರಾಮ ದೇವತೆ ಲಗಮವ್ವ ದೇವಿ ದೇಗುಲದ ಮುಂಭಾಗದಲ್ಲಿರುವ ಬೃಹತ್ ಬೇವಿನ ಮರದ ಪಕ್ಕದಲ್ಲಿ ರಂಗೋಲಿ ಬಿಡಿಸಿದ ಕಂಬಳಿಯ ಮೇಲೆ ನಿಂತು ಈ ಮೇಲಿನಂತೆ ಪವಿತ್ರ ಹೇಳಿಕೆಗಳನ್ನು ನೀಡಿದರು.

‘ಹೋದ ವರ್ಸಕ್ಕಿಂತ ಈ ವರ್ಸ ಮಳಿ ಭೇಷ್ ಐತಿ. ಯಾರಿಗೆ ಮೇವ, ಯಾರಿಗೆ ಖವಾ, ಯಾರಿಗೆ ಸೇವಾ... ಮುಂದ ಗೊತ್ತ ಆಗೈತಿ. ಹೋದ ವರ್ಷಕ್ಕಿಂತ ಹರಕ್ಕತ್ ಇಲ್ಲ, ಆದರೂ ಅಡ್ಡಗೋಡೆ ಅಡ್ಡ ಬಂದೈತಿ. ನಾನಾ ತರಹದ ರೋಗಗಳು ಮನುಷ್ಯ ಜನ್ಮದಲ್ಲಿ ಕಾಲಿಡ್ತಾವ. ವೈದ್ಯರೇ ತಲೆಗೆ ಕೈ ಹಚ್ಚಿ ಕುಳಿತುಕೊಳ್ತಾರ. ರೋಗಾದಿಗಳಲ್ಲಿ ನಿರೋಗಿಗಳಾಗಿ ಬದುಕಲು ಸದಾಶಿವನ ಧ್ಯಾನದಿಂದ ಮಾತ್ರ ಸಾಧ್ಯ. ಸೇವಾ ಮಾಡಲು ಶ್ರೀ ಮಠಕ್ಕೆ ಬರಬೇಕೆಂದಿಲ್ಲ, ಮನೆಯಲ್ಲೂ ಸೇವೆ ಮಾಡಿದರೆ ಸಾಕು.’

‘ಈ ವರ್ಷ ಪಂಚ ಮಹಾಭೂತಗಳು ಉಲ್ಟಾ-ಪಲ್ಟಾ ಆಗ್ತಾವ. ಬೆಂಕಿ, ನೀರ, ಗಾಳಿ, ಭೂಮಿ ಉಲ್ಟಾ ಪಲ್ಟಾ ಆಗ್ತಾವ, ಗಾಳಿ, ಗೂಳಿ, ಬಾಂಬ್, ಭೂಕಂಪ ಎಲ್ಲಾನೂ ನಡೀತಾವ, ಇಂತಹ ಕಠಿಣ ಪ್ರಸಂಗಗಳಲ್ಲಿ ರಕ್ಷಣೆಗೆ ನಿಲ್ಲುವವನೇ ಶ್ರೀ ಸದಾಶಿವ.’

‘ಕಾಡಿನಾಗಿನ ಮಂದಿ ನಾಡಿನಾಗ, ನಾಡಿನಾಗಿನ ಮಂದಿ ಕಾಡಿನಾಗ ಅದಾರ. ಕಾಡಿನಾಗಿನ ಮಂದಿ ಕಾಡಿನಾಗ ಇರಬೇಕು. ನಾಡಿನಾಗಿನ ಮಂದಿ ನಾಡಿನಾಗ ಇರಬೇಕು. ಅದ ಸಮವೃಷ್ಟಿ. ಮನಿಗೊಂದು ಗಿಡ, ಮನಿಗೊಂದ ಮರ ಇರಬೇಕು. ಧರೆ ಮೇಲೆ ಮರ ಇಲ್ಲವಾಗಿದೆ, ಸದ್ಭಾವ, ಸದ್ಭಕ್ತಿ, ನಿಷ್ಠೆ ಇಲ್ಲದ ಕಾರಣದಿಂದಾಗಿ, ಮಳೆ ಬೆಳೆ ಆಗಿಲ್ಲ, ಸದಾಶಿವನ ಸದ್ಭಕ್ತರು ಸಂಸ್ಕಾರ, ವೇಷ, ಸಂಭಾಷಣ, ಇರುವಿಕೆ, ಅರಿವಿಕೆ ಪರಿಶುದ್ಧವಾಗಿರಬೇಕು, ಭಾರತ ದೇಶದ ಸಂಸ್ಕೃತಿ ಅನ್ವಯ ಬದುಕಿ, ಸದಾಶಿವನ ಪ್ರೀತಿಗೆ ಪಾತ್ರರಾಗಿ, ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಬದುಕಬೇಕು’ ಎಂದು ಶಿವಯ್ಯ ಸ್ವಾಮಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT