ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಹಳ್ಳಿ ನಾಯಕರ ಪಟ್ಟಕ್ಕೆ ಪಕ್ಷಗಳ ಕಸರತ್ತು

ಗ್ರಾಮ ಪಂಚಾಯ್ತಿ ಚುನಾವಣಾ ಅಖಾಡದಲ್ಲಿ ಜಿದ್ದಾಜಿದ್ದು
Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆಯಲಿರುವ 201 ಗ್ರಾಮ ಪಂಚಾಯ್ತಿಗಳ ಚುನಾವಣೆಯಲ್ಲಿ ಹಳ್ಳಿ ಮತದಾರರನ್ನು ಸೆಳೆಯುವ ಮೂಲಕ ರಾಜಕೀಯ ಬೇರುಗಳನ್ನು ಗಟ್ಟಿಗಳಿಸಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪ್ರಯತ್ನ ನಡೆಸಿವೆ.

ಪಕ್ಷದ ಚಿಹ್ನೆ, ಬ್ಯಾನರಿನಡಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿಲ್ಲವಾದರೂ ಪ್ರತಿ ಅಭ್ಯರ್ಥಿಯೂ ಒಂದಿಲ್ಲೊಂದು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಆಯಾ ಪಕ್ಷದ ಸಾಂಪ್ರದಾಯಿಕ ವೋಟುಗಳನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಮೂರು ಪಕ್ಷಗಳೂ ಸಹ ತಮ್ಮ ಕಾರ್ಯಕರ್ತರನ್ನೇ ಕಣಕ್ಕಿಳಿಸಿವೆ.

ಈಗಾಗಲೇ ಮೊದಲ ಹಂತದ ಚುನಾವಣೆಗೆ ತಮ್ಮ, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎರಡನೇ ಹಂತದ ಚುನಾವಣೆಗೂ ಪಕ್ಷ ಬೆಂಬಲಿತರನ್ನು ಕಣಕ್ಕಿಳಿಸುವ ಅಂತಿಮ ಕಸರತ್ತನ್ನು ಮೂರು ಪಕ್ಷಗಳು ಮಾಡತೊಡಗಿವೆ.

ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಗೆಲ್ಲಲು ಹೆಣೆದಿರುವ ವ್ಯೂಹದ ಕುರಿತು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌:

ಆಯಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಮತ್ತು 2018ರ ಪರಾಜಿತ ಅಭ್ಯರ್ಥಿಗಳು, ಮುಖಂಡರು ಹಾಗೂ ನನ್ನನ್ನು ಸೇರಿದಂತೆ ಸಮಿತಿ ರಚನೆ ಮಾಡಲಾಗಿದ್ದು, ಪ್ರತಿ ಗ್ರಾ.ಪಂ.ನಲ್ಲಿ ಪ್ರಚಾರ ಸಭೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ರಾಜು ಅಲಗೂರ ತಿಳಿಸಿದರು.

ಆಯಾ ಗ್ರಾ.ಪಂ.ಮಟ್ಟದಲ್ಲಿಫೆನಾಲ್‌ ರಚನೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.ಪ್ರಚಾರವೂ ನಡೆದಿದೆ. ಬ್ಲಾಕ್‌ ಮಟ್ಟದ ಸಮಿತಿ ಸದಸ್ಯರು ಆಯಾ ಮತಗಟ್ಟೆಗೆ ಮತದಾರರನ್ನು ಕರೆತಂದು ಮತ ಹಾಕಿಸುವ ಕಾರ್ಯ ಮಾಡಲಿದ್ದಾರೆ ಎಂದರು.

ಸಮರ್ಥ ಆಡಳಿತ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಮಾಡಿರುವ ಜನಪರ ಕೆಲಸಗಳನ್ನು ಚುನಾವಣಾ ಪ್ರಚಾರದ ಆದ್ಯತೆಯಾಗಿದೆ ಎಂದರು.

ಬಿಜೆಪಿ:

ಪಕ್ಷದ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಲು ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ಈಗಾಗಲೇ ಮಾಡಲಾಗಿದೆ. ಗ್ರಾ.ಪಂ. ಚುನಾವಣೆ ಮೂಲಕ ಪಕ್ಷದ ಕಾರ್ಯಕರ್ತರಿಗೆ ಚೈತನ್ಯ ತುಂಬಲು ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ತಿಳಿಸಿದರು.

ಗ್ರಾಮ ಪಂಚಾಯ್ತಿ ಚುನಾವಣೆಗೆ ಸಂಬಂಧಪಟ್ಟಂತೆ ‘ಪಂಚರತ್ನ ಕಮಿಟಿ’ ರಚನೆ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಕಮಿಟಿ ಮುಖ್ಯ ಪಾತ್ರ ವಹಿಸಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಲಾಗುವುದು. ಗ್ರಾ.ಪಂ. ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ₹ 1 ಕೋಟಿ ಅನುದಾನ ನೀಡುತ್ತಿದೆ. ಉಜ್ವಲ ಯೋಜನೆ, ಕಿಸಾನ್‌ ಸನ್ಮಾನ್, ಜಲಜೀವನ ಮಷಿನ್‌, ಫಜಲ್‌ ಬೀಮಾ ಯೋಜನೆ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಟ್ಟು ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

ಜೆಡಿಎಸ್‌:

ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಜೆಡಿಎಸ್‌ ಕೂಡ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಈ ಚುನಾವಣೆಯನ್ನು ಪಕ್ಷದ ಸಂಘಟನೆಗೆ ವೇದಿಕೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಚುನಾವಣೆಯಲ್ಲಿ ಮತದಾರರ ಓಲೈಕೆಗೆ ಯತ್ನಿಸಿದೆ.

ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ಬೇರು ಗಟ್ಟಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಮ್ಮ ಶಕ್ತಿ ಕುಂದಿಲ್ಲ. ರೈತ ಪರವಾಗಿರುವ ಪಕ್ಷ. ರಾಮರಾಜ್ಯದ ಕನಸು ನನಸು ಮಾಡಲು ಪಕ್ಷ ಮೊದಲಿನಿಂದಲೂ ಆದ್ಯತೆ ನೀಡಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವ ವಿಶ್ವಾಸವಿದೆ ಎಂದು ಹೇಳಿದರು.

ಈ ಹಿಂದೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಉಳಿದ ಕ್ಷೇತ್ರದಲ್ಲೂ ಕಡಿಮೆ ಅಂತರದಿಂದ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಹೀಗಾಗಿ ಪಕ್ಷ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

* ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಶೇ 90ರಷ್ಟು ಸದಸ್ಯರು ಗೆಲ್ಲುವ ವಿಶ್ವಾಸ ಇದೆ.
-ಪ್ರೊ. ರಾಜು ಅಲಗೂರ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ, ವಿಜಯಪುರ

* ಜಿಲ್ಲೆಯಲ್ಲಿ ಶೇ 70ರಿಂದ ಶೇ 75ರಷ್ಟು ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳು ಈ ಬಾರಿ ಅಯ್ಕೆಯಾಗುವ ವಿಶ್ವಾಸವಿದೆ.
- ಆರ್‌.ಎಸ್‌.ಪಾಟೀಲ ಕೂಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ವಿಜಯಪುರ

* ಹಳ್ಳಿ ಆಧಾರಿತ ಪಕ್ಷವಾಗಿರುವ ಜೆಡಿಎಸ್‌ ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇ40ರಿಂದ ಶೇ 50ರಷ್ಟು ಸೀಟುಗಳಲ್ಲಿ ಜಯಗಳಿಸುವುದು ನಿಶ್ಚಿತ.
- ಮಲ್ಲಿಕಾರ್ಜುನ ಯಂಡಿಗೇರಿ, ಅಧ್ಯಕ್ಷ ಜೆಡಿಎಸ್‌ ಜಿಲ್ಲಾ ಘಟಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT