ಬುಧವಾರ, ಜನವರಿ 19, 2022
23 °C
ವಿಧಾನ ಪರಿಷತ್‌ ಚುನಾವಣೆ: ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ

ಅಭಿವೃದ್ಧಿ ಕಾರ್ಯ ಆಧರಿಸಿ ಮತಯಾಚನೆ: ಕಾರಜೋಳ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಏಳು ವರ್ಷಗಳ ಜನಪರ  ಆಡಳಿತ ಹಾಗೂ ರಾಜ್ಯ ಬಿಜೆಪಿ ಸರ್ಕಾರದ  ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತಯಾಚಿಸುತ್ತಿರುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ ಎಂದರು.

ವಿಜಯಪುರ–ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 7350 ಸ್ಥಳೀಯ ಸಂಸ್ಥೆಗಳ ಮತದಾರರು ಇದ್ದು, ಇದರಲ್ಲಿ 4300 ಬಿಜೆಪಿ ಮತದಾರರು ಇದ್ದಾರೆ. ಅಲ್ಲದೇ, ಇಬ್ಬರು ಸಂಸದರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಒಂಬತ್ತು ಜನ ಶಾಸಕರು ಇರುವುದರಿಂದ ಪಕ್ಷದ ಅಭ್ಯರ್ಥಿ ಪಿ.ಎಚ್‌. ಪೂಜಾರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಬಿಜೆಪಿ ಹೊಂದಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ, ಆಡಳಿತದಲ್ಲಿ ಅನುಭವ ಇರುವ ಪಿ.ಎಚ್‌.ಪೂಜಾರ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಗೆಲುವು ನಿಶ್ಚಿತ ಎಂದು ಹೇಳಿದರು.

ದೇಶವನ್ನು 56 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಪಕ್ಷವು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯ ಕನಸು ನನಸು ಮಾಡಲಿಲ್ಲ. ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ದುರ್ಬಲಗೊಳಿಸಿದರು ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಗ್ರಾಮ ಪಂಚಾಯ್ತಿಗಳಿಗೆ ನೇರವಾಗಿ ಅನುದಾನ ಸಿಗುವಂತೆ ಮಾಡಿದ್ದಾರೆ. ಜಲಜೀವನ್‌ ಮಷಿನ್‌ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಹಳ್ಳಿ, ಹಳ್ಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಂಡಿದ್ದಾರೆ ಎಂದರು.

ದೀನ ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ದೂರವಾದ ಕಾರಣಕ್ಕೆ ಬಿಜೆಪಿ ದೇಶದ 23 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದೇ ಪ್ರಧಾನಿ ಮೋದಿ ಅವರ ಗುರಿಯಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಅಭ್ಯರ್ಥಿ ಪಿ.ಎಚ್‌.ಪೂಜಾರ ಮಾತನಾಡಿ, ಅಖಂಡ ವಿಜಯಪುರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಅವಳಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಅರಿವೂ ಇದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳು ತಿಳಿದಿವೆ. ವಿಧಾನ ಪರಿಷತ್‌ ಸದಸ್ಯರನಾಗಿ ಆಯ್ಕೆಯಾದರೆ ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಬಿಜೆಪಿ ವಿಜಯಪುರ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಮುಖಂಡರಾದ ಚಂದ್ರಶೇಖರ ಕವಟಗಿ, ಎಸ್‌.ಕೆ.ಬೆಳ್ಳುಬ್ಬಿ, ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

****

ಅವಿರೋಧ ಆಯ್ಕೆ ಸಂಬಂಧ ನಾಮಪತ್ರ ಹಿಂಪಡೆಯುವಂತೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರೊಂದಿಗೆ ಮಾತನಾಡಿರುವುದು ನಿಜ. ಆದರೆ, ಅವರಿಗೆ ಯಾವುದೇ ಸ್ಥಾನಮಾನದ ಭರವಸೆ ನೀಡಿಲ್ಲ

–ಗೋವಿಂದ ಕಾರಜೋಳ

ಜಲ ಸಂಪನ್ಮೂಲ ಸಚಿವ 

****

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಸಾಧನೆ ಈ ಚುನಾವಣೆಯಲ್ಲಿ ನನ್ನ ಕೈಹಿಡಿಯಲಿದೆ. 4500ಕ್ಕೂ ಹೆಚ್ಚು ಮತಗಳಿಂದ ಗೆಲುವು ನಿಶ್ಚಿತ ಎಂಬ ಅಚಲ ವಿಶ್ವಾಸವಿದೆ

–ಪಿ.ಎಚ್‌.ಪೂಜಾರ

ಬಿಜೆಪಿ ಅಭ್ಯರ್ಥಿ, ವಿಧಾನ ಪರಿಷತ್‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.