ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮತದಾನಕ್ಕೆ ಸಕಲ ಸಿದ್ಧತೆ: ಕನಗವಲ್ಲಿ

2019ರ ಲೋಕಸಭಾ ಚುನಾವಣೆ
Last Updated 30 ಏಪ್ರಿಲ್ 2019, 16:13 IST
ಅಕ್ಷರ ಗಾತ್ರ

ವಿಜಯಪುರ:‘ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.

‘2101 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೂ ಪೊಲೀಸ್ ಭದ್ರತೆ, ಮೂಲ ಸೌಕರ್ಯ ಕಲ್ಪಿಸಿದ್ದೇವೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘17,95,931 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 9,21,258 ಪುರುಷ ಮತದಾರರು, 8,74,404 ಮಹಿಳಾ ಮತದಾರರು, 269 ಇತರೆ ಮತದಾರರಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳು ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದು. 1654 ಸೇವಾ ಮತದಾರರು ಇದ್ದಾರೆ’ ಎಂಬ ಮಾಹಿತಿ ನೀಡಿದರು.

‘ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರವೊಂದರಲ್ಲಿ ತಲಾ ಒಂದೊಂದು ಮಾದರಿ ಮತಗಟ್ಟೆ ಕೇಂದ್ರ ಹಾಗೂ ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡ `ಸಖಿ’ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ಸಿಬ್ಬಂದಿ, ಇವಿಎಂ ಯಂತ್ರಗಳನ್ನು ಸಾಗಿಸಲು ಒಟ್ಟು 258 ಸಾರಿಗೆ ಬಸ್ ಸೇರಿದಂತೆ, ಕ್ರೂಸರ್, ಟೆಂಪೋ ಮೊದಲಾದ 408 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ತಲಾ 2477 ಬ್ಯಾಲೆಟ್, ಕಂಟ್ರೋಲ್‌ ಯೂನಿಟ್ ಒಳಗೊಂಡ ಇವಿಎಂ ಯಂತ್ರಗಳನ್ನು ಬಳಸಲಾಗುತ್ತಿದ್ದು, ಹೆಚ್ಚುವರಿಯಾಗಿಯೂ ಕಾಯ್ದಿರಿಸಿಕೊಳ್ಳಲಾಗಿದೆ. 2343 ವಿವಿ ಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

‘ಸುವ್ಯವಸ್ಥಿತ ಚುನಾವಣೆ, ಮತದಾನಕ್ಕಾಗಿ 9276 ಸಿಬ್ಬಂದಿ ನಿಯೋಜಿಸಲಾಗಿದೆ. 178 ಮೈಕ್ರೋ ಅಬ್ಸರ್‌್್ವರ್‌, 110 ವೆಬ್ ಕಾಸ್ಟಿಂಗ್ ತಂಡ, 71 ವಿಡಿಯೋ ಕ್ಯಾಮೆರಾ ತಂಡಗಳನ್ನು ನಿಯೋಜಿಸಲಾಗಿದೆ. 167 ಸೆಕ್ಟರ್ ಆಫೀಸರ್, ಸ್ಟ್ಯಾಟಿಟಿಕಲ್ ಸರ್ವೆಲೆನ್ಸ್‌ನ 66 ತಂಡ, 24 ಫ್ಲೈಯಿಂಗ್ ಸ್ಕ್ಯಾಡ್ ತಂಡಗಳು ಕರ್ತವ್ಯ ನಿರ್ವಹಣೆಯಲ್ಲಿವೆ’ ಎಂದರು.

₹ 61.33 ಲಕ್ಷ ಜಪ್ತಿ

‘ದಾಖಲೆಯಿಲ್ಲದೆ ನಗದು ಸಾಗಾಟ ಮಾಡುತ್ತಿದ್ದ 19 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ₹ 61,33,220 ಜಪ್ತಿ ಮಾಡಿಕೊಳ್ಳಲಾಗಿದೆ. 1950 ಸಹಾಯವಾಣಿಯಲ್ಲಿ 1506 ಕರೆ ಸ್ವೀಕೃತಿಯಾಗಿದ್ದು, ಎಲ್ಲವನ್ನೂ ವಿಲೇವಾರಿಗೊಳಿಸಲಾಗಿದೆ. ಸಿ -ವಿಜಲ್‌ನಲ್ಲಿ 25 ದೂರು ಸ್ವೀಕೃತವಾಗಿದ್ದು, ಇದರಲ್ಲಿ 23 ದೂರುಗಳನ್ನು ಕೈ ಬಿಡಲಾಗಿದೆ. ಬಾಕಿ ಎರಡು ದೂರುಗಳನ್ನು ವಿಲೇವಾರಿಗೊಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ನಿಷೇಧಾಜ್ಞೆ ಜಾರಿ

ಶಾಂತಿಯುತ ಮತದಾನಕ್ಕಾಗಿ ಭಾನುವಾರ ಸಂಜೆ 6ಗಂಟೆಯಿಂದ, ಏ.23ರ ಮಂಗಳವಾರ ಸಂಜೆ 6 ಗಂಟೆಯವರೆಗೆ 48 ತಾಸಿನ ಅವಧಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಜಿಲ್ಲೆಯಾದ್ಯಂಥ ನಿಷೇಧಾಜ್ಞೆ ಹೊರಡಿಸಿದ್ದಾರೆ.

ರಾಜಕೀಯ ಸಭೆ, ಸಮಾರಂಭ ನಡೆಸುವಂತಿಲ್ಲ. 10ಕ್ಕಿಂತ ಹೆಚ್ಚು ಜನರು ಗುಂಪಾಗಿ ಮತ ಯಾಚನೆಗೆ ತೆರಳುವಂತಿಲ್ಲ. ಮಾರಕಾಸ್ತ್ರ ಇಟ್ಟುಕೊಳ್ಳುವಂತಿಲ್ಲ. ಬಹಿರಂಗ ಘೋಷಣೆ ಮೊಳಗಿಸಬಾರದು. ಸನ್ನೆ ಮಾಡುವುದನ್ನು ನಿಷೇಧಿಸಲಾಗಿದೆ.

ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂಥಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸಬಾರದು ಎಂದು ನಿಷೇಧಾಜ್ಞೆಯ ಸುತ್ತೋಲೆಯಲ್ಲೇ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ವಿಕಾಸ್‌ ಕಿಶೋರ್‌ ಸುರಳ್‌ಕರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT