ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯವಾದಾಗ ಧ್ವನಿ ಎತ್ತುವ ಯತ್ನಾಳ: ಮೆಚ್ಚುಗೆ

ಸಂಪುಟದಲ್ಲಿ ವಿಜಯಪುರಕ್ಕೆ ಸಿಗದ ಪ್ರಾತಿನಿಧ್ಯ: ಎಸ್‌.ಆರ್‌.ಪಾಟೀಲ ಬೇಸರ
Last Updated 15 ಜನವರಿ 2021, 11:23 IST
ಅಕ್ಷರ ಗಾತ್ರ

ವಿಜಯಪುರ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುವಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಧೈರ್ಯ ಮೆಚ್ಚುವಂತಹದು ಎಂದುವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಶ್ಲಾಘಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯಸಚಿವ ಸಂಪುಟದಲ್ಲಿವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದು ನೋವಿನ ಸಂಗತಿ ಎಂದು ಹೇಳಿದರು.

ಅಶ್ಲೀಲ ವ್ಯವಹಾರ ಮಾಡಲ್ಲ:‘ಸಿಡಿ ಇಟ್ಟುಕೊಂಡು ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿಯನ್ನು ಅಂಜಿಸಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆದುಕೊಳ್ಳುತ್ತಿದ್ದಾರೆ’ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್‌.ಆರ್‌.ಪಾಟೀಲ, ಸಿಡಿ ವ್ಯವಹಾರ, ಅಶ್ಲೀಲ ವ್ಯವಹಾರ ಕಾಂಗ್ರೆಸ್‌ನವರು ಎಂದೂ ಮಾಡಿಲ್ಲ’ ಎಂದರು.

‘ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡದೇ ಮುಖ್ಯಮಂತ್ರಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ನಮ್ಮ ಆರೋಪವಾಗಿದೆ’ ಎಂದು ತಿಳಿಸಿದರು.

ನಿಘಂಟಿನಲ್ಲಿಲ್ಲ:‘ಕಾಂಗ್ರೆಸ್‌ನವರು ಮುಖ್ಯಮಂತ್ರಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ’ ಎಂಬ ಯತ್ನಾಳ ಆರೋಪವನ್ನು ತಳ್ಳಿ ಹಾಕಿದ ಅವರು, ‘ಹೊಂದಾಣಿಕೆ ರಾಜಕಾರಣ ಎಂಬುದು ಕಾಂಗ್ರೆಸ್‌ ನಿಂಘಟಿನಲ್ಲಿಲ್ಲ’ ಎಂದು ಹೇಳಿದರು.

ಕರಾಳ ಕಾನೂನು:ಕೃಷಿ ಕ್ಷೇತ್ರದ ಸುಧಾರಣೆ ನೆಪದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾನೂನುಗಳು ರೈತರ ಪಾಲಿಗೆ ಕರಾಳವಾಗಿವೆ ಎಂದು ಪಾಟೀಲ ಆರೋಪಿಸಿದರು.

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಎಪಿಎಂಸಿ ಮತ್ತು ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಕಾರ್ಪೊರೇಟ್‌ ಕಂಪನಿಗಳ ಪರವಹಿಸಿದೆ ಎಂದು ದೂರಿದರು.

1974ರಲ್ಲಿ ದೇವರಾಜ ಅರಸು ಜಾರಿಗೆ ತಂದಿದ್ದ ‘ಉಳುವವನೆ ಹೊಲದೊಡೆಯ’ ಕಾಯ್ದೆಗೆ ತಿದ್ದು‍ಪಡಿ ತಂದು ‘ಉಳ್ಳವರು ಹೊಲದೊಡೆಯ’ನಾಗುವಂತೆ ಮಾಡಿದ್ದಾರೆ. ಕೃಷಿಕರಲ್ಲದವರು ಕೃಷಿ ಭೂಮಿ ಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ರೈತರ ಭೂಮಿಯು ಮೋದಿ ಅವರ ಎಡಗೈ, ಬಲಗೈಯಾದ ಅದಾನಿ, ಅಂಬಾನಿ ಪಾಲಾಗಲಿದೆ ಎಂದು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಎಪಿಎಂಸಿಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸುಮಾರು ಎರಡು ಲಕ್ಷ ಹಮಾಲರು, 30 ಸಾವಿರ ಮಂಡಿ ಮಾಲೀಕರು, ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಎಪಿಎಂಸಿ ವ್ಯವಸ್ಥೆ ಸಂಪೂರ್ಣ ಬಂದ್‌ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಯ್ದೆ ತಿದ್ದುಪಡಿಯಿಂದ ಖಾಸಗಿ ಕಂಪನಿಗಳು ಎಪಿಎಂಸಿಗೆ ಪರ್ಯಾಯವಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಮೂಲಕ ರೈತರಿಗೆ ಆರಂಭದಲ್ಲಿ ಉತ್ತಮ ಬೆಲೆ ಸಿಗಬಹುದು. ಆದರೆ, ಎಪಿಎಂಸಿ ವ್ಯವಸ್ಥೆ ಸಂಪೂರ್ಣ ಬಂದ್ ಆದ ಬಳಿಕ ಸರ್ಕಾರದ ಯಾವುದೇ ನಿಯಂತ್ರಣವಿಲ್ಲದ ಖಾಸಗಿ ಕಂಪನಿಗಳು ಕನಿಷ್ಠ ಬೆಲೆಯನ್ನು ನಿಗದಿ ಮಾಡುವ ಮೂಲಕ ಶೋಷಣೆ ಮಾಡುತ್ತವೆ ಎಂದು ಹೇಳಿದರು.

ಮೋದಿ ತಮ್ಮ ಅಧಿಕಾರವಧಿಯಲ್ಲಿ ರೈಲ್ವೆ, ವಿಮಾನ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಉದ್ದಿಮೆಗಳನ್ನು ಖಾಸಗಿಕರಣ ಮಾಡಿದ್ದಾರೆ. ಇದೀಗ ರೈತರ ಹೊಲದ ಮೇಲೆ ಅವರ ಕಣ್ಣು ಬಿದ್ದಿದೆ ಎಂದರು.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ರೈತರ ನಯಾಪೈಸೆ ಸಾಲವನ್ನು ಮನ್ನಾ ಮಾಡಲಿಲ್ಲ. ಆದರೆ, ಕಾರ್ಪೊರೇಟ್‌ ಕಂಪನಿಗಳ ಸಾವಿರಾರು ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿರುವ ದೇಶದ ಐದು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಹಾಸಿಂಪೀರ ವಾಲೀಕಾರ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬಿ.ಎಸ್‌.ಪಾಟೀಲ ಯಾಳಗಿ, ಮಲ್ಲಣ್ಣ ಸಾಲಿ, ಸಂಗಮೇಶ ಬಬಲೇಶ್ವರ, ವಿಠಲ ಕಟಕದೊಂಡ, ಎಂ.ಎ.ಖತೀಬಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

****

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಎರಡು ತಿಂಗಳಿಂದ ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ನಡೆಸುತ್ತಿರುವ ಹೋರಾಟ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮನಾಗಿದೆ.
-ಎಸ್‌.ಆರ್‌.ಪಾಟೀಲ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT