ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಡ್ತಿ ಮೀಸಲಾತಿ: ಸಾಮಾನ್ಯರಿಗೆ ಅನ್ಯಾಯ

Last Updated 8 ಅಕ್ಟೋಬರ್ 2017, 10:12 IST
ಅಕ್ಷರ ಗಾತ್ರ

ವಿಜಯಪುರ: ಹಿಂದುಳಿದ ವರ್ಗದ ಏಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ ಕೇವಲ 10 ವರ್ಷ ಮೀಸಲಾತಿ ಜಾರಿಗೆ ತಂದಿದ್ದರೂ, ಆದರೆ, ರಾಜಕಾರಣಿಗಳು ಮತಕ್ಕಾಗಿ ಮೀಸಲಾತಿ ಮುಂದುವರೆಸುತ್ತಾ ಬಂದಿದ್ದಾರೆ ಎಂದು ಅಹಿಂಸಾ ರಾಜ್ಯ ಘಟಕದ ಅಧ್ಯಕ್ಷ ಎಂ.ನಾಗರಾಜ ಹೇಳಿದರು.

ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಜರುಗಿದ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಸಾಮಾನ್ಯ ವರ್ಗಗಳ ಸರ್ಕಾರಿ ನೌಕರರ ಹಾಗೂ ಸಿಬ್ಬಂದಿ, ನಿವೃತ್ತರ ಹಿತರಕ್ಷಣಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಅಹಿಂಸಾ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇ 94ರಷ್ಟು ಜನತೆ ಇನ್ನೂ ಆರ್ಥಿಕವಾಗಿ ಹಿಂದುಳಿದ್ದಾರೆ. ಅವರ ಒಳತಿಗಾಗಿ ಕೊಟ್ಯಂತರ ಆಸ್ತಿ ಹೊಂದಿಯೂ ಮೀಸಲಾತಿ ಪಡೆಯುವ ಕುಟುಂಬ ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಬೇಕು ಎಂದರು.

ಕೇವಲ ಸಂಬಳಕ್ಕಾಗಿ ಸರ್ಕಾರಿ ನೌಕರ ಕೆಲಸ ಮಾಡುವುದಿಲ್ಲ. ಜನಸೇವೆಯನ್ನು ತನ್ನ ಧ್ಯೇಯವಾಗಿರಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಘನತೆ ಸಂಪಾದಿಸುವ ದೃಷ್ಟಿಯಿಂದಲೂ ಕಾರ್ಯನಿರ್ವಹಿಸುತ್ತಾನೆ. ಆದರೆ, ತನ್ನೊಡನೆ ಸೇವೆಗೆ ಪಾದಾರ್ಪಣೆ ಮಾಡಿದ, ತನ್ನಷ್ಟೇ ವಿದ್ಯಾರ್ಹತೆ ಹೊಂದಿದ ಪರಿಶಿಷ್ಟ ಪಂಗಡದ ಸಹೊದ್ಯೋಗಿ ಮೇಲಾಧಿಕಾರಿ ಆಗುವುದರಿಂದ ಸಾಮಾನ್ಯ ವರ್ಗದ ನೌಕರನಿಗೆ ಸಹಜವಾಗಿ ನೋವುಂಟಾಗುತ್ತದೆ ಎಂದು ತಿಳಿಸಿದರು.

ಪರಿಶಿಷ್ಟ ಪಂಗಡದ ಒಬ್ಬ ವ್ಯಕ್ತಿ ಹವಾಲ್ದಾರ ಹುದ್ದೆಗೆ ನೇಮಕವಾಗಿರುತ್ತಾನೆ, ಆತನಿಗೆ ಹತ್ತಾರು ಪ್ರಮೋಷನ್ ಮೂಲಕ ಡಿವೈಎಸ್‌ಪಿ ಹುದ್ದೆಯೂ ಲಭಿಸುತ್ತದೆ. ನಾವು ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಸುಪ್ರೀಂಕೋರ್ಟ್‌ ಸಹ ಮೀಸಲಾತಿ ಅವಶ್ಯಕತೆ ಒತ್ತಿ ಹೇಳಿದೆ. ನೇಮಕಾತಿ ಸಂದರ್ಭದಲ್ಲಿ, ಶೈಕ್ಷಣಿಕ ಸೇವೆ ಪಡೆದುಕೊಳ್ಳುವಲ್ಲಿ ಮೀಸಲಾತಿ ಇರಬೇಕು. ಆದರೆ, ಬಡ್ತಿ ಸಮಯದಲ್ಲಿ ಮೀಸಲಾತಿ ಇರಬೇಕಾಗಿರುವುದು ಅವಶ್ಯವಲ್ಲ ಎಂಬುದು ನಮ್ಮ ಪ್ರತಿಪಾದನೆ ಎಂದರು.

ಅವೈಜ್ಞಾನಿಕ ಬಡ್ತಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. 1978ರಿಂದಲೂ ನಿರಂತರವಾಗಿ ಈ ಬಡ್ತಿ ಮೀಸಲಾತಿ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್‌ಗೆ ಹೋಗಿ ನ್ಯಾಯ ಪಡೆದುಕೊಳ್ಳಲಾಗಿದೆ.

ಆದರೆ, ಸುಪ್ರೀಂಕೋರ್ಟ್‌ ತೀರ್ಪನ್ನು ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ಹೊತ್ತ ಸರ್ಕಾರಗಳು ಮಾತ್ರ ಸುಪ್ರೀಂ ಆದೇಶವನ್ನು ಪಾಲಿಸಲಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಹಿಂಬಡ್ತಿ ಪಡೆದ ಪರಿಶಿಷ್ಠ ಪಂಗಡ ಅಧಿಕಾರಿಗಳು ಆಡಳಿತ ಯಂತ್ರಕ್ಕೆ ಒತ್ತಡ ತಂದರು. ಪರಿಣಾಮವಾಗಿ ಸಂಸತ್‌ನಲ್ಲಿ ಮಸೂದೆ ಅಂಗೀಕರಿಸಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಬಡ್ತಿ ಮೀಸಲಾತಿ ವಿಧೇಯಕ ಅಂಗೀಕರಿಸಲಾಯಿತು. ನಮಗೆ ಹಿನ್ನೆಡೆಯಾದರೂ ಸಹ ನಾವು ಹೋರಾಟ ಮಾತ್ರ ಕೈ ಬಿಡಲಿಲ್ಲ ಎಂದರು.

ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಅಸಿಂಧುಗೊಳಿಸುವ ಕಾರಣದಿಂದಾಗಿಯೇ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕು ಎಂಬ ವಿಷಯವನ್ನೇ ಕೇಂದ್ರಿಕರಿಸಿ ಪುನ: ಸುಪ್ರೀಂಗೆ ಅರ್ಜಿ ಸಲ್ಲಿಸಿದೆವು, ಅದರೊಂದಿಗೆ ನ್ಯಾಯಾಂಗ ನಿಂದನೆ ಸಹ ದಾಖಲಿಸಲಾಯಿತು ಎಂದು ತಿಳಿಸಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ, ಬುರಾಣಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಅವರು ಸಾನಿಧ್ಯ ವಹಿಸಿದ್ದರು. ಪೀಟರ್ ಅಲೆಕ್ಸಾಂಡರ್, ವಿಶ್ವನಾಥ ಭಾವಿ ಉಪಸ್ಥಿತರಿದ್ದರು. ಸಂಘಟನೆ ಅಧ್ಯಕ್ಷ ವಿಜಯಕುಮಾರ ಹಲಕುಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಹತಾಬ್ ಕಾಗವಾಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT