ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಜಿ.ಪಂ: ಶಮನವಾಗದ ಬಿಕ್ಕಟ್ಟು

Last Updated 21 ಡಿಸೆಂಬರ್ 2013, 5:00 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ಜಿಲ್ಲಾ ಪಂಚಾ ಯಿತಿ ಸದಸ್ಯರಲ್ಲಿಯ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಕೆಲ ತಿಂಗಳ ನಂತರ ಕರೆದಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಬಹುಪಾಲು ಸದಸ್ಯರು ಹಾಜ ರಾಗಲಿಲ್ಲ. ಕೋರಂ ಅಭಾವದಿಂದ ಸಭೆಯನ್ನು ಮುಂದೂಡಲಾಯಿತು.

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಶುಕ್ರವಾರ ಬೆಳಿಗ್ಗೆ 11ಕ್ಕೆ ನಿಗದಿಯಾ ಗಿತ್ತು. ಅಧ್ಯಕ್ಷೆ ಕಾವ್ಯಾ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಸಿಇಒ ಶಿವಕುಮಾರ ಹಾಗೂ ಅಧಿಕಾರಿಗಳು ಸಭೆಗೆ ಆಗಮಿಸಿದರು. ಒಂದು ಗಂಟೆ ಕಾಯ್ದರೂ ಕೋರಂಗೆ ಅಗತ್ಯದಷ್ಟು ಸದಸ್ಯರು ಬರಲಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಯಿತು.

ಬದಲಾವಣೆಯ ಬೇಡಿಕೆಯೇ ಕಾರಣ: ಅಧ್ಯಕ್ಷೆ ಕಾವ್ಯಾ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿ ಸಲು ಸಭೆ ಕರೆಯುವಂತೆ 21 ಜನ ಸದಸ್ಯರು ನವೆಂಬರ್‌ 18ರಂದು ಅಧ್ಯಕ್ಷರಿಗೆ ಪತ್ರ ಬರೆದು ಕೋರಿದ್ದರು. ಆದರೆ, ಅಧ್ಯಕ್ಷರು ಅವಿಶ್ವಾಸ ಗೊತ್ತು ವಳಿ ಮಂಡಿಸುವ ಸಭೆಯನ್ನು ಕರೆಯಲೇ ಇಲ್ಲ. ನಿಗದಿತ ಅವಧಿಯಲ್ಲಿ ಅಧ್ಯಕ್ಷರು ಸಭೆ ಕರೆಯದಿದ್ದರೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಸಭೆ ಕರೆಯು ವಂತೆ ಈ ಸದಸ್ಯರು ನೋಟೀಸ್‌ ನೀಡಿದ್ದರೆ, ಅವರು ಸಭೆ ಕರೆಯುವುದು ಅನಿವಾರ್ಯವಾಗುತ್ತಿತ್ತು.

ಅಷ್ಟೊತ್ತಿಗಾಗಲೆ ಕಾಂಗ್ರೆಸ್‌ ಜಿಲ್ಲಾ ನಾಯಕರು ಮಧ್ಯ ಪ್ರವೇಶಿಸಿದ್ದರಿಂದ ಸದಸ್ಯರೂ ಮೌನಕ್ಕೆ ಶರಣಾಗಿದ್ದರು.
ಆದರೆ, ಶುಕ್ರವಾರದ ಸಾಮಾನ್ಯ ಸಭೆಗೆ ಗೈರು ಉಳಿಯುವ ಮೂಲಕ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್‌ನ ಬಹುಪಾಲು ಸದಸ್ಯರು ನೀಡಿದ್ದಾರೆ.

‘ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಸುಣಗಾರ ಅವರು ಕಾಂಗ್ರೆಸ್‌ ಪಕ್ಷದ ಎಲ್ಲ ಜಿ.ಪಂ. ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಅಧಿಕಾರ ಹಂಚಿಕೆ ಸೂತ್ರದಂತೆ 10 ತಿಂಗಳು ಅವಧಿ ಪೂರೈಸಿರುವ ಅಧ್ಯಕ್ಷ–ಉಪಾ ಧ್ಯಕ್ಷರು ರಾಜೀನಾಮೆ ನೀಡಬೇಕು. ಆ ನಂತರ ಸದಸ್ಯರೆಲ್ಲರೂ ಸೇರಿ ಸೂಚಿಸಿದ ವರು ಅಧ್ಯಕ್ಷ–ಉಪಾಧ್ಯಕ್ಷರಾಗಬೇಕು ಎಂದು ಅವರಿಗೆ ಹೇಳಿದ್ದೆವು. ಆ ನಂತರ ಯಾವುದೇ ಕ್ರಮವಾಗಿಲ್ಲ. ಪಕ್ಷದ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ಈ ಸಭೆಯಿಂದ ಹೊರಗುಳಿದಿದ್ದೇವೆ’ ಎಂದು ಹೆಸರು ಹೇಳಲು ಒಲ್ಲದ ಕೆಲ ಕಾಂಗ್ರೆಸ್‌ ಸದಸ್ಯರು ಮಾಹಿತಿ ನೀಡಿದರು.

ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: ಸಭೆ ಮುಂದೂಡಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಅಧ್ಯಕ್ಷೆ ಕಾವ್ಯಾ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ‘ಅಭಿವೃದ್ಧಿ ವಿಷಯ ಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಸಾಕಷ್ಟು ಮುಂಚಿತ ವಾಗಿಯೇ ನೋಟೀಸ್‌ ನೀಡಿದ್ದರೂ ಕೆಲ ಸದಸ್ಯರು ಸಭೆಗೆ ಬರದೆ ಹಠಮಾರಿ ಧೋರಣೆ ಮುಂದುವರೆಸಿದ್ದಾರೆ’ ಎಂದು ದೂರಿದರು.

‘ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರ ಅವಧಿ ಕೇವಲ 10 ತಿಂಗಳು ಎಂದು ಹೈ ಕಮಾಂಡ್‌ ಹೇಳಿಲ್ಲ. ಹೈಕಮಾಂಡ್‌ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯೂ ಆಗಿಲ್ಲ. ನಾವು ಅಧಿಕಾರದಲ್ಲಿ ಮುಂದು ವರೆಯುವ ಇಲ್ಲವೆ ರಾಜೀನಾಮೆ ನೀಡುವ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದರು.

ಬಿಜೆಪಿ ತಟಸ್ಥ?: 38 ಜನ ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿ ಯಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಕಾಂಗ್ರೆಸ್‌ನ 20, ಬಿಜೆಪಿಯ 16, ಜೆಡಿಎಸ್‌ನ ಇಬ್ಬರು ಸದಸ್ಯರಿದ್ದಾರೆ.

ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಸಲ್ಲಿಸಿದ್ದ ಪತ್ರಕ್ಕೆ ಆಡಳಿತಾರೂಢ ಕಾಂಗ್ರೆಸ್‌ನ 14 ಜನ ಸದಸ್ಯರು, ಬಿಜೆಪಿಯ ಆರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಸಹಿ ಮಾಡಿದ್ದರು.

‘ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯ ಕುರಿತಂತೆ ಯಾವುದೇ ಕ್ರಮಕ್ಕೆ ಮುಂದಾ ಗುವುದು ಬೇಡ. ಈ ವಿಷಯದಲ್ಲಿ ನಾವು ತಟಸ್ಥವಾಗಿ ಉಳಿಯಬೇಕು ಎಂದು ಪಕ್ಷದ ವೇದಿಕೆಯಲ್ಲಿ ನಿರ್ಧಾರ ವಾಗಿದೆ. ಹಿಂದೆ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ನೀಡಿದ್ದ ಪತ್ರಕ್ಕೆ ಸಹಿ ಮಾಡಿದ್ದ ಬಿಜೆಪಿ ಸದಸ್ಯರೂ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಅಧ್ಯಕ್ಷ–ಉಪಾಧ್ಯಕ್ಷರ ಬದಲಾವಣೆ ಯಲ್ಲಿ ಸಮಯ ವ್ಯರ್ಥಮಾಡದೆ, ಅಭಿವೃದ್ಧಿ ದೃಷ್ಟಿಯಿಂದ ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ನಿಲವು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಬಿಜೆಪಿ  ಸದಸ್ಯ ಶ್ರೀಶೈಲಗೌಡ ಬಿರಾದಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT