ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಷರ್ ಆರ್ಭಟ: ಸಂಬೇಗೌಡನ ದೊಡ್ಡಿ ಗ್ರಾಮಸ್ಥರ ಅಳಲು

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಸಂಬೇಗೌಡನದೊಡ್ಡಿ ಗ್ರಾಮಸ್ಥರ ವಾಗ್ದಾದ
Last Updated 10 ಡಿಸೆಂಬರ್ 2018, 15:25 IST
ಅಕ್ಷರ ಗಾತ್ರ

ರಾಮನಗರ: ‘ಗ್ರಾಮದ ಸಮೀಪ ನಡೆದಿರುವ ಅಕ್ರಮ ಕ್ರಷರ್‌ನಿಂದ ಜನರ ನೆಮ್ಮದಿ ಹಾಳಾಗಿದೆ. ಕೂಡಲೇ ಅದನ್ನು ಮುಚ್ಚಿಸಿ’ ಎಂದು ಆಗ್ರಹಿಸಿ ಕನಕಪುರ ತಾಲ್ಲೂಕಿನ ಸಂಬೇಗೌಡನ ದೊಡ್ಡಿ ಗ್ರಾಮಸ್ಥರು ಸೋಮವಾರ ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ವಾಗ್ದಾದ ನಡೆಸಿದರು.

‘ಗ್ರಾಮದಿಂದ ಕೇವಲ 600 ಮೀಟರ್ ದೂರದಲ್ಲಿ ಅಕ್ರಮವಾಗಿ ಕ್ರಷರ್‌ ಕಾರ್ಯ ನಿರ್ವಹಿಸುತ್ತಿದೆ. ಭಾನುವಾರ ಪೊಲೀಸರ ಕಾವಲಿನಲ್ಲಿ ಸಿಡಿಮದ್ದು ಬಳಸಿ ಬಂಡೆಗಳನ್ನು ಸಿಡಿಸಲಾಗಿದೆ. ಇದರಿಂದ ಗ್ರಾಮದ ಮನೆಗಳು ಬಿರುಕು ಬಿಟ್ಟಿದೆ’ ಎಂದು ಅಧಿಕಾರಿಗಳಿಗೆ ದೂರಿದರು.

‘ಕ್ರಷರ್‌ನಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ದೂಳು ಆವರಿಸಿದೆ. ಸರ್ಕಾರಿ ಗೋಮಾಳದಲ್ಲಿ ಕ್ರಷರ್ ಕಾರ್ಯ ನಿರ್ವಹಿಸುತ್ತಿದೆ. ಮತ್ತೊಂದೆಡೆ ಜಾನುವಾರುಗಳಿಗೆ ಮೇವು ಇಲ್ಲದಂತೆ ಆಗಿದೆ. ಗ್ರಾಮಕ್ಕೆ ಕೂಡಲೇ ಭೇಟಿ ಕೊಟ್ಟು ಅಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು. ಅಲ್ಲಿಂದ ಕ್ರಷರ್‌ ಅನ್ನು ಸ್ಥಳಾಂತರ ಮಾಡಬೇಕು’ ಎಂದು ಅಧಿಕಾರಿಗಳಲ್ಲಿ ಒತ್ತಾಯಿಸಿದರು.

ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಪ್ರತಿಕ್ರಿಯಿಸಿ, ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಗ್ರಾಮಸ್ಥರು ‘ಸಾತನೂರು ಹೋಬಳಿಯ ನರಿಪುರ ಗ್ರಾಮದ ಸರ್ವೆ ಸಂಖ್ಯೆ 31,32, 34, 266, 49 ಹಾಗೂ ಆನುಮಾನಹಳ್ಳಿ ಸರ್ವೆ ಸಂಖ್ಯೆ 87ರಲ್ಲಿ ಸುಮಾರು 287 ಎಕರೆ ಗೋಮಾಳವಿದೆ. ಅಲ್ಲಿ ಕಲ್ಲು ಗಣಿಗಾರಿಕೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಇತ್ತ ಆನುಮಾನಹಳ್ಳಿ ಸರ್ವೆ ಸಂಖ್ಯೆ 87ರಲ್ಲಿ ಕ್ರಷರ್ ಒಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದಕ್ಕೆ ಸ್ಥಳೀಯ ಗ್ರಾ.ಪಂ. ನಿಂದ ನಿರಪೇಕ್ಷಣಾ ಪತ್ರವಾಗಲಿ, ಇಲಾಖೆಯಿಂದ ಅನುಮತಿ ಆಗಲಿ ಪಡೆದಿಲ್ಲ’ ಎಂದು ದೂರಿದರು.

‘ಇದೇ ಕ್ರಷರ್‌ ಮಾಲೀಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ₹ 90 ಲಕ್ಷ ದಂಡ ಪಾವತಿಸಿಕೊಂಡಿದ್ದಾರೆ. ದಂಡ ಪಾವತಿ ಬಳಿಕ ಕ್ರಷರ್‌ನಲ್ಲಿ ಜಲ್ಲಿ ಉತ್ಪಾದನೆ ಇಮ್ಮಡಿಯಾಗಿದೆ’ ಎಂದು ದೂರಿದರು.

ಪರಿಸರವಾದಿ ಶಿವರಾಜ್, ಸಂಬೇಗೌಡನ ದೊಡ್ಡಿ ಗ್ರಾಮಸ್ಥರಾದ ಪ್ರಕಾಶ್, ರವಿ, ಸುರೇಶ್, ಪುಟ್ಟಸ್ವಾಮಿ, ಲೋಕೇಶ್, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT