ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ–ಬಾಂಗ್ಲಾ ಬಾಂಧವ್ಯ ಸುವರ್ಣ ಯುಗ’

ಉಭಯ ದೇಶಗಳ ನಡುವೆ ಸಹಕಾರ, ಸುಮಧುರ ಸಂಬಂಧ: ಪ್ರಧಾನಿ ಮೋದಿ ಬಣ್ಣನೆ
Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಶಾಂತಿನಿಕೇತನ (ಪಶ್ಚಿಮ ಬಂಗಾಳ): ‘ಭಾರತ–ಬಾಂಗ್ಲಾದೇಶದ ಬಾಂಧವ್ಯದ ಕಳೆದ ಕೆಲವು ವರ್ಷಗಳು ಸುವರ್ಣ ಅಧ್ಯಾಯ. ಒಂದು ಕಾಲಘಟ್ಟದಲ್ಲಿ ಪರಿಹಾರ ಅಸಾಧ್ಯ ಎನಿಸಿದ್ದ ಉಭಯ ದೇಶಗಳ ಗಡಿ ವಿವಾದ ಕೊನೆಗೂ ಪರಿಹಾರವಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾಂಸ್ಕೃತಿಕ ಸಹಭಾಗಿತ್ವಕ್ಕೆಂದು ವಿಶ್ವಭಾರತಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಾಂಗ್ಲಾದೇಶ ಸರ್ಕಾರ ಸ್ಥಾಪಿಸಿರುವ ‘ಬಾಂಗ್ಲಾದೇಶ ಭವನ’ವನ್ನು ಪ್ರಧಾನಿ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜಂಟಿಯಾಗಿ ಉದ್ಘಾಟಿಸಿದರು.

‘ಭಾರತ ಮತ್ತು ಬಾಂಗ್ಲಾದೇಶ ಎರಡು ಪ್ರತ್ಯೇಕ ರಾಷ್ಟ್ರಗಳಾಗಿದ್ದರೂ ಪರಸ್ಪರ ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವ ಬಾಂಧವ್ಯ ಹೊಂದಿವೆ. ಅದು ಸಂಸ್ಕೃತಿ ಇರಬಹುದು ಅಥವಾ ಸಾರ್ವಜನಿಕ ನೀತಿಗಳಿರಬಹುದು’ ಎಂದು ಅವರು ಹೇಳಿದ್ದಾರೆ.

‘ಉಭಯ ರಾಷ್ಟ್ರಗಳ ಜನರಿಗೆ ಪರಸ್ಪರ ಸಾಕಷ್ಟು ಕಲಿಕೆಯ ಅವಕಾಶ ಇವೆ. ಅಂತಹ ಒಂದು ಉದಾಹರಣೆ ಬಾಂಗ್ಲಾದೇಶ ಭವನ’ ಎಂದು ಅವರು ಹೇಳಿದ್ದಾರೆ.

ಯುವಮನಸ್ಸುಗಳನ್ನು ಪೋಷಿಸುವಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಿದ ಮೋದಿ, ‘ರವೀಂದ್ರನಾಥ ಟ್ಯಾಗೋರ್ ಅವರು ಜೀವಿಸಿದ ನೆಲದಲ್ಲಿ ಹೆಜ್ಜೆ ಇರಿಸಲು ರೋಮಾಂಚನವಾಗುತ್ತಿದೆ’ ಎಂದರು.

‘ವಿಶ್ವಭಾರತಿಯ ಆವರಣದಲ್ಲಿ ಎಲ್ಲೋ ಕುಳಿತು ಅವರು ಕವಿತೆ ರಚಿಸಿದ್ದರು, ರಾಗ ಸಂಯೋಜಿಸಿದ್ದರು, ಮಹಾತ್ಮ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದರು ಅಥವಾ ತಮ್ಮ ವಿದ್ಯಾರ್ಥಿಯೊಬ್ಬರಿಗೆ ಬೋಧಿಸುತ್ತಿದ್ದರು ಎಂದು, ಈ ವೇದಿಕೆ ಏರುವಾಗ ನಾನು ಯೋಚಿಸುತ್ತಿದ್ದೆ’ ಎಂದು ಅವರು ಹೇಳಿದರು.

ಭಾರತಕ್ಕೆ ಕೃತಜ್ಞತೆ: ಸಂಕಷ್ಟದ ಸಮಯದಲ್ಲಿ ಬೆಂಬಲಿಸಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.

‘1971ರ ಯುದ್ಧದಲ್ಲಿ ಭಾರತ ನಮ್ಮನ್ನು ಬೆಂಬಲಿಸಿದ ರೀತಿಯನ್ನು ನಾವು ಎಂದಿಗೂ ಮರೆಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಸ್ನೇಹಯುತವಾದ ಸಂಧಾನದಿಂದ ಹಲವು ದ್ವಿಪಕ್ಷೀಯ ವಿಷಯಗಳನ್ನು ಇತ್ಯರ್ಥಗೊಳಿಸಿಕೊಂಡಿದ್ದೇವೆ. ಇದರಿಂದ ಉಭಯ ರಾಷ್ಟ್ರಗಳಿಗೂ ಲಾಭವಾಗಿದೆ. ಇನ್ನೂ ಗಮನಹರಿಸಬೇಕಾದ ವಿಷಯಗಳಿದ್ದರೂ ಅವುಗಳ ಕುರಿತು ಈಗ ಮಾತನಾಡಲು ಇಚ್ಛಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ನಾವೂ ಒಂದು ಭಾಗವಾಗಿದ್ದಕ್ಕೆ ನಮಗೆ ಸಂತಸವಾಗುತ್ತಿದೆ. ವಿದ್ಯಾರ್ಥಿಗಳು, ತಜ್ಞರು ಮತ್ತು ಶಿಕ್ಷಕರಿಗೆ ಬಾಂಗ್ಲಾದೇಶ ಭವನದಿಂದ ಸಾಕಷ್ಟು ಉಪಯೋಗವಾಗಲಿದೆ’ ಎಂದು ಹಸೀನಾ ಹೇಳಿದ್ದಾರೆ.

‘ತಮ್ಮ ಸಿದ್ಧಾಂತಗಳಿಗೆ ರೂಪು ನೀಡುವ ಸಲುವಾಗಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಈ ವಿಶ್ವವಿದ್ಯಾಲಯ ಸ್ಥಾಪಿಸಿದರು. ಭಾರತ ಹಾಗೂ ಬಾಂಗ್ಲಾದೇಶಕ್ಕೆ ರಾಷ್ಟ್ರಗೀತೆ ರಚಿಸಿರುವುದರಿಂದ ಟ್ಯಾಗೋರ್ ಅವರು ಎರಡೂ ರಾಷ್ಟ್ರಗಳಿಗೆ ಸಲ್ಲುತ್ತಾರೆ’ ಎಂದು ಅವರು ಪ್ರತಿಪಾದಿಸಿದರು.

**

ಆಹಾರ ಹಂಚಿಕೆ

‘ಮಾನವೀಯತೆ ಆಧಾರದ ಮೇಲೆ ಸುಮಾರು 11 ಲಕ್ಷ ರೋಹಿಂಗ್ಯಾ ಜನರಿಗೆ ಆಶ್ರಯ ನೀಡಲಾಗಿದೆ. ನಮ್ಮ ದೇಶದ ಜನಸಂಖ್ಯೆ 16 ಕೋಟಿ ಇದೆ. ಅಗತ್ಯ ಉಂಟಾದಲ್ಲಿ ನಮ್ಮ ಆಹಾರವನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಮ್ಯಾನ್ಮಾರ್ ಸರ್ಕಾರ ಶೀಘ್ರ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಬಯಸುತ್ತೇವೆ’ ಎಂದು ಹಸೀನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT