ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳ ಒತ್ತುವರಿ ತೆರವಿಗೆ ಒತ್ತಾಯ

ಶಹಾಪುರ ಹಳೆ ಬಸ್ ನಿಲ್ದಾಣದ ಬಳಿಯ ಹಳ್ಳದಲ್ಲಿ ದುರ್ವಾಸನೆ
Last Updated 28 ಮೇ 2018, 9:11 IST
ಅಕ್ಷರ ಗಾತ್ರ

ಶಹಾಪುರ:‌ ನಗರದ ಹೃದಯಲ್ಲಿ ಭಾಗದಲ್ಲಿ ಹರಿಯುತ್ತಿರುವ ಹಳ್ಳದಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುವುದರ ಜೊತೆಯಲ್ಲಿ ಸುಲಭ ಶೌಚಾಲಯದ ಮೂಲಕ ಮೂತ್ರವನ್ನು ನೇರವಾಗಿ ಹಳ್ಳಕ್ಕೆ ಹರಿಬಿಡಲಾಗುತ್ತಿದೆ.

ಇದರಿಂದ ಅಲ್ಲಿನ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.

ದೇವಿನಗರ, ಲಕ್ಷ್ಮಿನಗರ, ಬಸವೇಶ್ವರ ನಗರ, ಕನಕ ನಗರಗಳು ಹಳ್ಳಕ್ಕೆ ಹೊಂದಿಕೊಂಡಿವೆ. ಅನಾದಿ ಕಾಲದಿಂದ ಹರಿಯುವ ಹಳ್ಳಕ್ಕೆ ರಕ್ಷಣೆ ಇಲ್ಲವಾಗಿದೆ. ಹಳ್ಳ ದಾಟಿ ಹೋಗಲು ಸೇತುವೆ ನಿರ್ಮಿಸಲಾಗಿದೆ.

‘ಬಸ್ ನಿಲ್ದಾಣದ ಹಿಂದುಗಡೆ ಪ್ರದೇಶದಲ್ಲಿ ಹಣ್ಣು ಮಾರಾಟ ಮಾಡುವ ಮಳಿಗೆ ಇವೆ. ಕೊಳೆತ ಮಾವಿನ ಹಣ್ಣು, ಬಾಳೆಹಣ್ಣನ್ನು ತಳ್ಳುವ ಗಾಡಿಯಲ್ಲಿ ತಂದು ನೇರವಾಗಿ ಹಳ್ಳಕ್ಕೆ ಎಸೆಯುತ್ತಾರೆ. ಆಗ ಅಲ್ಲಿಗೆ ಹಂದಿಗಳು ದಾಳಿ ಇಟ್ಟು ಇನ್ನಷ್ಟು ಗಲೀಜು ಮಾಡುತ್ತವೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಮನೆಯಲ್ಲಿ ಕುಳಿತುಕೊಳ್ಳಲು
ಆಗದಷ್ಟು ದುರ್ವಾಸನೆ ಬರುತ್ತದೆ. ಸಾಂಕ್ರಾಮಿಕ ರೋಗ ಆವರಿಸುವ ಆತಂಕ ನಮ್ಮಲ್ಲಿ ಕಾಡುತ್ತಿದೆ’ ಎನ್ನುತ್ತಾರೆ ಬಸವೇಶ್ವರ ನಗರದ ಬಡಾವಣೆಯ ನಿವಾಸಿ ಆರ್.ಎಂ.ಹೊನ್ನಾರಡ್ಡಿ.

ಹಳ್ಳದ ಸುತ್ತ ಜಾಲಿ ಗಿಡ ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆಯ ಹೆಚ್ಚುವರಿ ನೀರು ಇದೇ ಹಳ್ಳಕ್ಕೆ ಸೇರುತ್ತದೆ. ಹಳ್ಳವನ್ನು ಸ್ವಚ್ಛಗೊಳಿಸುವಂತೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳಲ್ಲಿ
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರಸಭೆಯಲ್ಲಿ ಎರಡು ಜೆಸಿಬಿ, ಟ್ರ್ಯಾಕ್ಟರ್‌ಗಳಿವೆ. ಗುತ್ತಿಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಯಂತ್ರಗಳ ಡಿಸೇಲ್ ಬಿಲ್ ಎಂದು ನಗರಸಭೆಯ ಪೌರಾಯುಕ್ತರು ಪ್ರತಿ ತಿಂಗಳು ಸಾವಿರಾರು ಹಣ ನಮೂದಿಸುತ್ತಾರೆ. ಆದರೆ, ಜೀವ ಸಂಕುಲಕ್ಕೆ ಮಾರಕವಾಗಿರುವ ಹಳ್ಳದ ತ್ಯಾಜ್ಯವನ್ನು ತೆಗೆಯಲು ನಗರಸಭೆ ಮುಂದಾಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಆರೋಪಿಸಿದರು.

ಮೂರು ವರ್ಷದ ಹಿಂದೆ ಹಳ್ಳವನ್ನು ಒತ್ತುವರಿ ಮಾಡಿ ಖಾಸಗಿ ಆಸ್ಪತ್ರೆ ನಿರ್ಮಿಸಲು ಬೆಸ್‌ಮೆಂಟ್ ಮಾಡಲಾಗಿತ್ತು. ಸಾರ್ವಜನಿಕ ಆಸ್ತಿಯನ್ನು ಉಳಿಸುವುದರ ಜತೆಯಲ್ಲಿ ಹಳ್ಳವನ್ನು ಸಂರಕ್ಷಣೆ ಮಾಡುವಂತೆ ಅಂದಿನ ಜಿಲ್ಲಾಧಿಕಾರಿ ಮನೋಜ್ ಜೈನ್ ನಗರಸಭೆಗೆ ಆದೇಶ ನೀಡಿದ್ದರು. ಆದರೆ, ಆದೇಶ ಇಂದಿಗೂ ಪಾಲನೆಯಾಗಿಲ್ಲ. ಒತ್ತುವರಿಯಾದ ಹಳ್ಳವನ್ನು ತೆರವುಗೊಳಿಸಬೇಕು. ಜತೆಗೆ ಮುಳ್ಳಿನ ತಂತಿ ಹಾಕಿ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು. ನಿರ್ಲಕ್ಷಿಸಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೊಲಂಪಲ್ಲಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

**
ಹಳ್ಳದ ಅಕ್ಕಪಕ್ಕದ ಮಾಂಸದಂಗಡಿಯ ಮಾಲೀಕರಿಗೆ ನೋಟಿಸು ನೀಡಿರುವೆ. ಹಳ್ಳಕ್ಕೆ ತ್ಯಾಜ್ಯ ವಸ್ತುವನ್ನು ಎಸೆಯದಂತೆ ಎಚ್ಚರಿಕೆ ನೀಡಲಾಗಿದೆ
ಹರೀಶ, ಎಂಜಿನಿಯರ್, ನಗರಸಭೆ

ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT