ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಖರ್ಚಿನಲ್ಲಿ ಮತ ಜಾಗೃತಿ: ಜವಾಬ್ದಾರಿ ಮೆರೆದ ಸೂರ್ಯನಾರಾಯಣ

ಪ್ರಜಾಪ್ರಭುತ್ವ ಹಬ್ಬ
Last Updated 17 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ತೀರ್ಥಹಳ್ಳಿ: 'ನಮ್ಮ ವೋಟು ಬರೀ ನೋಟಿಗಾಗಿ ಅಲ್ಲ.. ನಮ್ಮ ದೇಶದ ಮುನ್ನೋಟಕ್ಕಾಗಿ' ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಮತ ಚಲಾಯಿಸೋಣ. ಅರ್ಹರನ್ನು ನಮ್ಮ ಪ್ರತಿನಿಧಿಯಾಗಿ ಚುನಾಯಿಸೋಣ’ ಎಂಬ ಘೋಷಣೆಗಳನ್ನು ಮೊಳಗಿಸುವ ವಾಹನವೊಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಟ ನಡೆಸುತ್ತಿದೆ.

ಇದು ಚುನಾವಣಾ ಆಯೋಗದ ನಿಯೋಜನೆ ಮೇಲೆ ಹೊರಟ ಜನ ಜಾಗೃತಿ ವಾಹನ ಎಂದು ಭಾವಿಸಿದರೆ ತಪ್ಪಾಗುತ್ತದೆ. ಮತ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿರುವುದು ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಡುವ ಗ್ರಾಮದ ಸೂರ್ಯನಾರಾಯಣ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ವಕೀಲರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ ಅವರು ಊರಿಗೆ ವಾಪಸ್ಸಾಗಿ ಕೃಷಿ ಬದುಕನ್ನು ಅಪ್ಪಿಕೊಂಡವರು. ತಮ್ಮ ಸುತ್ತಮುತ್ತಲಿನ ಜನರಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುತ್ತಾ 'ಮತಚಲಾಯಿಸಿ ಮತ ಚಲಾಯಿಸಲು ಪ್ರೋತ್ಸಾಹಿಸಿ' ಎಂಬ ಜಾಗೃತಿ ಕೆಲಸವನ್ನು ಮಾಡುತ್ತಲೇ ಬಂದವರು.

ಜನಜಾಗೃತಿಗೆ ಜಿಲ್ಲಾಧಿಕಾರಿ ಪ್ರೇರಣೆ
ಮತಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಆಶಯವನ್ನು ಉಳಿಸಬೇಕು ಎಂಬ ಕಲ್ಪನೆ ಬಹಳ ಹಿಂದಿನಿಂದಲೂ ಇತ್ತು. ಈ ಕುರಿತು ಪ್ರಚಾರ ಮಾಡುವ ಸಲುವಾಗಿ ಅನುಮತಿ ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದೆ. ಒಬ್ಬ ಅಧಿಕಾರಿಯ ಬಳಿ ಈ ವಿಷಯ ಪ್ರಸ್ತಾಪಿಸಿದಾಗ 'ಮತ ಜಾಗೃತಿ ಮಾಡಲು ನೀವ್ಯಾರ್ರಿ..?' ಎಂದು ಪ್ರಶ್ನಿಸಿದರು.

ಇದು ನನ್ನ ಮನಸ್ಸಿಗೆ ಬಹಳ ನೋವು ತಂದಿತು. ತಕ್ಷಣ ನಾನು ಇದನ್ನು ಒಂದು ಸವಾಲಾಗಿ ಸ್ವೀಕರಿಸಿದೆ. ಕೂಡಲೇ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಸರ್ ಅವರನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದೆ. ಅವರು ಕುತೂಹಲ ಆಸಕ್ತಿ, ತಾಳ್ಮೆಯಿಂದ ನನ್ನ ವಿಚಾರಗಳನ್ನು ತಿಳಿದು ಪ್ರಚಾರ ಮಾಡಲು ಪ್ರೋತ್ಸಾಹಿಸಿದರು. ಜಾಗೃತಿ ಕೆಲಸಕ್ಕೆ ಜಿಲ್ಲಾಧಿಕಾರಿ ಪ್ರೇರಣೆ ಎಂದು ಸೂರ್ಯನಾರಾಯಣ ಹೇಳುತ್ತಾರೆ.

ಪರವಾನಗಿ ಪಡೆಯಲು ಅಲೆದಾಟ
‘ತೀರ್ಥಹಳ್ಳಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅನುಮತಿ ಪಡೆಯಲು ಒಂದು ವಾರ ಅಲೆದಾಟ ನಡೆಸಬೇಕಾಯಿತು. ಜಿಲ್ಲಾಧಿಕಾರಿ ತಾವೇ ಪೈಲು ಹಿಡಿದು, ದಾಖಲೆಗಳನ್ನು ಟೈಪ್ ಮಾಡಿಸಿ ತಕ್ಷಣ ಪರವಾನಗಿ ನೀಡಿದರು. ನಾನು ಯಾವುದೇ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ನಮ್ಮ ಸುತ್ತಲಿನ ಪರಿಸರ, ವನ್ಯಜೀವಿ, ನೀರಿನ ಮಿತ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂಬ ಮಾಹಿತಿ ನೀಡಿ ಅನುಮತಿ ಪಡೆದೆ’ ಎನ್ನುತ್ತಾರೆ ಅವರು.

ಟಾಟಾ ಏಸ್ ಗಾಡಿಯಲ್ಲಿ ಪ್ರಚಾರ
ಟಾಟಾ ಏಸ್ ಗಾಡಿಯೊಂದನ್ನು ದಿನಬಾಡಿಗೆ ಲೆಕ್ಕಾಚಾರದಲ್ಲಿ ಪಡೆದು ಅದರ ಮೇಲೆ ಮತಜಾಗೃತಿಯ ಪ್ಲೆಕ್ಸ್ ಅಳವಡಿಸಿ, ಎರಡೂ ಬದಿಯಲ್ಲಿ ವ್ಯಂಗ್ಯ ಚಿತ್ರಕಾರ ಏಕನಾಥ ಬೊಂಗಾಳೆ ಅವರ ಆಕರ್ಷಕ ವ್ಯಂಚಿತ್ರಗಳನ್ನೊಳಗೊಂಡ ವಾಹನವನ್ನು ಸಿದ್ಧಪಡಿಸಿದೆ. ತಾಲ್ಲೂಕಿನ 5 ಹೋಬಳಿಗಳಲ್ಲಿ ಪ್ರತಿ ದಿನ ಒಂದು ಹೋಬಳಿ ಆಯ್ಕೆ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದೇನೆ. ಬಾಡಿಗೆ ದಿನವೊಂದಕ್ಕೆ ₹ 3,800. ಇಬ್ಬರು ಸಹಾಯಕರಿಗೆ ₹700 ರಿಂದ 800 ಖರ್ಚಾಗುತ್ತಿದೆ. ಈ ಎಲ್ಲಾ ವೆಚ್ಚನ್ನು ನಾನೇ ಭರಿಸುತ್ತಿದ್ದೇನೆ ಎನ್ನುತ್ತಾರೆ ಅವರು.

**

ಕ್ಷಣಿಕದಲ್ಲಿ ಏನೋ ಬದಲಾವಣೆ, ಜಾಗೃತಿ ಮೂಡುತ್ತದೆ ಎಂಬ ನಿರೀಕ್ಷೆ ಇಲ್ಲ. ಇದು ಮೊದಲ ಹೆಜ್ಜೆ. ಎಲ್ಲರಲ್ಲೂ ಅರಿವು ಹೆಚ್ಚಾದಾಗ ಬದಲಾವಣೆ ಸಾಧ್ಯ.
–ಚಿಡುವ ಸೂರ್ಯನಾರಾಯಣ, ಕುಡುಮಲ್ಲಿಗೆ

ಮತದಾನ ಜಾಗೃತಿ ಯಾರಿಗೂ ಲಾಭ ತಂದು ಕೊಡುವುದಿಲ್ಲ. ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದು ಸಾಮಾನ್ಯ ವಿಚಾರವಲ್ಲ. ಇದು ಸೂರ್ಯಾನಾರಾಯಣ ಪ್ರಜಾಪ್ರಭುತ್ವ, ಸಂವಿಧಾನ, ದೇಶಕ್ಕೆ ಸಲ್ಲಿಸುವ ದೊಡ್ಡ ಗೌರವ.
–ಕೆ.ಎ.ದಯಾನಂದ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT