ಶನಿವಾರ, ಮೇ 8, 2021
22 °C
ಶಾಸಕ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ

ಶಹಾಪುರ: ಕೋವಿಡ್‌ನಿಂದ 8 ದಿನದಲ್ಲಿ 26 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೀಮರಾಯನಗುಡಿ (ಶಹಾಪುರ): ಏಪ್ರಿಲ್ 25ರಿಂದ ಮೇ 3ವರೆಗೆ ಶಹಾಪುರ ತಾಲ್ಲೂಕಿನಲ್ಲಿ 23 ಮತ್ತು ವಡಗೇರಾದಲ್ಲಿ ಮೂವರು ಸೋಂಕಿತರು ಮೃತಪಟ್ಟಿದ್ದು, ಒಟ್ಟು 26 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 1,165 ಸೋಂಕಿತರು ದಾಖಲಾಗಿದ್ದಾರೆ. ಅದರಲ್ಲಿ 803 ಜನ ಗುಣಮುಖರಾಗಿದ್ದು, ಇನ್ನೂ 343 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ಮಾಹಿತಿ ನೀಡಿದರು.

ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ನಗರದ ಸರ್ಕಾರಿ ಆಸ್ಪತ್ರೆಯ ಕೋವಿಡ್ ನಿರ್ವಹಣಾ ಕೇಂದ್ರದಲ್ಲಿ 50 ಹಾಸಿಗೆಯ ಬೆಡ್ ಕೊರೊನಾ ಸೋಂಕಿತರಿಗಾಗಿ ಸ್ಥಾಪಿಸಿದೆ. ಔಷಧಿ ಹಾಗೂ ಆಮ್ಲಜನಕದ ಕೊರತೆಯಿಲ್ಲ. 10 ವೆಂಟಿಲೇಟರ್ ಸ್ಥಾಪಿಸಿದ್ದು, ಜಿಲ್ಲಾಧಿಕಾರಿ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು.

ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಶರಣಬಸಪ್ಪ ದರ್ಶನಾಪುರ, ಜಿಲ್ಲಾಧಿಕಾರಿಗೆ ತಕ್ಷಣ ಅನುಮೋದನೆಗೆ ಮನವಿ ಮಾಡುವೆ. ನಮ್ಮಲ್ಲಿ ಸ್ಥಳೀಯವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು. ಅನವಶ್ಯಕವಾಗಿ ಬೇರೆ ಜಿಲ್ಲೆಗೆ ರೋಗಿಗಳನ್ನು ಕಳುಹಿಸಬೇಡಿ. ನಮಗೆ ಏನು ಔಷಧಿಯ ಅಗತ್ಯವಿದೆ ಎಂಬುವದನ್ನು ತಿಳಿಸಿ ಅದನ್ನು ತರಿಸಲು ಪ್ರಾಮಾಣಿಕವಾಗಿ ಯತ್ನಿಸುವೆ. ತಜ್ಞ ವೈದ್ಯರು ನಮ್ಮ ಬಳಿ ವೈದ್ಯರು ಇದ್ದಾರೆ. ವೈದ್ಯರು ದೇವರ ಕೆಲಸವೆಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ತಹಶೀಲ್ದಾರ್ ಜಗನಾಥರಡ್ಡಿ, ಪೌರಾಯುಕ್ತ ರಮೇಶ ಪಟ್ಟೆದಾರ, ಪೊಲೀಸ್ ಇನ್ಸಪೆಕ್ಟರ ಚೆನ್ನಯ್ಯ ಹಿರೇಮಠ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ಇದ್ದರು.

‘ಕೊರೊನಾ ನಿರ್ವಹಣೆ: ಸರ್ಕಾರ ವಿಫಲ’
ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿ ಕೈಚೆಲ್ಲಿದೆ. ದಿನಕೊಂದು ಆದೇಶ ನೀಡಿ ಜನತೆಯನ್ನು ಗೊಂದಲಕ್ಕೆ ಸಿಲುಕಿಸಿದೆ. ಇದು ಸರ್ಕಾರದ ವೈಫಲ್ಯದ ಸ್ಯಾಂಪಲ್ ಅಷ್ಟೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರೆಮ್‌ಡಿಸಿವಿರ್ ಔಷಧಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆಮ್ಲಜನಕ ಕೊರತೆ, ಬೆಡ್ ಸಮಸ್ಯೆ ಹೀಗೆ ಒಂದಿಲ್ಲ ಒಂದು ಸಮಸ್ಯೆ ಕಾಡುತ್ತಲಿದೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂತೆ ಆಗಿದೆ. ಔಷಧಿ ಉಳ್ಳವರ ಪಾಲಾಗಿದೆ. ಬಡವರು ದುಬಾರಿ ಬೆಲೆ ನೀಡಿ ಔಷಧಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ನಿಯಮ ಪಾಲಿಸಿ ನಮ್ಮ ಜೀವನ ಉಳಿಸಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.

ಉಪ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಆಪರೆಷನ್ ಕಮಲದಿಂದ ಹೆಚ್ಚು ದಿನ ಸರ್ಕಾರ ನಡೆಸಲು ಸಾಧ್ಯವಿಲ್ಲ. ಬೆಳಗಾವಿ ಲೋಕಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಸೋತು ಗೆದ್ದಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು