ವಿಶ್ವಾರಾಧ್ಯ ಜಗವನ್ನುದ್ಧರಿಸಿದ ಜಗದೊಡೆಯ: ಗಂಗಾಧರ ಶ್ರೀ

ಬುಧವಾರ, ಏಪ್ರಿಲ್ 24, 2019
31 °C

ವಿಶ್ವಾರಾಧ್ಯ ಜಗವನ್ನುದ್ಧರಿಸಿದ ಜಗದೊಡೆಯ: ಗಂಗಾಧರ ಶ್ರೀ

Published:
Updated:
Prajavani

ಯಾದಗಿರಿ:‘ನಾಡಿನ ಅನೇಕ ಜನ ಸಂತರಲ್ಲಿ ವಿಶ್ವಾರಾಧ್ಯರು ಈ ಜಗವನ್ನುದ್ಧರಿಸಿದ ಜಗದೊಡೆಯ ಆಗಿದ್ದಾರೆ’ ಎಂದು ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.

ಅಬ್ಬೆತುಮಕೂರಿನ ಸಿದ್ದಸಂಸ್ಥಾನ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಾರಾಧ್ಯರ ಜನ್ಮದಿನೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

‘ಸಂತರ ಪರಂಪರೆಯಲ್ಲಿ ವಿಶ್ವಾರಾಧ್ಯರು ಅಗ್ರಗಣ್ಯರಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಸಾಧಿಸಿದ ಅಧ್ಯಾತ್ಮದ ಸವಿಯನ್ನು ಈ ಲೋಕದ ಜನರಿಗೆ ಉಣಬಡಿಸಿ ಅವರ ಬಾಳನ್ನು ಬೆಳಗಿದ ಮಹಾತ್ಮರಾಗಿದ್ದಾರೆ. ಅಂತಹವರ ಭಾಗ್ಯದಿಂದ ಸಂಕಷ್ಟ ದೂರವಾಗುತ್ತದೆ’ ಎಂದರು.

‘ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಕರುಳಕುಡಿಯಾಗಿ ಜನಿಸಿದ ವಿಶ್ವಾರಾಧ್ಯರು ಪಂಡಿತ ನಗರಿ ಕಾಶಿಯಲ್ಲಿ ಅಗಾಧವಾದ ಅಧ್ಯಯನ ಮಾಡಿ ಕಾಶಿ ಘನ ಪಂಡಿತರೆಂದೇ ಖ್ಯಾತನಾಮರಾಗಿದ್ದರು. ಅವರು ಈ ನಾಡನ್ನು ಉದ್ಧರಿಸಿದ ಮಹಾಮಹಿಮರಾಗಿದ್ದಾರೆ’ ಎಂದು ಹೇಳಿದರು.

‘ಅಬ್ಬೆತುಮಕೂರು ಕ್ಷೇತ್ರಕ್ಕೆ ಲಕ್ಷಲಕ್ಷ ಭಕ್ತರು ಹರಿದುಬರುತ್ತಿರುವುದು ವಿಶ್ವಾರಾಧ್ಯರ ದಿವ್ಯ ಕೃಪಾಕಟಾಕ್ಷದ ಫಲವಾಗಿದೆ. ನಿಷ್ಠೆ, ಶ್ರದ್ಧೆಯಿಂದ ಆಗಮಿಸುವ ಎಲ್ಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಭಕ್ತರ ಕಾಮಧೇನು ಅವರಾಗಿದ್ದಾರೆ’ ಎಂದು ಹೇಳಿದರು.

ಬೆಳಿಗ್ಗೆ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ಅಬ್ಬೆತುಮಕೂರಿನ ಪ್ರಮುಖ ಬೀದಿಗಳಲ್ಲಿ ವಿಶ್ವಾರಾಧ್ಯರ ಪಲ್ಲಕ್ಕಿ ಉತ್ಸವ, ಸುಮಂಗಲೆಯರ ಕಳಸ, ಮಂಗಳವಾದ್ಯಗಳೊಂದಿಗೆ ಭಕ್ತಿಯಿಂದ ನೆರವೇರಿತು. ನಂತರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಪೀಠಾಧಿಪತಿಗಳು ಬಾಲ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.

ಜನ್ಮದಿನೋತ್ಸವದ ಕಾರ್ಯಕ್ರಮಕ್ಕೆ ವಿವಿಧ ಸೇವಾಕೈಂಕರ್ಯಗಳನ್ನು ಕೈಗೊಂಡ ದಾಸೋಹಿಗಳಿಗೆ ಪೀಠಾಧಿಪತಿಗಳು ಸತ್ಕರಿಸಿ ಆಶೀರ್ವದಿಸಿದರು. ನಂತರ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ರಾಯಚೂರಿನ ರಾಗಸಂಗಮ ಕಲಾವಿದರಾದ ಮಹಾಲಕ್ಷ್ಮೀ, ವೀರೇಂದ್ರ ಕುರಡಿ, ಅಮರೇಶ್ವರ, ಸುಧಾಕರ್ ಸುಗಮ ಸಂಗೀತ ನಡೆಸಿಕೊಟ್ಟರು.

ಚೆನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ವೆಂಕಟರೆಡ್ಡಿ ಅಬ್ಬೆತುಮಕೂರ, ನರಸಣ್ಣಗೌಡ ರಾಯಚೂರು, ಹನುಮಾನ್ ಶೇಠ್, ಬಸ್ಸುಗೌಡ ಬಿಳ್ಹಾರ, ಶಶಿಧರರೆಡ್ಡಿ ಹೊಸಳ್ಳಿ, ಬಸವರಾಜ ಶಾಸ್ತ್ರಿ ಎಲೆಕೂಡಗಿ, ಎಸ್.ಎನ್.ಮಿಂಚಿನಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !