ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಿ: ಕಂದಕೂರ

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ ಶಾಸಕ
Last Updated 18 ಡಿಸೆಂಬರ್ 2018, 14:13 IST
ಅಕ್ಷರ ಗಾತ್ರ

ಯಾದಗಿರಿ: ನೂತನ ತಾಲ್ಲೂಕು ಕೇಂದ್ರವಾಗಿರುವ ಗುರುಮಠಕಲ್‌ನಲ್ಲಿ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ಜನಸಾಮಾನ್ಯರು ತೊಂದರೆ ಪಡುತ್ತಿದ್ದು, ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಶಾಸಕ ನಾಗನಗೌಡ ಕಂದಕೂರ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೀಡಿದ ಲಿಖಿತ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ‘ಗುರುಮಠಕಲ್ ಪಟ್ಟಣದಲ್ಲಿಸರ್ಕಾರಿ ಕಚೇರಿಗಳ ಸ್ಥಾಪನೆ ಅವಶ್ಯಕತೆ ಇದ್ದರೂ, ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದರು.

‘2017–18ನೇ ಸಾಲಿನ ಆಯವ್ಯಯದಲ್ಲಿ ರಾಜ್ಯಾದ್ಯಂತ ಒಟ್ಟು 50 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದು, ಈ ತಾಲ್ಲೂಕುಗಳಲ್ಲಿ ಕಂದಾಯ ಇಲಾಖೆಯಿಂದ ಈಗಾಗಲೇ ಕಚೇರಿಗಳನ್ನು ಆರಂಭಿಸಲಾಗಿದೆ. ಇತರೆ ಇಲಾಖೆಗಳ ಕಚೇರಿಗಳನ್ನು ಹಣಕಾಸು ಇಲಾಖೆಯ ಸಹಕಾರದೊಂದಿಗೆ ಹಂತಹಂತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ದೇಶಪಾಂಡೆ ಉತ್ತರಿಸಿದರು.

ಗುರುಮಠಕಲ್‌ನ ತಾಲ್ಲೂಕಿ ಕಚೇರಿಯಲ್ಲಿ ಗ್ರೇಡ್-1 ತಹಶೀಲ್ದಾರ್ ಸೇರಿದಂತೆ ಕೆಲ ಹುದ್ದೆಗಳು ಭರ್ತಿಯಾಗಿಲ್ಲ. ಅದರ ಜತೆಯಲ್ಲಿ ತಹಶೀಲ್ದಾರರಿಗೆ ಸರ್ಕಾರದಿಂದ ವಾಹನವನ್ನು ನೀಡಿಲ್ಲ ಎಂದು ಶಾಸಕ ಕಂದಕೂರ ಸರ್ಕಾರದ ಗಮನ ಸೆಳೆದರು.

‘ಗುರುಮಠಕಲ್‌ನ ತಾಲ್ಲೂಕು ಕಚೇರಿಯಲ್ಲಿ ಒಟ್ಟು ಮಂಜೂರಾದ 16 ಹುದ್ದೆಗಳ ಪೈಕಿ ಮೂರು ಹುದ್ದೆಗಳು ಭರ್ತಿ ಮಾಡಿಕೊಳ್ಳಲಾಗಿದ್ದು, 13 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು. ಅಲ್ಲದೆ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿರುವ ತಹಶೀಲ್ದಾರರಿಗೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿರುವ ಸರ್ಕಾರಿ ವಾಹನ ಒದಗಿಸಲಾಗಿದೆ. ಇದರ ಜತೆಯಲ್ಲಿ ಕಚೇರಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ₹15 ಅನುದಾನ ಬಿಡುಗಡೆಗೊಳಿಸಲಾಗಿದೆ’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT