ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಜಿಲ್ಲಾ ಮೋಟಾರ್‌ ಡ್ರೈವಿಂಗ್ ಸ್ಕೂಲ್‌ ಮಾಲಿಕರ ಅಸೋಸಿಯೇಷನ್‌ ಉದ್ಘಾಟನೆ

ಸಂಚಾರ ನಿಯಮ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಡ್ರೈವಿಂಗ್‌ ಶಾಲೆಯ ಮಾಲೀಕರು ತಾವು ಸಂಚಾರ ನಿಯಮಗಳನ್ನು ತಿಳಿದುಕೊಂಡು ಚಾಲನೆಗೆ ಬರುವವರಿಗೆ ಕಡ್ಡಾಯವಾಗಿ ತಿಳಿವಳಿಕೆ ನೀಡಬೇಕು' ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮೋಟಾರ್‌ ಡ್ರೈವಿಂಗ್ ಸ್ಕೂಲ್‌ ಮಾಲಿಕರ ಅಸೋಸಿಯೇಷನ್‌ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಿಯಮಗಳು ಗೊತ್ತಿಲ್ಲದಿದ್ದರೆ ಹಲವಾರು ಜನರ ಪ್ರಾಣಕ್ಕೆ ಕಂಟಕವಾಗುತ್ತದೆ. ಇದರಿಂದ ಕುಟುಂಬಗಳು ಅನಾಥವಾಗುತ್ತವೆ. ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ. ದೂರುಗಳಿಗೆ ಆಸ್ಪದೆ ಕೊಡದೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಮೆಹಬೂಬ್‌ ಅಲಿ ಮಾತನಾಡಿ, ‘ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ 13 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದಾರೆ. ಇದರಲ್ಲಿ 7 ಜನರಿಗೆ ವಿಮೆ ಇಲ್ಲ. 4 ಜನರಿಗೆ ಚಾಲನಾ ಪರವಾನಗಿ ಇಲ್ಲ. ಇದರಿಂದ ಎಲ್ಲ ಚಾಲಕರಿಗೆ ಜಾಗೃತಿ ಮೂಡಿಸಬೇಕು. ವಿಮೆ ಮಾಡಿಸದಿದ್ದರೆ ಆಸ್ತಿ ಜಪ್ತಿ ಮಾಡಿ ಪರಿಹಾರ ಕೊಡಿಸಲು ಅವಕಾಶವಿದೆ. ಹೀಗಾಗಿ ಎಲ್ಲರೂ ಸೂಕ್ತ ದಾಖಲಾತಿ ಪಡೆದು ಚಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಮೋಟಾರ್‌ ಡ್ರೈವಿಂಗ್ ಸ್ಕೂಲ್‌ ಮಾಲಿಕರ ಅಸೋಸಿಯೇಷನ್‌ ಅಧ್ಯಕ್ಷ ಯಲ್ಲಪ್ಪ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಚಾಲನೆ ಕಲಿಯಲು ಬಂದವರಿಗೆ ತಿಳಿಸಬೇಕಿದೆ. ಅಲ್ಲದೇ ಚಾಲನಾ ಪರವಾನಗಿ ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ’ ಎಂದು ಚಾಲಕರಿಗೆ ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದೂಧರ ಸಿನ್ನೂರ ಡ್ರೈವಿಂಗ್‌ ಶಾಲೆಯ ಮಾಲೀಕರು ಕಲಿಕೆಗೆ ಬರುವವರಿಗೆ ಸಂಚಾರ ನಿಮಯಗಳನ್ನು ತಿಳಿಸಿ ಚಾಲನೆ ಕಲಿಸಿಕೊಡಬೇಕು ಎಂದರು.

ಸಿಎಂಡಿಎಸ್‌ ಮಾಲಿಕ ಶಂಕರ ಸಿಂಘೆ, ಶಿವಸಾಯಿ ಡ್ರೈವಿಂಗ್‌ ಸ್ಕೂಲ್‌ ಮಾಲಿಕ ನರಸಯ್ಯ ಕಲಾಲ, ಡ್ರೈವಿಂಗ್ ಸ್ಕೂಲ್‌ ಸಹಕಾರ್ಯದರ್ಶಿ ಬಸಯ್ಯ ಸ್ವಾಮಿ, ಉಪಾಧ್ಯಕ್ಷ ಬುಬೇರ್‌ ಹೈಮದ್‌, ಪ‍್ರಧಾನ ಕಾರ್ಯದರ್ಶಿ ತಿಪ್ಪಣ್ಣ ನಾಯ್ಕೋಡಿ, ಇರ್ಫಾನ್‌ ಪಟೇಲ್‌ ಸೇರಿದಂತೆ ಹಲವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.