ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲಿ ಕೃಷಿ ಖುಷಿ; ಮೂರು ಎಕರೆಯಲ್ಲಿ ವೈವಿಧ್ಯಮಯ ಬೆಳೆ

ಲಕ್ನೋ –49, ತೈವಾನ್‌ ಪಿಂಕ್‌ ಪೇರಳೆ, ಗುರುಸಣಗಿಯಲ್ಲಿ ಡ್ರ್ಯಾಗನ್‌ ಹಣ್ಣು ಘಮ
Last Updated 23 ಅಕ್ಟೋಬರ್ 2021, 5:10 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲೊಬ್ಬ ರೈತ ತಮ್ಮ ಮೂರು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಹತ್ತಾರು ಬೆಳೆಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ವಡಗೇರಾ ತಾಲ್ಲೂಕಿನ ಗುರುಸುಣಗಿ ಗ್ರಾಮದ ಪ್ರಗತಿ ಪರ ರೈತ ಸೋಮನಾಥರೆಡ್ಡಿ ಸಂಗಾರೆಡ್ಡಿ ಡ್ರ್ಯಾಗನ್‌ ಹಣ್ಣು ಬೆಳೆದು ಉತ್ತಮ ಫಸಲು ಬರುವ ನಿರೀಕ್ಷೆ ಹೊಂದಿದ್ದಾರೆ.

ಎಕರೆ 3, ಬೆಳೆ ಹತ್ತಾರು: ಸೋಮನಾಥರೆಡ್ಡಿ ತಮ್ಮ ಮೂರು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆದಿದ್ದಾರೆ. ಲಕ್ನೋ –49, ತೈವಾನ್‌ ಪಿಂಕ್‌ ಪೇರಳೆ–280 ಗಿಡ, ಕೆಂಪು, ಹಸಿರು ಚೆಂಡು ಹೂವು 20, ಜಂಬೂ ನೇರಳೆ ಹಣ್ಣು 2, ಮಾವಿನ ಹಣ್ಣು 2, ನುಗ್ಗೆಕಾಯಿ 5, ತೆಂಗು 10, ಸಾಗುವಾನಿ 50, ಶ್ರೀಗಂಧ ಮರ 5, ಬೀಜ ರಹಿತ ನಿಂಬೆ –5, ಬೀಜ ಸಹಿತ ನಿಂಬೆಹಣ್ಣು 5, ಸೊರೆಕಾಯಿ, ಹೀರೆಕಾಯಿ ಬೆಳೆಸಿದ್ದಾರೆ.

ಪೇರಳೆ ಹಣ್ಣಿನ ಸಸಿಗಳನ್ನು ತೆಲಾಂಗಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಿಂದ ತರಿಸಿದ್ದಾರೆ. ಲಕ್ನೋ–49 ಪೇರಳೆ ದೊಡ್ಡ ಗಾತ್ರದಲ್ಲಿ ಬೆಳೆಯುತ್ತದೆ. ತೈವಾನ್‌ ಪಿಂಕ್ ಚಿಕ್ಕ ಗಾತ್ರದಲ್ಲಿದ್ದರೆ ತಿರುಳು ಕೆಂಪು ಬಣ್ಣ ಹೊಂದಿರುತ್ತವೆ. ಇದಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಎರಡು ವಿಧಧ ಪೇರಳೆ ಬೆಳೆದಿದ್ದಾರೆ.

ಸಂಬಂಧಿಕರಿಗೆ ದಾನ: ತೋಟಕ್ಕೆ ತೆರಳಿದ ಸಂಬಂಧಿಕರಿಗೆ, ಸ್ನೇಹಿತರಿಗೆ ಹೀಗೆ ಒಂದು ಕ್ವಿಂಟಲ್‌ ಆಗುವಷ್ಟು ಪೇರಳೆ ಹಣ್ಣಾಗುತ್ತಿದಂತೆ ವಿತರಣೆ ಮಾಡಿದ್ದಾರೆ. ಇನ್ನು ಮುಂದೆ ಹಣ್ಣುಗಳನ್ನು ಮಾರಾಟ ಮಾಡಲಾಗುವುದು ಎಂದು ರೈತ ಹೇಳುತ್ತಾರೆ.

‘ಜಮೀನು ನೋಡಲು ಬಂದವರಿಗೆ, ಕೂಲಿ ಕೆಲಸ ಮಾಡುವವರು ಸೇರಿದಂತೆ ಬಂಧು ಬಳಗಕ್ಕೆ ಪೇರಳೆ ಹಣ್ಣು ವಿತರಿಸಿದ್ದೇನೆ. ಮುಂದಿನ ಫಸಲಿನಿಂದ ಮಾರಾಟ ಮಾಡಲಾಗುವುದು. ತೋಟದಲ್ಲಿ ಸದ್ಯಕ್ಕೆ ಗಳಿಕೆ ಮಾಡುವುದನ್ನು ನೋಡುತ್ತಿಲ್ಲ. ಫಸಲು ಹೆಚ್ಚು ಬಂದರೆ ಮಾರುಕಟ್ಟೆಗೆ ಸುಲಭವಾಗುತ್ತದೆ’ ಎನ್ನುತ್ತಾರೆ ರೈತ ಸೋಮನಾಥರೆಡ್ಡಿ ಸಂಗಾರೆಡ್ಡಿ ಅವರು.

ಡ್ರ್ಯಾಗನ್ ಹಣ್ಣುಗೆ ₹6 ಲಕ್ಷ ಖರ್ಚು: ರೈತ ಸೋಮನಾಥರೆಡ್ಡಿ ಡ್ರ್ಯಾಗನ್ ಹಣ್ಣು ಬೆಳೆಯಲು ₹6 ಲಕ್ಷ ಖರ್ಚು ಮಾಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾದಿಂದ ಡ್ರ್ಯಾಗನ್ ಹಣ್ಣು ಸಸಿಗಳನ್ನು ತರಿಸಿದ್ದಾರೆ. ಒಂದು ಸಿಮೆಂಟ್‌ ಕಂಬಕ್ಕೆ ನಾಲ್ಕು ಸಸಿಗಳಂತೆ ನಾಟಿ ಮಾಡಿದ್ದಾರೆ. ಜೂನ್‌ 22ರಂದು ನಾಟಿ ಮಾಡಿದ್ದು, ಒಂದು ವರ್ಷದಲ್ಲಿ ಫಸಲು ಬರಲು ಆರಂಭಿಸುತ್ತದೆ.

ಒಂದು ಎಕರೆಯಲ್ಲಿ 600 ಕಂಬಗಳನ್ನು ನೆಟ್ಟಿದ್ದು, 2,400 ಸಸಿಗಳನ್ನು ಕಂಬಗಳ ಆಸರೆಯಲ್ಲಿ ನಾಟಿ ಮಾಡಲಾಗಿದೆ. ನಾಲ್ಕೇ ತಿಂಗಳಲ್ಲೇ ಫಸಲು ಉತ್ತಮವಾಗಿ ಬೆಳೆದು ನಿಂತಿದೆ.

ಡ್ರ್ಯಾಗನ್ ಹಣ್ಣಿನಲ್ಲಿ ಎರಡು ವಿಧಗಳಿದ್ದು, ಪಿಂಕ್‌ ಬಣ್ಣದ ಹಣ್ಣಿಗೆ ಬೇಡಿಕೆ ಮತ್ತು ದರವಿದೆ. ಬಿಳಿ ಬಣ್ಣಕ್ಕೆ ಹೆಚ್ಚು ಬೇಡಿಕೆ ಇಲ್ಲ. ಹೀಗಾಗಿ ಸೋಮನಾಥರೆಡ್ಡಿ ಪಿಂಕ್‌ ಬಣ್ಣದ ಹಣ್ಣು ನಾಟಿ ಮಾಡಿದ್ದಾರೆ.

ಕುಟುಂಬಸ್ಥರು ಭಾಗಿ: ಮೂರು ಎಕರೆಯಲ್ಲಿ ಒಂದು ಎಕರೆಯಲ್ಲಿ ಪೇರಳೆ, ಚೆಂಡು ಹೂ, ಒಂದು ಎಕರೆಯಲ್ಲಿ ಡ್ರ್ಯಾಗನ್‌ ಹಣ್ಣು, ಮತ್ತೊಂದು ಎಕರೆಯಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಲಾಗಿದೆ.

ಸೋಮನಾಥರೆಡ್ಡಿ ದಂಪತಿ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಜಮೀನನಲ್ಲಿ ಕೆಲಸ ಮಾಡುತ್ತಿದ್ದು, ಖರ್ಚು ವೆಚ್ಚಿನ ಭಾರ ಕಡಿಮೆಯಾಗಿದೆ.

ಒಂದು ಕೊಳವೆಬಾವಿ ಕೊರೆಸಲಾಗಿದ್ದು, 2 ಇಂಚು ನೀರು ಬರುತ್ತಿದೆ. ನೀರಿನ ಕೊರತೆ ಇಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ವಿದ್ಯುತ್‌ ಇದ್ದರೆ ನೀರು ಹರಿಸಲು ಸಮಸ್ಯೆ ಇಲ್ಲ.

ಜಮೀನಲ್ಲಿಯೇ ಶೆಡ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಕುರಿ ಸಾಕಣೆಯೂ ಮಾಡಿದ್ದು, ನಷ್ಟವಾಗಿದ್ದರಿಂದ ಈಗ ಕೈಬಿಟ್ಟಿದ್ದಾರೆ. ಅಲ್ಲದೇ ಈಗ ಒಂದು ಹಸು, ಒಂದು ಎಮ್ಮೆ ಇದೆ. ಕೊಟ್ಟಿಗೆ ಗೊಬ್ಬರ, ಗಂಜಲವನ್ನು ನೇರವಾಗಿ ಜಮೀನಿಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ. ಒಟ್ಟಾರೆ ಮೂರು ಎಕರೆಯಲ್ಲಿ ಸಮಗ್ರ ಕೃಷಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

***

ಜಿಲ್ಲೆಯಲ್ಲಿಡ್ರ್ಯಾಗನ್ ಹಣ್ಣು ಘಮ!

ಜಿಲ್ಲೆಯ ರೈತರು ವಿವಿಧ ತಾಲ್ಲೂಕುಗಳಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯಲು ಆರಂಭಿಸಿದ್ದು, ಹತ್ತಾರು ಕಡೆ ಹಣ್ಣಿನ ಘಮ ಪಸರಿಸುತ್ತಿದೆ.ಯಾದಗಿರಿ, ವಡಗೇರಾ ತಾಲ್ಲೂಕಿನ ತಲಾ ಒಬ್ಬ ರೈತರು, ಶಹಾಪುರ ತಾಲ್ಲೂಕಿನಲ್ಲಿ ಇಬ್ಬರು ರೈತರು, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 5 ರೈತರುಡ್ರ್ಯಾಗನ್ ಹಣ್ಣು ಬೆಳೆಯುತ್ತಿದ್ದಾರೆ.

***

ಹಿಂದೆ ಶೇಂಗಾ, ತೊಗರಿ, ಹತ್ತಿ ಬೆಳೆ ಲಾಭ ಆಗಲಿಲ್ಲ. ಕಾರ್ಮಿಕರ ಕೊರತೆ ಇತ್ತು. ಈಗ ಹತ್ತಾರು ಬೆಳೆದಿದ್ದು, ಒಂದರಲ್ಲಿ ನಷ್ಟವಾದರೂ ಮತ್ತೊಂದು ಬೆಳೆ ಕೈಹಿಡಿಯಲಿದೆ

- ಸೋಮನಾಥರೆಡ್ಡಿ ಸಂಗಾರೆಡ್ಡಿ, ಪ್ರಗತಿಪರ ರೈತ

****

ಮಳೆಗಾಲದಲ್ಲಿ ಕಳೆ ಜಾಸ್ತಿ ಇತ್ತು. ಆಗ ಮಾತ್ರ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಈಗ ಮನೆಯವರೇ ಜಮೀನನಲ್ಲಿ ಕೆಲಸ ಮಾಡುತ್ತೇವೆ

- ಸಾಹೇಬಗೌಡ ಸೋಮನಾಥರೆಡ್ಡಿ, ರೈತ

***

ರೈತರು ಒಂದೇ ಬೆಳೆ ಹಾಕಿ ನಷ್ಟ ಹೊಂದುವುದಕ್ಕಿಂತ ವೈವಿಧ್ಯಮಯ ಸಮಗ್ರ ಬೇಸಾಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಆಗ ರೈತರಿಗೆ ಅನುಭವದ ಜೊತೆಗೆ ಆದಾಯವೂ ಬರುತ್ತದೆ

- ಸುಭಾಷ ಐಕೂರು, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT