ಶುಕ್ರವಾರ, ಜೂನ್ 5, 2020
27 °C

ಉತ್ತಿ – ಬಿತ್ತುವ ಅಯ್ಯಮ್ಮ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ 40 ವರ್ಷದಿಂದ ಪುರುಷರಿಗೆ ಸರಿಸಮಾನವಾಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಅಯ್ಯಮ್ಮ ಗಮನ ಸೆಳೆಯುತ್ತಿದ್ದಾರೆ.

‘ನನ್ನ ಅಣ್ಣನ ನಿಧನ ನಂತರ ಕೃಷಿ ಕೆಲಸ ಹೆಗಲಿಗೆ ಬಿತ್ತು. ಅಣ್ಣನ ಇಬ್ಬರು ಮಕ್ಕಳು ಸಣ್ಣ ಪ್ರಾಯದವರು ಇದ್ದರು. ಹೀಗಾಗಿ ಅವರಿಂದ ಕೃಷಿ ಕೆಲಸ ಮಾಡಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಾನೇ ಕೃಷಿ ಮಾಡಿಕೊಂಡು ಬಂದಿದ್ದೇನೆ’ ಎನ್ನುತ್ತಾರೆ 60 ವರ್ಷದ ಅಯ್ಯಮ್ಮ ಅಬ್ಬೆತುಮಕೂರು.

ಬಿತ್ತನೆ ಬೀಜದಿಂದ ಹಿಡಿದು ಮನೆಗೆ ಫಸಲಿನ ಚೀಲ ಬರುವವರೆಗೆ ಇವರದೇ ಉಸ್ತುವಾರಿ. ಊರಿನವರು ಮೊದಲು ಹೇಗೆ ಇದನ್ನೆಲ್ಲ ಅಯ್ಯಮ್ಮ ಮಾಡುತ್ತಾರೆ ಎಂದು ಆಶ್ಚರ್ಯಪಟ್ಟಿದ್ದರು. ಬರುಬರುತ್ತಾ ಎಲ್ಲ ಕೆಲಸ ಮಾಡುವುದನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ಅಯ್ಯಮ್ಮ ಎಲ್ಲ ಬಗೆಯ ಕೃಷಿ ಚಟುವಟಿಕೆ, ಉಳುಮೆ–ಬಿತ್ತನೆಯ ಕೆಲಸ ಮಾಡುತ್ತಾರೆ. 

15ರಿಂದ 16ನೇ ವಯಸ್ಸಿನಲ್ಲಿ ಕೃಷಿ ಕೆಲಸ ಆರಂಭಿಸಿದ್ದಾರೆ. ಅಣ್ಣ ಮರಿಲಿಂಗಪ್ಪ ನಿಧನದ ನಂತರ ಒಕ್ಕಲುತನ ಬಿಡಬಾರದು ಎನ್ನುವ ಕಾರಣಕ್ಕೆ ಕೃಷಿ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಂಗಿ ಮಲ್ಲಮ್ಮ ಅವರನ್ನು ಮೊದಂಪುರಕ್ಕೆ ಮದುವೆ ಮಾಡಿಕೊಡಲಾಗಿದೆ. ಅಯ್ಯಮ್ಮ ಅವರದ್ದು ಬಾಲ್ಯ ವಿವಾಹ. ಹೀಗಾಗಿ ಪತಿ ಮನೆಗೆ ತೆರಳದೆ ತವರು ಮನೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.

‘6 ಎಕರೆ ಜಮೀನು ಇದೆ. ಇದರಲ್ಲಿ ಹತ್ತಿ, ಜೋಳ, ಶೇಂಗಾ, ಭತ್ತ, ಹೆಸರು ಬಿತ್ತನೆ ಮಾಡಲಾಗುತ್ತಿದೆ. ಈಗ ವಯಸ್ಸಾಗಿದ್ದರಿಂದ ಅಣ್ಣನ ಮಕ್ಕಳು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ನಾನು ಕೃಷಿ ಮಾಡುವುದನ್ನು ಬಿಟ್ಟಿಲ್ಲ’ ಎನ್ನುತ್ತಾರೆ
ಅವರು.

‘ಪುರುಷರು ಮಾಡುವ ಕೆಲಸಗಳನ್ನು ನಮ್ಮ ಅತ್ತೆ ಮಾಡುತ್ತಿದ್ದಾರೆ. ಅವರ ಬೆಂಬಲವಾಗಿ ನಾವಿದ್ದೇವೆ, ನಾವು ಸಣ್ಣವರು ಇದ್ದಾಗ ತಂದೆಯಂತೆಯೇ ಕೆಲಸ ಮಾಡಿದ್ದರು’ ಎಂದು ಅಭಿಮಾನದಿಂದ ಹೇಳುತ್ತಾರೆ ಅಳಿಯ ಮರಿಯಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು