ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ ಆಹಾರ, ಚುರುಕಿನ ಪ್ರಚಾರ

ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ವಿನಯ ಕುಲಕರ್ಣಿ
Last Updated 29 ಏಪ್ರಿಲ್ 2018, 10:24 IST
ಅಕ್ಷರ ಗಾತ್ರ

ಧಾರವಾಡ: ಚುನಾವಣೆ ಪ್ರಚಾರದ ಬಿಡುವಿಲ್ಲದ ಓಡಾಟದ ನಡುವೆಯೂ ಒಮ್ಮೆಯಾದರೂ ಡೇರಿಗೆ ಭೇಟಿ ನೀಡಿ ಅಲ್ಲಿನ ಆಗುಹೋಗುಗಳ ಪರಿಶೀಲನೆ, ಮುಂಜಾನೆಯೇ ಮನೆಗೆ ಬರುವ ಕ್ಷೇತ್ರದ ಜನರೊಂದಿಗೆ ಮಾತುಕತೆ, ಮಿತ ಆಹಾರ ಸೇವನೆ, ವೇಗದ ನಡಿಗೆ ಮೂಲಕ ಹೆಚ್ಚು ಜನರನ್ನು ಸಂಪರ್ಕಿಸುವ ಗುರಿ... ಇವಿಷ್ಟು ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ದಿನಚರಿ.

ಚುನಾವಣೆ ರಣತಂತ್ರದ ಕಾರ್ಯಯೋಜನೆಗಳ ಕುರಿತು ಕಾರ್ಯಕರ್ತರು, ಬೆಂಬಲಿಗರೊಂದಿಗೆ ತಡರಾತ್ರಿಯವರೆಗೂ ಸಭೆ ನಡೆಸಿದ್ದ ವಿನಯ ಕುಲಕರ್ಣಿ ಶನಿವಾರ ಬೆಳಿಗ್ಗೆ 7ಕ್ಕೆ ಎದ್ದರು. ಮುಖ ತೊಳೆದು ಪತ್ನಿ ಶಿವಲೀಲಾ ಕುಲಕರ್ಣಿ ಅವರು ನೀಡಿದ ನೀರು ಹಾಗೂ ಬಿಸಿ ರಾಗಿ ಗಂಜಿ ಸೇವಿಸಿದರು. ನಂತರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕಾಂಗ್ರೆಸ್ ಪ್ರಣಾಳಿಕೆಯ ಸುದ್ದಿಗಳತ್ತ ಕಣ್ಣಾಡಿಸಿದರು. ತಡಮಾಡದೆ ಸ್ನಾನ, ಪೂಜೆ ಇತ್ಯಾದಿಗಳನ್ನು ಮುಗಿಸಿದರು.

ಎರಡು ಚಪಾತಿ, ಬೇಳೆ ಪಲ್ಯ, ಚಟ್ನಿ ಮತ್ತು ತಮ್ಮದೇ ಡೇರಿಯ ಗಟ್ಟಿ ಮೊಸರು ಹಾಕಿಕೊಂಡು ಉಪಾಹಾರ ಮುಗಿಸಿದರು. ಅಲ್ಲಿಯೇ ಟೇಬಲ್‌ ಮೇಲಿದ್ದ ಬೇಸನ್ ಉಂಡೆ, ರವೆ ಉಂಡೆ, ಜುಣಕಾ, ಕರ್ಜಿಕಾಯಿ, ಮಿಲ್ಕ್‌ಶೇಕ್ ಇತ್ಯಾದಿಗಳನ್ನು ಸೇವಿಸಲಿಲ್ಲ. ಉಪಾಹಾರ ಸೇವಿಸುತ್ತ, ‘ಕಾಂಗ್ರೆಸ್ ಪ್ರಣಾಳಿಕೆ ಉತ್ತಮವಾಗಿದೆ. ಜಿಲ್ಲೆಗೂ ಸಾಕಷ್ಟು ಕೊಡುಗೆಗಳಿವೆ. ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ’ ಎಂದರು.

‘ಪತ್ನಿ ಶಿವಲೀಲಾ ಹಾಗೂ ತಮ್ಮ ಆಪ್ತ ಸಹಾಯಕ ಪ್ರಶಾಂತ ಕೇಕರೆ ಜತೆ ಕೆಲಕಾಲ ಸಮಾಲೋಚನೆ ನಡೆಸಿ, ಕ್ಷೇತ್ರ ಪ್ರಚಾರಕ್ಕೆ ಹೊರಟರು. ಬಿಸಿಲ ತಾಪದಿಂದ ಬಳಲಿಕೆಯಾಗದಿರಲಿ ಎಂದು ದೊಡ್ಡ ಕ್ಯಾನ್‌ನಲ್ಲಿ ಅವರಿಗಾಗಿ ಮಜ್ಜಿಗೆ ಸಿದ್ಧಗೊಂಡಿತು. ಒಂದಷ್ಟು ಹಾರಗಳು, ಟೊಪ್ಪಿಗೆ, ಶಾಲು ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿನಯ ಅವರ ಫೋರ್ಡ್‌ ಎಂಡವರ್‌ ಕಾರಿಗೆ ಸಹಾಯಕರು ಹಾಕಿದರು.

ಅವರಿಗಾಗಿ ಕಾದಿದ್ದ ಹತ್ತಾರು ಜನರೊಂದಿಗೆ ಮಾತನಾಡಿ, ವಾಹನ ಏರಿದ ಅವರು, ಇನ್ನೊಂದು ವಾಹನ
ದಲ್ಲಿ ಬೆಂಬಲಿಗರಿಗೆ ಕೂಡಲು ಹೇಳಿ ಯಾದವಾಡ ಗ್ರಾಮದತ್ತ ಹೊರಟರು. ದಾರಿ ಮಧ್ಯದಲ್ಲಿ ಲಕಮಾಪುರ ಬಳಿ ಕರಿಯಮ್ಮದೇವಿ ದೇವಸ್ಥಾನದ ಬಳಿ ನಿಲ್ಲಿಸಿ ಪೂಜೆ ಸಲ್ಲಿಸಿದರು. ಅಲ್ಲೇ ಇದ್ದ ಅವರ ಅಭಿಮಾನಿ 7ನೇ ತರಗತಿ ಪೋರ ಉಪ್ಪಿನಬೆಟಗೇರಿಯ ವಿನಯ ಎಂಬಾತ, ಅವರಿಗೆ ಜಯಘೋಷ ಹಾಕಿದ.

ಬಾಲಕನಿಗೆ ಮೆಚ್ಚುಗೆಯ ಅಭಿನಂದನೆ ಸಲ್ಲಿಸಿದ ಅವರು, ದಾರಿಯಲ್ಲಿ ಭೇಟಿಯಾದ ಪ್ರತಿಯೊಬ್ಬರಿಗೂ ಮತ ಹಾಕುವಂತೆ ವಿನಂತಿಸಿದರು. ಜನರಿದ್ದೆಡೆ ಅಲ್ಲಲ್ಲಿ ನಿಲ್ಲಿಸಿ, ಅವರಿಗೆ ಕೈ ಮಾಡಿ ಕುಶಲೋಪರಿ ವಿಚಾರಿಸಿದರು. ಅವರ ಕಾರು ಬರುತ್ತಿದ್ದಂತೆಯೇ ಯುವಕರ ಗುಂಪು ‘ಬಾಸ್‌, ಬಾಸ್‌ ವಿಕೆ ಬಾಸ್‌’ ಎಂದು ಜಯಘೋಷ ಮೊಳಗಿಸುತ್ತಿದ್ದ ದೃಶ್ಯ ಕಂಡುಬಂತು.

ಅಲ್ಲಲ್ಲಿ ಕ್ಷೇತ್ರದ ಕುರಿತು ಕಾರ್ಯಕರ್ತರು ಮಾಹಿತಿ ಒದಗಿಸುತ್ತಿದ್ದರು. ಪ್ರಮೋದ್ ಮಧ್ವರಾಜ್ ಕರೆ ಮಾಡಿ, ಪ್ರಚಾರ ಕಾರ್ಯಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಪ್ರಚಾರದ ಭರಾಟೆಯ ನಡುವೆಯೂ ಪಕ್ಷದ ನಾಯಕರ, ಕ್ಷೇತ್ರದ ಮುಖಂಡರ, ಕಾರ್ಯಕರ್ತದ ಕರೆಗಳಿಗೂ ಉತ್ತರಿಸುತ್ತಿದ್ದರು. ಕೆಲವು ಕರೆಗಳಿಗೆ ಸಹಾಯಕರೇ ಉತ್ತರಿಸುತ್ತಿದ್ದರು.

ಯಾದವಾಡ ಪ್ರವೇಶಕ್ಕೂ ಮುನ್ನ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಿಜೆಪಿಯಲ್ಲಿದ್ದ ಮಂಜುಳಾ ಕೇಶಗುಂಡ ಅವರ ಮನೆಗೆ ಭೇಟಿ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಅಲ್ಲೇ ಇದ್ದ ಮುಸ್ಲಿಂ ಕುಟುಂಬ ಮಾಬವ್ವ ಅವರ ಮನೆಗೆ ಭೇಟಿ ನೀಡಿ, ನೀರು ಕುಡಿದು ಕುಶಲೋಪರಿ ವಿಚಾರಿ, ಮತಯಾಚಿಸಿದರು. ಹೀಗೆ, ಮನೆಯಿಂದ ಮನೆಗೆ ಹೊರಟರು. ವೇಗವಾಗಿ ನಡೆಯುತ್ತಿದ್ದ ಅವರ ಹಿಂದೆ ಬೆಂಬಲಿಗರು ಘೋಷಣೆ ಕೂಗುತ್ತಾ ಓಡುತ್ತಿದ್ದರು. ಪ್ರತಿ ಮನೆಗೂ ಭೇಟಿ ನೀಡಿ ಕೈಮುಗಿದ ಮನವಿ ಮಾಡುತ್ತಿದ್ದರು.

ಮಧ್ಯಾಹ್ನದ ಹೊತ್ತಿಗೆ ಕಾರು ಏರಿ ಸ್ವಲ್ಪ ಮಜ್ಜಿಗೆ ಸೇವಿಸಿದ ಅವರು, ಮತ್ತೆ ಮುಂದಿನ ಬೀದಿಯ ಕಡೆಗೆ ಮುಖ ಮಾಡಿದರು. ಸಂಜೆಯಾಗುತ್ತಲೇ ಮನೆಗೆ ಬಂದ ಅವರು, ಬಟ್ಟೆ ಬದಲಾಯಿಸಿ ನೇರವಾಗಿ ಡೇರಿಗೆ ಹೋದರು. ದಿನವಿಡೀ ಬಿಸಿಲಿನಲ್ಲಿ ಓಡಾಡಿದ್ದ ಅವರು, ಅಲ್ಲಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದರು. ಅಲ್ಲಿಗೆ ಕೆಲ ಬೆಂಬಲಿಗರು ಹಾಗೂ ಕಾರ್ಯಕರ್ತರು ಭೇಟಿ ನೀಡಿ, ತಾವು ಮಾಡಿದ ಪ್ರಚಾರದ ಮಾಹಿತಿ ನೀಡಿದರು. ಭಾನುವಾರದ ಕ್ಷೇತ್ರ ಪ್ರವಾಸದ ಪಟ್ಟಿಯೂ ಅಲ್ಲಿಯೇ ಸಿದ್ಧಗೊಂಡಿತು.

‘ನಿತ್ಯ ಮುಂಜಾನೆ ಡೇರಿಗೆ ಹೋಗುವುದು ನನ್ನ ಅಭ್ಯಾಸ. ಆದರೆ, ಚುನಾವಣೆ ಇರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಜೆ ಹೋಗುತ್ತೇನೆ. ಅಲ್ಲಿನ ಆಗುಹೋಗುಗಳನ್ನು ಒಮ್ಮೆ ವಿಚಾರಿಸದಿದ್ದರೆ, ನನಗೆ ಸಮಾಧಾನ ಆಗುವುದಿಲ್ಲ. ಹಾಗೆಯೇ ಮನೆಗೂ ನಿತ್ಯ ಹತ್ತಾರು ಮಂದಿ ಅವರ ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಸಂಘ, ಸಂಸ್ಥೆಯವರೂ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಬರುತ್ತಾರೆ. ಅವರನ್ನು ಭೇಟಿಯಾಗಿ ವಿಚಾರಿಸಲೇಬೇಕು. ಇವುಗಳ ನಡುವೆಯೇ ಪ್ರಚಾರ ಮಾಡುತ್ತಿದ್ದೇನೆ. ಹೀಗಾಗಿ, ದಿನಕ್ಕೆ 4 ಗಂಟೆ ನಿದ್ರೆಯಾದರೆ ಅದೇ ಹೆಚ್ಚು ಎನ್ನುವಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT