ಬೆಳಕು ಕಾಣದ ಆಶ್ರಯ ಕಾಲೊನಿ!

7
ದಶಕ ಕಳೆದರೂ ಕಲ್ಪಿಸದ ವಿದ್ಯುತ್‌ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ

ಬೆಳಕು ಕಾಣದ ಆಶ್ರಯ ಕಾಲೊನಿ!

Published:
Updated:
Deccan Herald

ಯಾದಗಿರಿ: ನಗರದ ಹಿರೇಕೆರೆ ಹಿನ್ನೀರು ಅಂಗಳದಲ್ಲಿ ನಿರ್ಮಾಣಗೊಂಡಿರುವ ಆಶ್ರಯ ಕಾಲೊನಿ ದಶಕ ಕಳೆದರೂ ಬೆಳಕು ಕಂಡಿಲ್ಲ. ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರೂ ನಗರಸಭೆ ಮಾತ್ರ ಕಾಲೊನಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮುಂದಾಗಿಲ್ಲ.

ನಗರಸಭೆ 20X30 ಅಡಿ ವಿಸ್ತೀರ್ಣ ಅಳತೆಯಲ್ಲಿ ಇಲ್ಲಿನ ಆಶ್ರಯ ಕಾಲೊನಿಯಲ್ಲಿ ಒಟ್ಟು 320 ಮನೆಗಳನ್ನು ಸೂರು ರಹಿತರಿಗೆ ಹಂಚಿಕೆ ಮಾಡಿದೆ. 2005ರಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದರೂ, ಇದುವರೆಗೂ ಕಾಲೊನಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಕುಡಿವ ನೀರು, ವಿದ್ಯುತ್‌ ವ್ಯವಸ್ಥೆಯಂತಹ ತೀರಾ ಅಗತ್ಯ ಸೌಕರ್ಯಗಳು ಇಲ್ಲದೇ ಇರುವ ಕಾರಣ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದಾರೆ.

ಅನಿವಾರ್ಯ ಎಂಬುವವರು ಇಲ್ಲಿ ನೆಲೆಸಿದ್ದಾರೆ. ಹಂಚಿಕೆಯಾಗಿರುವ 320 ಮನೆಗಳಲ್ಲಿ ಕೇವಲ 24 ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಇಲ್ಲದೇ ನಿವಾಸಿಗಳು ನಿತ್ಯ ಸಂಕಷ್ಟಪಡುವಂತಾಗಿದೆ. ಕೆಲವರು ಸಮೀಪದಲ್ಲೇ ಇರುವ ಅಕ್ಕಿ ಗಿರಣಿಗಳಿಂದ ವಿದ್ಯುತ್‌ ಸೌಕರ್ಯ ಕಲ್ಪಿಸಿಕೊಂಡಿದ್ದಾರೆ. ಉಳಿದವರು ಸೀಮೆಎಣ್ಣೆ ದೀಪ, ಮೇಣದ ಬತ್ತಿಯನ್ನೇ ನೆಚ್ಚಿಕೊಂಡಿದ್ದಾರೆ. ರಾತ್ರಿ ಸಂದರ್ಭದಲ್ಲಿ ವಿಷಜಂತುಗಳ ಹಾವಳಿಯಿಂದಾಗಿ ಹೈರಾಣ ಅನುಭವಿಸುತ್ತಿದ್ದಾರೆ.

ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ: ಆಶ್ರಯ ಕಾಲೊನಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳಲ್ಲಿ ಅನುದಾನ ಒದಗಿಸಿದ್ದರೂ, ಬಳಕೆಯಾಗಿಲ್ಲ ಎಂಬುದಾಗಿ ಇಲ್ಲಿನ ನಿವಾಸಿ ಎಸ್.ಎಸ್.ನಾಯಕ್ ಆರೋಪಿಸುತ್ತಾರೆ.

‘14ನೇ ಹಣಕಾಸು ಆಯೋಗ ಸಾಮಾನ್ಯ ಕಾರ್ಯನಿರ್ವಹಣೆ ಹಾಗೂ ಸಾಮಾನ್ಯ ಮೂಲ ಅನುದಾನ ಒದಗಿಸಿದ್ದರೂ, ನಗರಸಭೆ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ. 2016–17ನೇ ಸಾಲಿನಲ್ಲಿ 14ನೇ ಹಣಕಾಸು ಆಯೋಗ ಒಟ್ಟು ₹2.73 ಕೋಟಿ ಅನುದಾನ ಒದಗಿಸಿದೆ. ಈ ಅನುದಾನದಲ್ಲಿ ನಗರಸಭೆ 21 ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿದ್ದರೂ, ಕೇವಲ 6 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಅದೇ ರೀತಿಯಲ್ಲಿ 2017–18ನೇ ಸಾಲಿನಲ್ಲಿ ಒಟ್ಟು 42 ಅಭಿವೃದ್ಧಿ ಕಾಮಗಾರಿಗಳಿಗೆ ಹಣಕಾಸು ಆಯೋಗ ₹3.18 ಕೋಟಿ ಅನುದಾನ ಒದಗಿಸಿದ್ದರೂ, ಕೇವಲ 1 ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಸರ್ಕಾರ ಸಂತೃಪ್ತ ಅನುದಾನ ಒದಗಿಸಿದ್ದರೂ ನಗರಸಭೆ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ’ ಎಂದು ಅವರು ದೂರುತ್ತಾರೆ.

23 ಕಾಮಗಾರಿ ಟೆಂಡರ್‌ ಬಾಕಿ: ನಗರಸಭೆ 2017–18ನೇ ಸಾಲಿನಲ್ಲಿ ಒಟ್ಟು 23 ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ. ಈ ಕುರಿತು ಈ ಹಿಂದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೂ ಸದಸ್ಯರು ದೂರು ನೀಡಿದ್ದರು. 14ನೇ ಹಣಕಾಸು ಯೋಜನೆಯಡಿ ಸಾಮಾನ್ಯ ಮೂಲ ಯೋಜನೆ ಹಾಗೂ ಸಾಮಾನ್ಯ ಕಾರ್ಯನಿರ್ವಹಣಾ ಯೋಜನೆಯಡಿ ಒಟ್ಟು 23 ಕಾಮಗಾರಿಗಳಿಗೆ ಇದುವರೆಗೂ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ ಎಂಬುದಾಗಿ ನಗರಸಭೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದೆ. ಆಯಾ ಆರ್ಥಿಕ ವರ್ಷದಲ್ಲಿ ಅನುದಾನ ಬಳಕೆಯಾಗದೇ ಇರುವುದರಿಂದ ಯಾವೊಂದು ಬಡಾವಣೆಗೂ ಮೂಲ ಸೌಕರ್ಯಗಳು ಮರೀಚಿಕೆಯಾಗುತ್ತಿವೆ ಎಂಬುದಾಗಿ ಆಶ್ರಯ ಕಾಲೊನಿಯ ನಿವಾಸಿಗಳು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !