ಶುಕ್ರವಾರ, ಜುಲೈ 30, 2021
25 °C
ಜಿಲ್ಲಾ ಪಂಚಾಯಿತಿ ಅಧಿಕಾರ ಒಲಿಸಿಕೊಂಡ ಬಿಜೆಪಿ ನಾಯಕರು

ಯಾದಗಿರಿ | ಕಮಲ ತಂತ್ರ, ‘ಕೈ’ಗೆ ಹಿನ್ನಡೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

BJP

ಯಾದಗಿರಿ: ‘ಕಾಂಗ್ರೆಸ್‌ ತಕ್ಕೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಅಧಿಕಾರವನ್ನು ‘ಕೈ’ ಪಡೆ ಕೈಯಾರೆ ಕಳೆದುಕೊಂಡಿದೆ. ರಾಜಶೇಖರ ಪಾಟೀಲ ವಜ್ಜಲ್ ಅವರು ರಾಜೀನಾಮೆ ನೀಡಿರದಿದ್ದರೆ ಕಾಂಗ್ರೆಸ್‌ಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಮತ್ತು ಪಕ್ಷವು ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ’ ಎಂಬ ಮಾತು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

18 ತಿಂಗಳು ಅಧ್ಯಕ್ಷರಾಗಿದ್ದ ದೇವತ್ಕಲ್‌ ಮತಕ್ಷೇತ್ರದ ರಾಜಶೇಖರಗೌಡ ಪಾಟೀಲ ವಜ್ಜಲ್‌ ಅವರು ರಾಜೀನಾಮೆ ನೀಡಿದ್ದರಿಂದ ಶುಕ್ರವಾರ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಬಂಡೆದ್ದು ಚುನಾವಣಾ ಕಣಕ್ಕಿಳಿದ ಬಸನಗೌಡ ಪಾಟೀಲ ಯಡಿಯಾಪುರ ಅಧ್ಯಕ್ಷರಾಗಿ ಆಯ್ಕೆಯಾದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸ್ಥಳೀಯ ಮಟ್ಟದಲ್ಲಿ ತಮ್ಮದೇ ಆಡಳಿತ ಇರಬೇಕು ಎನ್ನುವುದು ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರ ಅಭಿಮತವಾಗಿತ್ತು. ಇದರಿಂದ ಅತೃಪ್ತ ಕಾಂಗ್ರೆಸ್‌ ಸದಸ್ಯರ ಮೇಲೆ ಕಣ್ಣು ನೆಟ್ಟಿದ್ದರು.

ಚುನಾವಣಾ ತಂತ್ರಕ್ಕೆ ಸುರಪುರ ಶಾಸಕ ರಾಜೂಗೌಡ, ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮತ್ತು ಪ್ರಮುಖರು ಸಿದ್ಧತೆ ಮಾಡಿಕೊಂಡರು. ಈ ಮೂಲಕ ಕಾಂಗ್ರೆಸ್‌ಗೆ ಮಾಸ್ಟರ್‌ ಸ್ಟ್ರೋಕ್‌ ನೀಡಿದರು.

‘ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಬರುವುದಾದರೆ ಎಲ್ಲರಿಗೂ ಸ್ವಾಗತವಿದೆ. ನಮ್ಮ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವುದರಿಂದ ಅವರು ನಮ್ಮವರೇ ಆಗಿದ್ದಾರೆ. ಈ ಬಗ್ಗೆ ನಮ್ಮ ಸದಸ್ಯರ ಜೊತೆ ಸಭೆ ಸೇರಿ ಅವರಿಗೆ ಮತ ಹಾಕುವ ಮೂಲಕ ಗೆದ್ದೆವು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌ ಹೇಳುತ್ತಾರೆ.

‘ಬಿಜೆಪಿ ಪಕ್ಷ ನಮ್ಮ ಸದಸ್ಯರನ್ನು ಸೆಳೆಯುವ ಮೂಲಕ ಕೆಟ್ಟ ಚಾಳಿ ಮುಂದುವರಿಸಿದೆ. ಅವರಲ್ಲಿ ಯಾವ ನೈತಿಕತೆ ಉಳಿದಿದೆ. ಕಾಂಗ್ರೆಸ್‌ನ ಎಲ್ಲ ಸದಸ್ಯರಿಗೆ ವಿಪ್‌ ಜಾರಿ ಮಾಡಿದ್ದೆವು. ಯಡಿಯಾಪುರ ಅವರ ಮನೆಗೆ ತೆರಳಿ ನಮ್ಮ ಅಭ್ಯರ್ಥಿ ಪರವಾಗಿ ಮತ ಹಾಕಲು ವಿನಂತಿಸಿದ್ದೆವು, ದುರಾಸೆಯಿಂದ ಅವರು ಪಕ್ಷ ಬಿಟ್ಟು ಹೋದರು’ ಎಂದು ಕಾಂಗ್ರೆಸ್‌ ಜಿಲ್ಲಾ  ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್‌ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು