ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಸಾಂಸ್ಕೃತಿಕ ಆಸಕ್ತಿ ಬೆಳೆಸಿಕೊಳ್ಳಿ

ಪುಸ್ತಕ ಬಿಡುಗಡೆ ಸಮಾರಂಭ; ಶರಣಗೌಡ ಕಂದಕೂರ ಸಲಹೆ
Last Updated 2 ಸೆಪ್ಟೆಂಬರ್ 2022, 5:53 IST
ಅಕ್ಷರ ಗಾತ್ರ

ಯಾದಗಿರಿ: ‘ಯುವಕರು ಹೆಚ್ಚಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿ ಬೆಳೆಸಿಕೊಳ್ಳಬೇಕು. ಓದುಬರಹದ ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅವಶ್ಯ’ ಎಂದು ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಹ ಭಾವನಾ ಸಂಸ್ಥೆ ಬಳಿಚಕ್ರ ಹಾಗೂ ಸಮನ್ವಯ ಸಂಸ್ಥೆ ಕಿಲ್ಲನಕೇರಾ ಉದ್ಘಾಟನೆ ಜತೆ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ರಂಗಭೂಮಿ, ಸಂಗೀತ ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಸಮಾಜದಲ್ಲಿ ತನ್ನದೇ ಆದ ವಿಶೇಷ ವ್ಯಕ್ತಿತ್ವ ಹಾಗೂ ಗೌರವ ಹೊಂದಿರುತ್ತಾನೆ. ಯುವಜನರು ಓದುವ ಸಂಸ್ಕೃತಿಯ ಜೊತೆಗೆ ಸಾಹಿತ್ಯ, ಸಂಗೀತ, ಸಂಸ್ಕೃತಿಯ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ. ಆ ದಿಸೆಯಲ್ಲಿ ದೇವೇಂದ್ರಪ್ಪ ಧೋತ್ರೆ ಹಾಗೂ ಶಿವು ಬಳಿಚಕ್ರ, ಸಾಂಸ್ಕೃತಿಕ ಸಂಘವನ್ನು ಕಟ್ಟಿ ಸೇವೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದು, ಜನಪ್ರತಿನಿಧಿಗಳ ಸಂಪೂರ್ಣ ಸಹಕಾರ ಅಗತ್ಯ ಎಂದು ಹೇಳಿದರು.

ಶಿಲ್ಪಾ ಬಸವಂತಪುರ ರಚಿಸಿದ ‘ಮನದ ಮಲ್ಲಿಗೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಸಿದ್ದರಾಮ ಹೊನ್ಕಲ್, ಸಾಹಿತಿಯಾದವರು ಸಮಾಜ ಕಟ್ಟುವ ಕಡೆಗೆ, ನೊಂದವರ ಕಡೆಗೆ, ಬಡವರ ಕಡೆಗೆ ಸಮಾಜದ ಪ್ರಚಲಿತ ವಿದ್ಯಮಾನಗಳ ಕಡೆಗೆ ಸ್ಪಂದನೆ ನೀಡಬೇಕು ಎಂದು ಹೇಳಿದರು.

ಸಾಹಿತಿ ಶಾಂತಪ್ಪ ಬೂದಿಹಾಳ, ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ, ಚಿತ್ರನಟ ಡಿಂಗ್ರಿ ನರೇಶ್, ಪ್ರಕಾಶಕ ಎಂ.ಕೆ.ಶೇಖ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ, ಉದ್ಯಮಿ ಮಲ್ಲಿಕಾರ್ಜುನ ಸಿರಗೊಳ, ಮಿತ್ರ ಸಂಸ್ಥೆಯ ಯೇಸುಮಿತ್ರ, ಭಾಸ್ಕರ್, ಸಂಸ್ಥೆಯ ಅಧ್ಯಕ್ಷರಾದ ಡಿ.ಕೆ.ದೇವಿಂದ್ರಪ್ಪ ಧೋತ್ರೆ, ಶಿವು ಬಳಿಚಕ್ರ ಇದ್ದರು.

ಸಾಹಿತಿ ಭಾಗ್ಯವತಿ ಕೆಂಭಾವಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 23 ಜನ ಕವಿಗಳು ಕವಿತೆ ವಾಚಿಸಿದರು. ಕಾರ್ಯಕ್ರಮ ಗುರುಪ್ರಸಾದ್ ವೈದ್ಯ ನಿರೂಪಿಸಿದರು. ಭಾಗ್ಯಶ್ರೀ ಪ್ರಾರ್ಥಿಸಿದರು. ಹಣುಮಂತರಾಯ ದೇವತ್ಕಲ್ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT