ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಕೋವಿಡ್ ಕೇಂದ್ರದಲ್ಲಿ ಆರೈಕೆ

ಝೂಮ್ ಮೀಟ್ ಮೂಲಕ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ
Last Updated 20 ಮೇ 2021, 4:39 IST
ಅಕ್ಷರ ಗಾತ್ರ

ಯಾದಗಿರಿ: ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಅವಶ್ಯಕತೆ ಇಲ್ಲದ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತ್ಯೇಕವಾಗಿಟ್ಟು ಆರೈಕೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಸೂಚನೆ ನೀಡಿದರು.

ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌/ ಹಾಸ್ಟೆಲ್‍ಗಳಲ್ಲಿ ಆರೈಕೆ ಮಾಡುವ ಕುರಿತಂತೆ ಬುಧವಾರ ಝೂಮ್ ಮೀಟ್ ಮೂಲಕ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಎಲ್ಲಾ ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ಪತ್ತೆಯಾಗುವ ಸೋಂಕಿತರು ಮನೆಯಲ್ಲಿಯೇ ಆರೈಕೆ ಪಡೆಯಬಹುದಾಗಿದೆ. ಆದರೆ, ವಾಸಿಸುವ ಮನೆಯು ವಿಶಾಲವಾಗಿರಬೇಕು. ಪ್ರತ್ಯೇಕ ಕೋಣೆ, ಪ್ರತ್ಯೇಕ ಶೌಚಾಲಯ ವ್ಯವಸ್ಥೆಗಳಿದ್ದಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಅನುಮತಿ ನೀಡಬಹುದಾಗಿದೆ. ಇಂತಹ ವ್ಯವಸ್ಥೆ ಇಲ್ಲದೇ ಇರುವ ಸೋಂಕಿತರು ಕಡ್ಡಾಯವಾಗಿ ಗುರುತಿಸಲ್ಪಟ್ಟ ಕೋವಿಡ್ ಕೇರ್ ಸೆಂಟರ್‌ಗೆ ಬಂದು ಚಿಕಿತ್ಸೆ ಪಡೆಯಬಹುದು ಎಂದು ಸಲಹೆ ನೀಡಿದರು.

ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕೋವಿಡ್ ಸೆಂಟರ್‌ಗಳನ್ನು ಅವಶ್ಯಕತೆಗೆ ಅನುಗುಣವಾಗಿ ತೆರೆಯಲು ಸೂಚಿಸಿದ ಅವರು, ಸೋಂಕಿತರು ಶಿಷ್ಟಾಚಾರದಂತೆ ನಿಗದಿತ ದಿನಗಳು ಈ ಕೇಂದ್ರದಲ್ಲಿದ್ದು, ಸೋಂಕಿನಿಂದ ಗುಣಮುಖರಾದ ನಂತರ ವೈದ್ಯರ ಸಲಹೆಯಂತೆ ಪುನಃ ಮನೆಗೆ ಮರಳಬಹುದು ಎಂದು ತಿಳಿಸಿದರು.

ಗ್ರಾಮಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಜಿಲ್ಲೆಯ ಆಯಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರಾಗಿದ್ದು, ಗ್ರಾಮದ ಲೆಕ್ಕಿಗರು, ಸಮುದಾಯ ಆರೋಗ್ಯ ಅಧಿಕಾರಿಗಳು, ಶಾಲಾ ಮುಖ್ಯಗುರುಗಳು, ಸ್ಥಳೀಯ ಬೀಟ್ ಪೊಲೀಸ್ ಸಿಬ್ಬಂದಿ, ವಸತಿ ನಿಲಯದ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಹಾಗೂ ಗ್ರಾಮದ ಆಶಾ ಕಾರ್ಯಕರ್ತೆಯರು ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು.

ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್/ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡುವ ಸಂರ್ಭದಲ್ಲಿ ಎಲ್ಲಾ ವಾಹನ ಚಾಲಕ, ಆರೋಗ್ಯ ಸಿಬ್ಬಂದಿ ಸೂಕ್ತ ಪಿಪಿಇ ಕಿಟ್ ಧರಿಸಿರಬೇಕು ಎಂದು ಸಲಹೆ ನೀಡಿದ ಅವರು, ಆರೈಕೆ ಕೇಂದ್ರಗಳ ನಿರ್ವಹಣೆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮಹಿಳಾ ಸಂಘ ಸಂಸ್ಥೆ ಹಾಗೂ ಕೊರೊನಾ ವಾರಿಯರ್ಸ್‌ಗಳ ಸಹಾಯ ಪಡೆಯಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಲಕ್ಷ್ಮೀಕಾಂತ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಎಸ್.ಚನ್ನಬಸಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಶಹಾಪುರ ತಹಶೀಲ್ದಾರ್‌ ಜಗನ್ನಾಥರೆಡ್ಡಿ ಇನ್ನಿತರ ಅಧಿಕಾರಿಗಳು ಝೂಮ್ ಮೀಟಿಂಗ್ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT