ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಬಂಡಾಯದ ದನಿಯಾಗಿದ್ದ ಚಂಪಾ: ಡಾ.ಸುಭಾಶ್ಚಂದ್ರ ಕೌಲಗಿ

ಜಿಲ್ಲಾ ಕಸಾಪದಿಂದ ಚಂದ್ರಶೇಖರ ಪಾಟೀಲಗೆ ನುಡಿನಮನ
Last Updated 11 ಜನವರಿ 2022, 15:43 IST
ಅಕ್ಷರ ಗಾತ್ರ

ಯಾದಗಿರಿ: ವೈಚಾರಿಕ ಬರವಣಿಗೆ, ತೀಕ್ಷ್ಣ ಮಾತುಗಳು, ಜನಪರ ಹೋರಾಟಗಳ ಮೂಲಕ ನಾಡಿಗೆ ಚಂದ್ರಶೇಖರ ಪಾಟೀಲ (ಚಂಪಾ) ಅವರು ನೀಡಿದ ಕೊಡುಗೆ ಅನನ್ಯ ಎಂದು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಭಿಪ್ರಾಯಿಸಿದರು.

ನಗರದ ಹಳೆ ಕಸಾಪ ಭವನದ ಬಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಹಿತಿ ದಿ.ಚಂದ್ರಶೇಖರ ಪಾಟೀಲ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪು ಕಂಡರೆ ತಕ್ಷಣವೇ ಸಿಡಿದೇಳುವ, ನಾಡಿನ ಐಕ್ಯತೆ ಹಾಗೂ ಹಿತರಕ್ಷಣೆಗಾಗಿ ಇಳಿವಯಸ್ಸಿನಲ್ಲಿಯೂ ಹೋರಾಟಗಳಲ್ಲಿ ಧುಮುಕುತ್ತಿದ್ದ ಚಂಪಾ ಕನ್ನಡ ನಾಡಿನ ಬಂಡಾಯದ ದನಿಯಾಗಿದ್ದರು ಎಂದರು.

ಆಂಗ್ಲ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅದ್ಭುತ ಕೃಷಿ ಮಾಡಿದ್ದ ಚಂಪಾ ಹಲವು ಜನಪರ ಹೋರಾಟಗಳನ್ನು ರೂಪಿಸಿದವರು. ಸಾಹಿತಿಯಾಗಿ, ಪತ್ರಕರ್ತರಾಗಿ, ಕವಿಯಾಗಿ, ಅವರು ಮಾಡಿದ ಕೆಲಸಗಳು ಕರುನಾಡು ಎಂದಿಗೂ ಮರೆಯುವ ಹಾಗಿಲ್ಲ ಎಂದು ಸ್ಮರಿಸಿದರು.

ಸಾಹಿತಿ ವಿಶ್ವನಾಥರೆಡ್ಡಿ ಗೊಂದೆಡಿಗಿ ಮಾತನಾಡಿ, ಗೋಕಾಕ್ ಚಳವಳಿ, ತುರ್ತು ಪರಿಸ್ಥಿತಿ ವಿರುದ್ಧದ ಜೆ.ಪಿ.ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜೈಲುವಾಸವನ್ನೂ ಅನುಭವಿಸಿದ್ದ ಚಂಪಾ ಬಹುಮುಖ ಚಿಂತನೆಯ ವ್ಯಕ್ತಿಯಾಗಿದ್ದರು ಎಂದರು.

ಪ್ರಗತಿಪರ ನಿಲುವಿನ, ಯಾರ ಮರ್ಜಿಗೂ ಬೀಳದ ಸ್ವಾಭಿಮಾನಿ ಚಂಪಾ ತಾವು ನಂಬಿದ್ದ ತತ್ವ ಸಿದ್ಧಾಂತಗಳೊದಿಗೆ ಯಾವತ್ತಿಗೂ ರಾಜಿ ಮಾಡಿಕೊಳ್ಳಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವರು ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಎಂದರು.

ಬಸವರಾಜ ಮೋಟ್ನಳ್ಳಿ ಮಾತನಾಡಿ, ಚಂಪಾ ಅವರು ಸ್ಥಾಪಿಸಿದ ಪುಸ್ತಕ ಸಂತೆ, ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಸಂಘಟಿಸಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ವಿಭಿನ್ನವಾಗಿದ್ದವು ಎಂದರು.

ಕನ್ನಡ ನಾಡಿಗೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮವನ್ನು ಮತ್ತು ಅದರ ಘಾಟನ್ನೂ ಕೂಡಾ ಪರಿಚಯಿಸಿದ ಶ್ರೆಯಸ್ಸು ಚಂಪಾ ಅವರಿಗೆ ಸಲ್ಲುತ್ತದೆ ಎಂದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಡಾ.ಭೀಮರಾಯ ಲಿಂಗೇರಿ ನಿರೂಪಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯರಾದ ಅಯ್ಯಣ್ಣ ಹುಂಡೇಕಾರ, ಡಾ.ಸಿದ್ಧರಾಜರೆಡ್ಡಿ, ಸಿ.ಎಂ.ಪಟ್ಟೇದಾರ, ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ಎಸ್.ಎನ್.ಮಣ್ಣೂರ, ಶರಣಪ್ಪ ಗುಳಗಿ, ಸ್ವಾಮಿದೇವ ದಾಸನಕೇರಿ, ವಿಶ್ವನಾಥ ಸಿರವಾರ, ಡಾ.ಎಸ್.ಎಸ್.ನಾಯಕ, ವಿಶ್ವನಾಥ ಕರ್ಲಿ, ಚನ್ನಪ್ಪ ಸಾಹು ಠಾಣಗುಂದಿ, ನಾಗೇಂದ್ರಪ್ಪ ಜಾಜಿ, ನೂರಂದಪ್ಪ ಲೇವಡಿ, ನಾಗಪ್ಪ ಸಜ್ಜನ, ರಾಜು ಹೆಂದೆ, ಆರ್.ಬಸವರಾಜ ಅಬ್ಬೆತುಮಕೂರ, ಲಕ್ಷ್ಮೀನಾರಾಯಣ ಗುಂಡಾನೋರ, ವೀರಭದ್ರಯ್ಯ ಸ್ವಾಮಿ ಜಾಕಾಮಠ, ಚಂದ್ರಶೇಖರ ಅರಳಿ, ಶ್ರೀಶೈಲ ಪೂಜಾರಿ, ಗುರುಬಸಪ್ಪ ಗುಂಡಳ್ಳಿ, ಮಲ್ಲು ಹಳ್ಳಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT