ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ದುಡ್ಡು, ಮಕ್ಕಳ ಸಮಯ ವ್ಯರ್ಥ್ಯ ಬೇಡ: ವಿದ್ಯಾರ್ಥಿನಿ ಅಸಮಾಧಾನ

ಮಕ್ಕಳ ಹಕ್ಕುಗಳ ಗ್ರಾಮಸಭೆ:
Published 25 ನವೆಂಬರ್ 2023, 7:14 IST
Last Updated 25 ನವೆಂಬರ್ 2023, 7:14 IST
ಅಕ್ಷರ ಗಾತ್ರ

ಸೈದಾಪುರ: ‘ಕಳೆದ ಸಭೆಯಲ್ಲಿ ನಮ್ಮ ಗ್ರಾಮದ ಶಾಲೆಯಲ್ಲಿನ ಕುಡಿಯುವ ನೀರು, ಶೌಚಾಲಯ, ತಡೆಗೋಡೆ ಸೇರಿದಂತೆ ಸಾರಿಗೆ ವ್ಯವಸ್ಥೆಯ ಸಮಸ್ಯೆ ಕುರಿತು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಆ ಸಮಸ್ಯೆಗಳಿಗೆ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ‌ಇಂಥ ಸಭೆಗಳನ್ನು ಆಯೋಜಿಸಿ ಸರ್ಕಾರದ ದುಡ್ಡು, ವಿದ್ಯಾರ್ಥಿಗಳ ಸಮಯ ಹಾಳು ಮಾಡಬೇಡಿ’

ಇವು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಬಾಲಚೇಡ ಗ್ರಾಮದ ವಿದ್ಯಾರ್ಥಿನಿ ರಾಧಿಕಾ ನೋವಿನ ನುಡಿಗಳು.

ಮಕ್ಕಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರಾಧಿಕಾ, ಕಣ್ಣೀರು ಹಾಕುತ್ತಲೇ ಸಭೆಯಿಂದ ಹೊರನಡೆದಳು.

ನಂತರ ವಿವಿಧ ಶಾಲೆಗಳ ಅನೇಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತಂದು, ಪರಿಹಾರಕ್ಕೆ ಒತ್ತಾಯಿಸಿದರು.

‘ಕುಡಿಯುವ ನೀರು, ಶೌಚಾಲಯ, ತಡೆಗೋಡೆಯ ಸಮಸ್ಯೆಗಳ ಪರಿಹಾರ ಆಗದಿರಲು ಎಸ್‌ಡಿಎಂಸಿ ರಚನೆಯಾಗದಿರುವುದು ಮುಖ್ಯ ಕಾರಣ. ಗ್ರಾಮದಲ್ಲಿ ಆರು ಮಂದಿ ಪಂಚಾಯಿತಿ ಸದಸ್ಯರಿದ್ದಾರೆ. ಆದರೆ, ಶಾಲೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪಂಚಾಯಿತಿ ಸದಸ್ಯರು ಹಾಗೂ ಪಾಲಕರ ಆಸಕ್ತಿ ತೋರುತ್ತಿಲ್ಲ’ ಎಂದು ಮುಖ್ಯಶಿಕ್ಷಕ ಬಸಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.‌ ಇದಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಗಿರಿಮಲ್ಲಣ್ಣ ಪ್ರತಿಕ್ರಿಯಿಸಿ, ‘ಶೀಘ್ರದಲ್ಲಿ ಗ್ರಾಮದಲ್ಲಿ ಸಭೆ ಕರೆದು ಚರ್ಚೆ ನಡೆಸಿ ಮಾಹಿತಿ ಕೊಡಿ’ ಎಂದು ಸಲಹೆ ನೀಡಿದರು.

ಆದೇಶ ಪಾಲನೆಗೆ ಸಭೆ!:

‘ರಾಜ್ಯ ಸರ್ಕಾರ 2006–07ರಲ್ಲಿ ಗ್ರಾಮಿಣ ಮಕ್ಕಳ ಬದುಕು, ರಕ್ಷಣೆ, ವಿಕಾಸದ ಹಿತದಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಪ್ರತಿ ವರ್ಷ ಕಡ್ಡಾಯವಾಗಿ ನಡೆಸಬೇಕೆಂದು ಆದೇಶಿಸಿದೆ. ಆದರೆ ಇಲ್ಲಿವರೆಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಸರ್ಕಾರದ ಆದೇಶ ಪಾಲನೆಗೆ ಗ್ರಾಮ ಸಭೆ ನಡೆಸುತ್ತಿವೆಯೇ ಹೊರತು ಮಕ್ಕಳ ಸಮಸ್ಯೆ ಪರಿಹರಿಸುವ ಕ್ರಮವಾಗಿಲ್ಲ’ ಎಂಬುದು ಸಾರ್ವಜನಿಕರ ಆರೋಪಿದರು.

ಅಧಿಕಾರಿಗಳ ಗೈರು:

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಉಳಿದಂತೆ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಅಂಗವಿಕಲ ಇಲಾಖೆ, ತಹಶೀಲ್ದಾರ್, ಸಾರಿಗೆ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.

ಮಕ್ಕಳ ಹಕ್ಕುಗಳ ಬಗ್ಗೆ ಕೇವಲ ವೇದಿಕೆಯಲ್ಲಿ ಮಾತನಾಡುವ ಅಧಿಕಾರಿಗಳು ಮಕ್ಕಳು ಪ್ರಸ್ತಾಪಿಸುವ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಇದು ಅವರ ಕುರುಡು ಆಡಳಿತಕ್ಕೆ ಹಿಡಿದ ಕೈಗನ್ನಡಿ
ಮಲ್ಲಪ್ಪ ಸೈದಾಪುರ ಪಾಲಕ
ಮಕ್ಕಳ ಗ್ರಾಮ ಸಭೆಯ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಮುಕುಂದರಾವ್
ಕುಲಕರ್ಣಿ ಸೈದಾಪುರ ವಲಯ ಸಿಆರ್‌ಪಿ
ಮಕ್ಕಳ ಹಕ್ಕುಗಳ ಸಭೆಯಲ್ಲಿ ವಿದ್ಯಾರ್ಥಿಗಳು ತಿಳಿಸಿರುವ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಬಗೆಹರಿಸಲು ತಿಳಿಸುತ್ತೇವೆ
ನೇತ್ರಾವತಿ ಗ್ರಾಮ ಪಂಚಾಯಿತಿ ಸದಸ್ಯೆ
ತಯಾರಿ ಇಲ್ಲದೇ ಸಭೆ...?
‘ಮಕ್ಕಳ ಗ್ರಾಮ ಸಭೆ ಆಯೋಜನೆ ಕುರಿತು ನಮಗೆ ಮಾಹಿತಿ ನೀಡಿದ್ದು ನ.23ರ ಮಧ್ಯಾಹ್ನ 3:30ಕ್ಕೆ. ಆ ಕಾರಣದಿಂದ ಎಲ್ಲಾ ಮಕ್ಕಳಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಈ ಸಭೆಯು ನೆಪ ಮಾತ್ರಕ್ಕೆ ಎಂಬಂತಾಗಿದೆ. ಪ್ರತಿವರ್ಷವೂ ಸಭೆಯಲ್ಲಿ ವಿದ್ಯಾರ್ಥಿಗಳು ಪ್ರಸ್ತಾಪಿಸುವ ಹಲವು ಸಮಸ್ಯೆಗಳಿಗೆ ಈತನಕ ಪರಿಹಾರ ಸಿಕ್ಕಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಅಧಿಕ ಸರ್ಕಾರಿ ಶಾಲೆಗಳು ಬರುತ್ತವೆ. ಆದರೆ ಶುಕ್ರವಾರ ನಡೆದ ಮಕ್ಕಳ ಸಭೆಯಲ್ಲಿ ಕೇವಲ ಐದು ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರು. ಇದಕ್ಕೆ ಮಾಹಿತಿ ಕೊರತೆಯೇ ಇದಕ್ಕೆ ಕಾರಣ’ ಎಂಬುದು ಪಾಲಕರು ಮತ್ತು ಶಿಕ್ಷಕರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT