ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟ: ನಲುಗಿದ ರಾಖಿ ವಹಿವಾಟು

ಅಣ್ಣ ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ; ಮಾರುಕಟ್ಟೆಗೆ ಲಗ್ಗೆ ಇಟ್ಟ ವರ್ಣರಂಜಿತ ರಾಖಿಗಳು
Last Updated 21 ಆಗಸ್ಟ್ 2021, 2:25 IST
ಅಕ್ಷರ ಗಾತ್ರ

ಸೈದಾಪುರ: ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತದ ಹಬ್ಬವಾದ ರಕ್ಷಾ ಬಂಧನಕ್ಕೆ ಕೋವಿಡ್ ಅಡ್ಡಿಯುಂಟು ಮಾಡಿದೆ.‌

ಪಟ್ಟಣಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಣ್ಣು ಮಕ್ಕಳು ರಾಖಿ ಖರೀದಿಗೆ ಆಗಮಿಸುತ್ತಿದ್ದಾರೆ. ಆದರೆ ಈ ಬಾರಿ ಕೋವಿಡ್‌ನಿಂದಾಗಿ ರಾಖಿ ಖರೀದಿ ಭರಾಟೆ ಎದ್ದು ಕಾಣುತ್ತಿಲ್ಲ. ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮಳಿಗೆಯಲ್ಲಿ ತಂದು ಇಟ್ಟಿರುವ ರಾಖಿಗಳಲ್ಲಿ ಅರ್ಧದಷ್ಟು ಕೂಡ ಮಾರಾಟವಾಗಿಲ್ಲ ಎನ್ನುತ್ತಾರೆಅಂಗಡಿ ಮಾಲೀಕರು.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಣ್ಣ ಬಣ್ಣದ ರಾಖಿಗಳು: ಹಿಂದೆಲ್ಲಾ ರಕ್ಷಾ ಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆನೂಲನ್ನು ರಾಖಿಯಾಗಿ ಕಟ್ಟಿಕೊಳ್ಳುತ್ತಿದ್ದರು. ಆದರೆ ಈಗ ದೇಶ-ವಿದೇಶಗಳಿಂದ ಬಂದ ರಾಖಿಗಳು ಜನರ ಮನಸೂರೆ ಮಾಡುತ್ತಿವೆ.ಮಾರುಕಟ್ಟೆಗೆ ಈಗಾಗಲೇ ಬಣ್ಣ ಬಣ್ಣದ ರಾಖಿಗಳು ಬಂದಿವೆ. ಆದರೆ ಕೋವಿಡ್ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಜನರು ಸರಳವಾಗಿ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ದುಬಾರಿ ಬೆಲೆಯ ರಾಖಿಗಳಿಗೆ ಬೇಡಿಕೆ ಕಂಡು ಬಂದಿಲ್ಲ.

ಕೊರೊನಾ ಸಂಕಷ್ಟದಿಂದಾಗಿ ಇನ್ನೂ ಶಾಲಾ, ಕಾಲೇಜುಗಳು ಆರಂಭವಾಗದೇ ಇರುವುದು ರಾಖಿ ಖರೀದಿ ಕುಸಿಯಲು ಪ್ರಮುಖ ಕಾರಣ ಎನಿಸಿದೆ. ಬಹುತೇಕ ಶಾಲಾ, ಕಾಲೇಜುಗಳ ಹುಡುಗಿಯರು ರಾಖಿಗಳನ್ನು ಖರೀದಿಸಿ, ತಮ್ಮ ತಮ್ಮ ಸಹಪಾಠಿಗಳಿಗೆ ಕಟ್ಟುತ್ತಿದ್ದರು. ಈಗ ವಿದ್ಯಾರ್ಥಿನಿಯರು ಯಾರೂ ಅಂಗಡಿಗಳತ್ತ ಸುಳಿಯುತ್ತಿಲ್ಲ. ವಿದ್ಯಾಭ್ಯಾಸ, ಉದ್ಯೋಗದ ನಿಮಿತ್ತ ಅಣ್ಣ ತಂಗಿಯರು ಬಹುದೂರ ಇರುತ್ತಾರೆ. ಹೀಗಾಗಿ ಅನೇಕ ಸಹೋದರಿಯರು ಅಂಚೆಯ ಮೂಲಕ ತಮ್ಮ ಸಹೋದರನಿಗೆ ರಾಖಿ ಕಳುಹಿಸುವುದುಂಟು. ಆದರೆ ಈ ಬಾರಿ ಲಾಕ್‌ಡೌನ್‌ನಿಂದ ಇದು ಕಡಿಮೆಯಾಗಿದೆ.

ಸಂಪ್ರದಾಯಬದ್ಧವಾಗಿ ಹಬ್ಬ ಮಾಡುವವರು ಅಂಗಡಿಗಳಲ್ಲಿ ಸಿಗುವ ರಂಗುರಂಗಿನ ರಾಖಿಗಳನ್ನು ಆಶ್ರಯಿಸು ವುದು ಕಡಿಮೆ. ಶಾಸ್ತ್ರೋಕ್ತವಾಗಿ ಪೂಜೆಗೆ ಇರಿಸಿದ, ಮನೆಯಲ್ಲೇ ತಯಾರಿಸಿದ ರಾಖಿಯನ್ನು ತಮ್ಮ ತಮ್ಮ ಸೋದರರಿಗೆ ಕಟ್ಟುತ್ತಾರೆ. ಅಂಗಡಿಗಳಲ್ಲಿನ ಫ್ಯಾಷನ್‌ ರಾಖಿಗಳನ್ನು ಕಾಲೇಜು ವಿದ್ಯಾರ್ಥಿನಿಯರೇ ಹೆಚ್ಚಾಗಿ ಖರೀದಿಸುತ್ತಿದ್ದುದ್ದರಿಂದ ಈಗ ಇಡೀ ವ್ಯಾಪಾರಕ್ಕೆ ಗ್ರಹಣ ಹಿಡಿದಂತೆ ಆಗಿದೆ.

ಈ ಬಾರಿ ಪ್ರಮುಖವಾಗಿ ಮಕ್ಕಳಿಗೆ ಇಷ್ಟವಾಗುವಂಥ ಡೊರೆಮನ್, ಚೋಟಾ ಭೀಮ್, ಭಜರಂಗಿ ಬಲಿ, ಚಮಕ್, ಬ್ರೈಸ್‌ಲೆಟ್, ಚಮಕ್, ಪಬ್‌ಜಿ ಸೇರಿದಂತೆ ಬಗೆಬಗೆಯ ರಾಖಿಗಳು ಮಾರುಕಟ್ಟೆಗೆ ಬಂದಿವೆ.

‘₹40 ಸಾವಿರ ಬಂಡವಾಳ ಹಾಕಿ ಕಲ್ಕತ್ತದಿಂದ ರಾಖಿಗಳನ್ನು ತಂದಿದ್ದೇನೆ. ರಿಯಾಯಿತಿ ದರದಲ್ಲಿ ಮಾರಾಟಕ್ಕಿಟ್ಟರೂ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT