ಸೋಮವಾರ, ಆಗಸ್ಟ್ 2, 2021
26 °C
ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಖಡಕ್ ಎಚ್ಚರಿಕೆ

‘ವಾರಿಯರ್ಸ್‌’ಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಆಶಾ, ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ನಿಯಂತ್ರಣದಲ್ಲಿ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ವಾರಿಯರ್ಸ್‌ಗಳಾದ‌ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಾಗ, ಜಿಲ್ಲಾಡಳಿತ ನಿಮ್ಮೊಂದಿಗಿದೆ. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ವೈದ್ಯರು, ಶುಶ್ರೂಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು, ಪಿಡಿಒ, ಗ್ರಾಮ ಲೆಕ್ಕಿಗರು ಕೋವಿಡ್ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಯಾರಾದರೂ ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಥವಾ ಇನ್ನಿತರ ರೂಪದಲ್ಲಿ ಕೆಲಸಕ್ಕೆ ಅಡ್ಡಿಪಡಿಸಿದರೆ ಜಿಲ್ಲಾಡಳಿತ ಕಂಟ್ರೋಲ್ ರೂಂ  08473 253950 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಬಹುದು. ಅಲ್ಲದೆ, ಸಂಬಂಧಪಟ್ಟ ಮೇಲಧಿಕಾರಿ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಪೋನ್ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಹುಣಸಗಿ, ನಾರಾಯಣಪುರ ಸರ್ಕಲ್, ತೊಟ್ಲೂರು, ಯಲ್ಹೇರಿ, ಬೇವಿನಾಳ, ಕೌಳೂರು, ಚಿಂಚೋಳಿ, ಚಾಮನಾಳ ಸೇರಿ 15ಕ್ಕೂ ಹೆಚ್ಚು ಗ್ರಾಮಗಳ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕರೆ ಮಾಡಿದರು. ಎಲ್ಲಾ ಕರೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಕೊರೊನಾ ವೈರಸ್ ಹರಡುವ ವಿಧಾನದ ಕುರಿತಾಗಿ ಸಾರ್ವಜನಿಕರಲ್ಲಿರುವ ಸಂಶಯಗಳನ್ನು ನಿವಾರಿಸಲು ತಿಳಿಸಿದರು.

ಜಿಲ್ಲೆಯಾದ್ಯಂತ ‘ಹೆಲ್ತ್ ವಾಚ್ ಆ್ಯಪ್’ ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ 91.15ರಷ್ಟು ಪೂರ್ಣಗೊಂಡಿದ್ದು, ಪ್ರತಿಶತ ಸಾಧನೆಗೆ ಶ್ರಮಿಸಬೇಕು. ಅದೇ ರೀತಿ ಕಂಟೇನ್ಮೆಂಟ್ ಝೋನ್ ಸರ್ವೆ ನಿಖರವಾಗಿ ಮಾಡುವಂತೆ ಸೂಚಿಸಿದರು.

ಮನೆಮನೆಗೆ ಅಂಗನವಾಡಿ ಆಹಾರ: ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗಾಗಿ ಅಂಗನವಾಡಿಗಳಿಗೆ ಸರಬರಾಜಾಗುವ ಆಹಾರಧಾನ್ಯವನ್ನು ಅವರ ಮನೆಗಳಿಗೆ ತೆರಳಿ ವಿತರಿಸಲಾಗುತ್ತಿದೆ. ಹೊರರಾಜ್ಯಗಳಿಂದ ಬಂದವರ ಬಗ್ಗೆ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಆರ್‌ಸಿಎಚ್ ಅಧಿಕಾರಿ ಡಾ.ಲಕ್ಷ್ಮಿಕಾಂತ, ಆಯುಷ್ ವೈದ್ಯಾಧಿಕಾರಿ ಡಾ.ಪ್ರಕಾಶ್ ರಾಜಾಪೂರ ಇದ್ದರು.

ಆಶಾ ಮತ್ತು ಅಂಗನವಾಡಿ ಶಿಕ್ಷಕರನ್ನು ಕೂಡ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಕೊರೊನಾ ವಾರಿಯರ್ಸ್‍ಗಳಿಗೆ ಹೆಚ್ಚಿನ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.