ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸುತ್ತೋಲೆಗಳತ್ತ ಗಮನ ಇರಲಿ: ಬ್ಯಾಂಕುಗಳ ಅಧಿಕಾರಿಗಳಿಗೆ ಡಿಸಿ ಸೂಚನೆ

ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚನೆ
Last Updated 20 ಡಿಸೆಂಬರ್ 2018, 14:32 IST
ಅಕ್ಷರ ಗಾತ್ರ

ಯಾದಗಿರಿ: ‘ಸರ್ಕಾರದ ಸುತ್ತೋಲೆಗಳನ್ನು ನಿರ್ಲಕ್ಷಿಸುವುದರಿಂದ ಸರ್ಕಾರದ ಆದೇಶಗಳ ಮಾಹಿತಿ ಇಲ್ಲದೆ ಅನೇಕ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗುತ್ತಿದೆ. ಆದ್ದರಿಂದ, ಬ್ಯಾಂಕ್‌ ಅಧಿಕಾರಿಗಳು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ತತಕ್ಷಣ ಅಧ್ಯಯನ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಮೂಲಕ ಗುರುವಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್‌ ಅಧಿಕಾರಿಗಳು ಕೇವಲ ರಿಸರ್ವ್‌ ಬ್ಯಾಂಕ್ ಆದೇಶ ಸುತ್ತೋಲೆಗಳತ್ತ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. ಉಳಿದ ಸುತ್ತೋಲೆಗಳತ್ತ ಅಷ್ಟಾಗಿ ಗಮನಹರಿಸದೇ ಇರುವುದರಿಂದ ಆಡಳಿತ ವ್ಯವಸ್ಥೆಯ ಬಗ್ಗೆ ಅಸಮರ್ಪಕ ಮಾಹಿತಿ ಹೊಂದಿರುತ್ತಾರೆ. ಸರ್ಕಾರದ ಆದೇಶ ಮಾಹಿತಿ ಹೊತ್ತು ಸೌಲಭ್ಯ ಕೇಳಲು ಬರುವ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ಕೊರತೆಯಿಂದಾಗಿ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ದೂರು ಸಾಕಷ್ಟಿದೆ. ಈ ಸಮಸ್ಯೆ ಕೇವಲ ಬ್ಯಾಂಕಿಗೆ ಸಂಬಂಧಿಸಿಲ್ಲ. ಜಿಲ್ಲಾಡಳಿತಕ್ಕೂ ತಟ್ಟುತ್ತದೆ. ಆದ್ದರಿಂದ, ಬ್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಸರ್ಕಾರದ ಸುತ್ತೋಲೆಗಳತ್ತ ಕಣ್ಣು ಹಾಯಿಸಬೇಕು’ ಎಂದು ಸಲಹೆ ನೀಡಿದರು.

‘ಬೆಳೆಸಾಲ ಪಡೆದ ಎಲ್ಲಾ ರೈತರು ಕಡ್ಡಾಯವಾಗಿ ಟೋಕನ್ ಪಡೆಯುವಂತೆ ಮತ್ತು ರೈತರಿಗೆ ನೀಡಿದ ದಿನಾಂಕಗಳಂದು ಬ್ಯಾಂಕ್‌ಗೆ ಹಾಜರಾಗುವಂತೆ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಹಳ್ಳಿಗಳಲ್ಲಿ ಡಂಗೂರ ಹೊಡೆಸಬೇಕು’ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

‘ಬೆಳೆ ಸಾಲ ಮನ್ನಾ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳ ತಂಡವನ್ನು ಸಂಪರ್ಕಿಸಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇನ್ನಿತರ ಸಮಸ್ಯೆಗಳು ಇದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯನ್ನು ಸಂಪರ್ಕಿಸಿ, ಚರ್ಚೆ ನಡೆಸಬೇಕು. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ಸಾಲಮನ್ನಾ ಯೋಜನೆಯ ಲಾಭ ಪಡೆಯಬೇಕು’ ಎಂದರು.

‘ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲಮನ್ನಾ ಯೋಜನೆಗಾಗಿ ರೈತ ಫಲಾನುಭವಿಗಳಿಗೆ ಸಂಬಂಧಿಸಿದ ಬ್ಯಾಂಕ್ ಶಾಖೆಗಳಲ್ಲಿ ಟೋಕನ್ ನೀಡಲಾಗುತ್ತಿದ್ದು, ಟೋಕನ್‌ನಲ್ಲಿ ನಮೂದಿಸಿದ ದಿನಾಂಕದಂದು ರೈತರು ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಹೋಗಬೇಕು’ ಎಂದು ಜಿಲ್ಲಾಧಿಕಾರಿ ರೈತರಿಗೆ ಮನವಿ ಮಾಡಿದರು.

‘ಕರ್ನಾಟಕ ಸರ್ಕಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಒಂದು ತಂತ್ರಾಂಶ ಹೊರತಂದಿದೆ. ಪ್ರತಿಯೊಬ್ಬ ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಸರ್ವೆ ನಂಬರ್‌ನ ಮಾಹಿತಿ ತಪ್ಪದೇ ಸಲ್ಲಿಸಬೇಕು. ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ’ ಎಂದು ವಿವಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಜಂಟಿ ಕೃಷಿ ನಿರ್ದೇಶಕಿ ದೇವಿಕಾ, ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT