ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್ ಬಿಮಾ ಯೋಜನೆ ಜಾಗೃತಿ ಮೂಡಿಸಿ

ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚನೆ
Last Updated 7 ಡಿಸೆಂಬರ್ 2018, 13:14 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಮಳೆ ಕೊರತೆ ಇರುವುದರಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಹೆಚ್ಚಿನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ವಿಮೆ ನೋಂದಾಯಿಸಲು ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಾಯಿಸಲು ಇನ್ನು ಒಂದು ವಾರ ಕಾಲಾವಕಾಶ ಇದೆ. ಬೆಳೆ ವಿಮೆ ನೋಂದಣಿಗಾಗಿ ಪ್ರತಿ ಹೋಬಳಿಗೆ ನೀಡಿದ ಗುರಿಯನ್ನು ತಲುಪಲು ಶ್ರಮಿಸಬೇಕು. ಅದಕ್ಕಾಗಿ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಮಾಡಬೇಕು’ ಎಂದು ತಿಳಿಸಿದರು.

‘2018-19ನೇ ಸಾಲಿನ ಹಿಂಗಾರು ಹಂಗಾಮಿನ ಜೋಳ (ಮಳೆ ಆಶ್ರಿತ) ಪ್ರತಿ ಎಕರೆಗೆ ₹204 , ಜೋಳ (ನೀರಾವರಿ) ಪ್ರತಿ ಎಕರೆಗೆ ₹240, ಕಡಲೆ (ಮಳೆಯಾಶ್ರಿತ ಮತ್ತು ನೀರಾವರಿ)-₹169., ಕುಸುಬೆ (ಮಳೆ ಆಶ್ರಿತ)- ₹156 ಆಗಿದ್ದು, ಈ ಬೆಳೆಗಳ ವಿಮಾ ಪಾವತಿಗೆ ಡಿ.15ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಶೇಂಗಾ ಪ್ರತಿ ಎಕರೆಗೆ ₹342, ಸೂರ್ಯಕಾಂತಿ ₹252 , ಭತ್ತ ₹516 ಆಗಿದ್ದು, ಈ ಬೆಳೆಗಳ ವಿಮಾ ಪಾವತಿಗೆ 2019ರ ಫೆ. 28ಕೊನೆಯ ದಿನವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸುಮಾರು 14 ಲಕ್ಷ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಅಂದಾಜು 280 ಬ್ಯಾಂಕ್ ಶಾಖೆಗಳಿರಬೇಕು. ಪ್ರಸ್ತುತ 97 ವಾಣಿಜ್ಯ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ಶಾಖೆಗಳನ್ನು ತೆರೆಯಲು ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ ಮಾತನಾಡಿ,‘ಜಿಲ್ಲೆಯ 66 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 13,719 ರೈತ ಸದಸ್ಯರು ಸಾಲಮನ್ನಾ ಫಲಾನುಭವಿಗಳಾಗಿದ್ದಾರೆ. 8,548 ಜನ ಸ್ವಯಂ ದೃಢೀಕರಣ ಪತ್ರ ಸಲ್ಲಿಸಿದ್ದು, ಈ ಎಲ್ಲಾ ರೈತರ ಡಾಟಾ ನಮೂದು ಮಾಡಲಾಗಿದೆ. ಸಹಕಾರ ಅಭಿವೃದ್ಧಿ ಅಧಿಕಾರಿಗಳು ನ.30ರ ಹೊರಬಾಕಿಯಲ್ಲಿರುವ 926 ರೈತರಲ್ಲಿ 339 ರೈತರ ಖಾತೆಗಳಿಗೆ ಅನುಮೋದನೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT