ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ ಅಭಿಯಾನ ಯಶಸ್ವಿಗೆ ಸೂಚನೆ

ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ
Last Updated 23 ಜೂನ್ 2018, 17:26 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 14ರವರೆಗೆ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ ಅಭಿಯಾನದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಅಭಿಯಾನ ಅನುಷ್ಠಾನ'ದ ಪ್ರಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಜಿಲ್ಲೆಯಲ್ಲಿ ಜೂನ್ 25ರಿಂದ ಪ್ರವಾಸ ಮಾಡಲಿದ್ದಾರೆ. ಗ್ರಾಮ ಸ್ವರಾಜ್ ಅಭಿಯಾನದ ಅಡಿಯಲ್ಲಿ ಜೂನ್ 1ರಿಂದ ಇದುವರೆಗೂ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ಅವರಿಗೆ ಮಾಹಿತಿ ಒದಗಿಸಬೇಕು. ಅಲ್ಲದೇ, ಅವರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲಿಸಲಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು’ ಎಂದು ಹೇಳಿದರು.

‘ಗ್ರಾಮ ಸ್ವರಾಜ್ ಅಭಿಯಾನದಲ್ಲಿ ಬರುವ ವಿವಿಧ ಯೋಜನೆಗಳಾದ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ ಯೋಜನೆ, ಉಜಾಲ ಯೋಜನೆ, ಪ್ರಧಾನಮಂತ್ರಿ ಜನಧನ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಮಿಷನ್ ಇಂದ್ರಧನುಷ್, ಪೋಷಣ್ ಅಭಿಯಾನ್ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಗ್ರಾಮ ಸ್ವರಾಜ್ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಭೆ, ಬ್ಯಾನರ್, ಪೋಸ್ಟರ್‌ಗಳ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಕೈಗೊಳ್ಳಬೇಕಿರುವ ಕಾರ್ಯಗಳು ಮತ್ತು ಅವುಗಳಿಗೆ ತಗಲುವ ವೆಚ್ಚಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಲಿಖಿತ ರೂಪದಲ್ಲಿ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.

‘ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿ ಜಿಲ್ಲೆಯಲ್ಲಿ ಇದುವರೆಗೂ 16,881 ಕುಟುಂಬಗಳಿಗೆ ಅಡುಗೆಅನಿಲ ಸಂಪರ್ಕ ಕಲ್ಪಿಸಲಾಗಿದೆ. ಅಡುಗೆ ಅನಿಲ ಸಂಪರ್ಕ ಇಲ್ಲದ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಿಪಿಎಲ್ ಪಡಿತರ ಚೀಟಿದಾರರು ಆಯಾ ವ್ಯಾಪ್ತಿಯ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿ ಉಚಿತವಾಗಿ ಹೊಸ ಅಡುಗೆ ಅನಿಲ ಸಂಪರ್ಕ ಪಡೆಯಬಹುದಾಗಿದೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಚ್. ನಾಗಭೂಷಣ್ ಸಭೆಯ ಗಮನಕ್ಕೆ ತಂದರು.

‘ಲೀಡ್ ಬ್ಯಾಂಕ್ ಅಧಿಕಾರಿಗಳು, ಜಿಲ್ಲೆಯಲ್ಲಿ 55 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನಧನ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲಾಗಿದೆ ಎಂದು ತಿಳಿಸಿದರು. ಆಗ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ 27 ಬ್ಯಾಂಕ್‌ಗಳ 117 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಶಾಖೆಗೊಂದು ಕಾರ್ಯಕ್ರಮ ಹಮ್ಮಿಕೊಂಡರೂ 117 ಕಾರ್ಯಕ್ರಮಗಳಾಗುತ್ತವೆ. ಈ ಮೂಲಕ ಯೋಜನೆಗಳ ಪ್ರಚಾರ ಮಾಡಿ, ಜನರಿಗೆ ಅವುಗಳ ಲಾಭ ತಲುಪಿಸಬೇಕು’ ಎಂದು ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಆರ್‌.ದೇವಿಕಾ ಮಾತನಾಡಿ,‘ಕೃಷಿ ಕಲ್ಯಾಣ ಅಭಿಯಾನದಡಿ ಜಿಲ್ಲೆಯ 25ಗ್ರಾಮಗಳಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಲಾಗಿದೆ. ಜತೆಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಕೈಗೊಂಡು ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಮಣ್ಣು ಆರೋಗ್ಯ ಚೀಟಿ, ತೊಗರಿ ಬೆಳೆ ಕಿರುಚೀಲಗಳನ್ನು ವಿತರಿಸಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಇದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಿಪಿಎಲ್ ಪಡಿತರ ಚೀಟಿದಾರರು ಆಯಾ ವ್ಯಾಪ್ತಿಯ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿ ಉಚಿತವಾಗಿ ಹೊಸ ಅಡುಗೆ ಅನಿಲ ಸಂಪರ್ಕ ಪಡೆಯಬಹುದು.
- ಜೆ.ಮಂಜುನಾಥ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT