ಗುರುವಾರ , ಆಗಸ್ಟ್ 5, 2021
23 °C
ಚಾಲನಾ ಪರವಾನಗಿ, ಮೋಟಾರು ನೋಂದಣಿ ಅರ್ಜಿ ಶೀಘ್ರ ವಿಲೇವಾರಿಗೆ ಸೂಚನೆ

ಸರ್ಕಾರಿ ಕಚೇರಿಗಳಿಗೆ ಯಾದಗಿರಿ ಡಿಸಿ ಧಿಡೀರ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಜಿಲ್ಲಾ ಖಜಾನೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಶನಿವಾರ ಧಿಡೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಅವರು, ಹಾಜರಾತಿ ಪರಿಶೀಲಿಸಿದರು. ನಂತರ ಎಲ್ಎಲ್ಆರ್ ಮೋಟಾರು ಚಾಲನಾ ಪರವಾನಗಿ ಹಾಗೂ ಮೋಟಾರು ನೋಂದಣಿಗಾಗಿ ಸಲ್ಲಿಸಿದ ಅರ್ಜಿಗಳ ಸ್ವೀಕೃತಿ, ಅವುಗಳ ವಿಲೇವಾರಿ ಹಾಗೂ ಬಾಕಿಯಿರುವ ಅರ್ಜಿಗಳ ಪರಿಶೀಲನೆ ಮಾಡಿ, ಬಾಕಿಯಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಕ್ರಮ ವಹಿಸಲು ಸಂಬಂಧಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಿಗದಿಗಿಂತ ಹೆಚ್ಚು ಮರಳನ್ನು ಸಾಗಿಸುತ್ತಿರುವ ಲಾರಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿರುವ ಪ್ರಕರಣಗಳು ಹಾಗೂ ಟಂಟಂ, ಜೀಪ್ ಹಾಗೂ ಇನ್ನಿತರೆ ವಾಹನಗಳ ಮೇಲೆ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹಾಗೂ ವಾಹನಗಳ ಟಾಪ್ ಮೇಲೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಾಹನ ವಶಕ್ಕೆ ಪಡೆದು ವಾಹನದ ಮಾಲೀಕರಿಗೆ ದಂಡ ವಿಧಿಸಲಾದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಡ್ಡಾಯವಾಗಿ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ವಾಹನಗಳ ಪಾರ್ಕಿಂಗ್‍ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಆಸನದ ವ್ಯವಸ್ಥೆ ಕೈಗೊಳ್ಳಲು ಹಾಗೂ ಎಲ್ಎಲ್ಆರ್, ಮೋಟಾರು ವಾಹನ ಚಾಲನಾ ಪರವಾನಗಿಗಾಗಿ ಶುಲ್ಕ ಕಟ್ಟುವ ಕೌಂಟರ್‌ಗಳಲ್ಲಿ ಅಂತರ ಕಾಯ್ದುಕೊಳ್ಳಲು, ಮಾಸ್ಕ್‌ ಧರಿಸಲು ಸೂಚನೆ ನೀಡಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ಬಿಲ್ ಪಾಸ್‍ಗೆ ವಿಳಂಬ ಬೇಡ: ನಂತರ ಜಿಲ್ಲಾ ಖಜಾನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಹಾಜರಾತಿ ಪರಿಶೀಲಿಸಿ ನಂತರ ವಿವಿಧ ಇಲಾಖೆಗಳಿಂದ ಸಲ್ಲಿಸಿದ ವೇತನ ಬಿಲ್ಲುಗಳು, ಪಿಂಚಣಿಗೆ ಸಂಬಂಧಪಟ್ಟ ಬಿಲ್ಲುಗಳ ಸ್ವೀಕೃತಿ ಹಾಗೂ ಬಿಲ್ ಪಾಸ್ ಮಾಡುವುದರ ಬಗ್ಗೆ ಪರಿಶೀಲನೆ ಮಾಡಿದರು. ವಿಳಂಬ ಮಾಡದೇ ಬಿಲ್ ಪಾಸು ಮಾಡಲು ಸಂಬಂಧಪಟ್ಟ ಜಿಲ್ಲಾ ಖಜಾನಾಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಖಜಾನೆ ಭದ್ರತಾ ಕೋಣೆಯನ್ನು ಪರಿಶೀಲಿಸಿ, ಕಚೇರಿಯಲ್ಲಿ ನಿರ್ಮಿಸಲಾದ ಭದ್ರತಾ ಕೋಣೆಯಂತೆಯೇ ಜಿಲ್ಲಾಡಳಿತ ಭವನದಲ್ಲಿ ನಿಗದಿಪಡಿಸಿದ ಜಿಲ್ಲಾ ಖಜಾನಾಧಿಕಾರಿಗಳ ಕಾರ್ಯಾಲಯದಲ್ಲಿಯೂ ಸುವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪ್ರಭಾರ ಆಯುಕ್ತ ಬಕ್ಕಪ್ಪ ಹಾಗೂ ವಾಹನ ನಿರೀಕ್ಷಕ ವೆಂಕಟಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು