ಪಟಾಕಿ ಧಮಾಕ ಸಂಭ್ರಮಕ್ಕೆ ನಿರ್ಬಂಧ

7
ದೀಪಾವಳಿ: ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸುಡಲು ಅವಕಾಶ

ಪಟಾಕಿ ಧಮಾಕ ಸಂಭ್ರಮಕ್ಕೆ ನಿರ್ಬಂಧ

Published:
Updated:
Deccan Herald

ಯಾದಗಿರಿ: ಸುಪ್ರೀಂಕೋರ್ಟ್‌ ನಿರ್ದೇಶನದ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೀಪಾವಳಿ ಹಬ್ಬದಂದು ಪಟಾಕಿ ಧಮಾಕ ನಿಯಂತ್ರಿಸಲು ಮುಂದಾಗಿರುವುದು ಜನರಿಗೆ ನಿರಾಶೆ ಮೂಡಿಸಿದೆ.

ದೀಪಾವಳಿ ಹಬ್ಬದ ದಿನಗಳಂದು ನ. 5ರಿಂದ ನ.8ರವರೆಗೆನಿತ್ಯ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸುಡಲು ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಪಟಾಕಿಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ’ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂಕೋರ್ಟ್, ದೀಪಾವಳಿ ಹಬ್ಬದಂದು ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅವರು ರಾಜ್ಯದಲ್ಲಿನ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ನಿರ್ದೇಶನ ಯಶಸ್ವಿ ಕಷ್ಟ: ಸರ್ಕಾರದ ಆದೇಶ ಪಾಲನೆಗೆ ಮುಂದಾಗಿರುವ ಜಿಲ್ಲಾಡಳಿತ ಸಿಬ್ಬಂದಿ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪಡಿಪಾಟಿಲು ಬೀಳುತ್ತಿದೆ. ಜಿಲ್ಲಾಡಳಿತದ ವಿವಿಧ ಇಲಾಖೆಗಳಲ್ಲಿ ಶೇ 60ರಷ್ಟು ಸಿಬ್ಬಂದಿ ಕೊರತೆ ಇದೆ. ಈಗಿರುವ ಸಿಬ್ಬಂದಿ ಇಲಾಖೆಯ ನಿತ್ಯದ ಕರ್ತವ್ಯದಲ್ಲಿ ಹೈರಾಣಾಗಿದ್ದಾರೆ. ದಸರಾ ರಜೆ ಕೂಡ ಪಡೆಯದೇ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಪಟಾಕಿ ಧಮಾಕ ನಿಯಂತ್ರಣಕ್ಕೆ ವಿಶೇಷವಾಗಿ ಪೊಲೀಸರ ಕರ್ತವ್ಯ ಪ್ರಧಾನವಾಗಿರುತ್ತದೆ. ಜಿಲ್ಲಾ ಪೊಲೀಸ್‌ ಇಲಾಖೆ ಕೂಡ ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ರಜೆ ನೀಡದೆ ದುಡಿಸಿಕೊಳ್ಳುತ್ತಿದೆ. ದೀಪಾವಳಿ ರಜೆ ಕೋರಿ ಕಾನ್‌ಸ್ಟೆಬಲ್‌ಗಳು ಹಿರಿಯ ಅಧಿಕಾರಿಗಳಿಗೆ ಮನವಿ ಅರ್ಜಿ ಸಲ್ಲಿಸಿದ್ದರೂ, ರಜೆ ನೀಡುವಲ್ಲಿ ಅಧಿಕಾರಿಗಳು ಯೋಚಿಸುವಂತಾಗಿದೆ. ಇಂಥಾ ಸಂದರ್ಭದಲ್ಲಿ ಪಟಾಕಿ ಧಮಾಕ ನಿಯಂತ್ರಿಸಲು ನಿರ್ದೇಶನ ಬಂದಿದೆ. ಅಷ್ಟಕ್ಕೂ ಪಟಾಕಿ ಸುಡುವುದನ್ನೇ ಕಾದು ನಿಯಂತ್ರಿಸಲು ಹೇಗೆ ಸಾಧ್ಯ?’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಬೇಸರ ತೋಡಿಕೊಂಡರು.

ಸಂಭ್ರಮದ ಮೇಲೆ ನಿಯಂತ್ರಣ ಸಲ್ಲದು: ಪರಿಸರ ಮಾಲಿನ್ಯ ಕೇವಲ ಪಟಾಕಿ ಸುಡುವುದರಿಂದ ಮಾತ್ರ ಆಗುತ್ತಿಲ್ಲ. ಯಾದಗಿರಿಯಂತಹ ನಗರದಲ್ಲಿ ವರ್ಷವಾದರೂ ಸ್ವಚ್ಛವಾಗದ ತೆರೆದ ಚರಂಡಿ ತ್ಯಾಜ್ಯ, ಧೂಳಿನಿಂದ ತುಂಬಿರುವ ಮುಖ್ಯ ರಸ್ತೆಗಳು, ವಿವಿಧ ರಾಸಾಯನಿಕಗಳನ್ನು ಧರೆಗೆ ಇಂಗಿಸುತ್ತಿರುವ ಕಾರ್ಖಾನೆಗಳು, ಪ್ಲಾಸ್ಟಿಕ್‌ ಬಳಕೆ ನಿರಂತರ ಪರಿಸರದ ಮೇಲೆ ದಾಳಿ ಮಾಡುತ್ತಿರುವ ಪ್ರಕ್ರಿಯೆಗಳು. ಸುಪ್ರೀಂ ಕೋರ್ಟ್ ಮೊದಲು ಇಂಥಾ ಕಡೆ ಗಮನಹರಿಸಲಿ. ವರ್ಷಕ್ಕೊಂದು ಬಾರಿ ಸಂಭ್ರಮಿಸುವ ಹಬ್ಬದ ಮೇಲೆ ಹಿಡಿತ ಸಾಧಿಸುವುದು ಸರಿಯಲ್ಲ’ ಎಂದು ಪಟಾಕಿ ವ್ಯಾಪಾರಿ ಸೋಹನ್‌ ಪ್ರಸಾದ್ ಸುಪ್ರಿಂಕೋರ್ಟ್‌ ಅಸಮಾಧಾನ ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !