ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಿ

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಕಟ್ಟಿನಿಟ್ಟಿನ ಸೂಚನೆ
Last Updated 6 ಮಾರ್ಚ್ 2021, 16:45 IST
ಅಕ್ಷರ ಗಾತ್ರ

ಯಾದಗಿರಿ: ‘ಶಿಕ್ಷಣ, ಕೃಷಿ, ಆರೋಗ್ಯ, ಜೆಸ್ಕಾ ಸೇರಿದಂತೆ ವಿವಿಧ ಇಲಾಖೆಗಳು ರೈತರು, ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಒದಗಿಸಿಕೊಡಬೇಕು’ ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಮಾತನಾಡಿದ ಅವರು, ‘ಅಧಿಕಾರಿಗಳು ಸ್ಥಳೀಯವಾಗಿ ಲಭ್ಯ ಇರದ ಕಾರಣ ಕೆಲಸಗಳು ಶೀಘ್ರವಾಗಿ ಆಗುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಪಕ್ಕದ ಜಿಲ್ಲೆಗಳಿಂದ ಓಡಾಡದೇ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ಇಲ್ಲವಾದರೇ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೊದಲಿಗೆ ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ ಬೇರೆಡೆಗೆ ಶಿಕ್ಷಕರ ನಿಯೋಜಿಸುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಬೇರೆ ಇಲಾಖೆಗೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಕೂಡಲೇ ಮರಳಿ ಕರೆತಂದು ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಚಿವರು ಕಟ್ಟಪ್ಪಣೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಅಶೋಕ ಬಿ ಭಜಂತ್ರಿ ಮಾತನಾಡಿ, ‘ಜಿಲ್ಲೆಯಲ್ಲಿ 196 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇನ್ನು 15 ದಿನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಈ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು’ ಎಂದು ಸಭೆಗೆ ತಿಳಿಸಿದರು.

ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ‘ಜಿಲ್ಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದ್ದು, ಶೀಘ್ರವಾಗಿ ಕೊರತೆ ನೀಗಿಸಿದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಅಭಿವೃದ್ಧಿಗಾಗಿ ನೀಡಿರುವ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಇನ್ನು ಶಾಲೆಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಸಚಿವ ಚವಾಣ್‌, ‘ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ನೀರು, ಶೌಚಾಲಯ, ಕಾಂಪೌಂಡ್, ಮೈದಾನ ಸೇರಿ ಎಲ್ಲವೂ ಇರಬೇಕು. ಯಾವ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ ಎಂಬುವುದನ್ನು ಗುರುತಿಸಿ ವರದಿ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ‘ಜಿಲ್ಲೆಯ ಶಾಲೆಗಳಿಗೆ ಕಟ್ಟಡ ಮಂಜೂರಾದರೂ ಎಷ್ಟೋ ಕಡೆ ಸ್ಥಳವಿಲ್ಲದೇ ಕಟ್ಟಡಗಳನ್ನು ಕಟ್ಟಲಾಗಿಲ್ಲ. ಹಾಗಾಗಿ ಮೊದಲು ಜಾಗ ಗುರುತಿಸುವಂತೆ’ ಡಿಡಿಪಿಐಗೆ ಸೂಚಿಸಿದರು.

ಶಾಸಕ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಧ್ಯಕ್ಷ ರಾಜೂಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 108 ಆಂಬುಲೆನ್ಸ್‌ ಸಮಸ್ಯೆಯಾಗುತ್ತಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಹುತೇಕ ಆಂಬುಲೆನ್ಸ್ ಹಳೆಯವಾಗಿದ್ದು, ಹೊಸ ವಾಹನಗಳನ್ನು ತರಿಸಲು ಕ್ರಮಕೈಗೊಳ್ಳಬೇಕು. ಇದರ ಬಗ್ಗೆ ವರದಿ ತರಿಸಿಕೊಂಡು ಸಚಿವರು ಹಾಗೂ ಶಾಸಕರಿಗೆ ಮಾಹಿತಿ ನೀಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಅವರಿಗೆ ನಿರ್ದೇಶನ’ ನೀಡಿದರು.

‘ಸುರಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ನಿಧಿ ಆರಂಭಿಸಲು ತಗಲುವ ವೆಚ್ಚವನ್ನು ತಾಯಿಯ ಹೆಸರಿನಲ್ಲಿ ಸ್ವಂತ ಖರ್ಚಿನಲ್ಲಿ ಭರಿಸಲಾಗುವುದು. ಅಗತ್ಯವಿದ್ದರೆ, ಡಯಾಲಿಸಿಸ್ ಕೇಂದ್ರಕ್ಕೂ ಯಂತ್ರ ಕೊಡಿಸಲಾಗುವುದು’ ಎಂದು ರಾಜೂಗೌಡ ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಮಾತನಾಡಿ, ‘ಸುರಪುರ ತಾಲ್ಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಯಂತ್ರವಿದೆ. ಆದರೆ, ವೈದ್ಯರಿಲ್ಲ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಆರೋಪಗಳು ಕೇಳಿಬರುತ್ತಿದೆ. ಲಾಕ್‍ಡೌನ್ ನಂತರದಲ್ಲಿ ಬಸ್ ಸಂಚಾರಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ವಿಭಾಗೀಯ ನಿಂಯತ್ರಣಧಿಕಾರಿ ಎಂ.ಪಿ.ಶ್ರೀಹರಿಬಾಬು ಅವರಿಗೆ ಸಚಿವರು ಸೂಚನೆ ನೀಡಿದರು.

‘ಕೃಷಿ ಇಲಾಖೆಯ ವತಿಯಿಂದ ರೈತರಿಗೆ ತಾಡಪಲ್ ವಿತರಣೆ, ಬೀಜ ವಿತರಣೆಗಳು ಸರ್ಮಪಕವಾಗಿ ರೈತರಿಗೆ ತಲುಪುವಂತಾಗಬೇಕು. ಇದರ ಬಗ್ಗೆ ಗಮನ ಹರಿಸುವಂತೆ' ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಇಲ್ಲಿಯವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಿದ ಪರಿಹಾರದ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ಅವರನ್ನು ಇದೇ ವೇಳೆ ಸಚಿವರು ಅಭಿನಂದಿಸಿದರು.

ಸಾರಿಗೆ ಪ್ರಾದೇಶಿಕ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಜರುಗಿಸುವಂತೆ ಮತ್ತು ಓವರ್‌ಲೋಡ್ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಚಿವರು ಸಾರಿಗೆ ಅಧಿಕಾರಿಗಳಿಂದ ಪಡೆದುಕೊಂಡರು.

ಜಿಲ್ಲೆಯಲ್ಲಿ ಅಪರಾಧ ತಡೆಯಲು ಆಧುನಿಕ ತಂತ್ರಜ್ಞಾನಗಳಾಧಾರಿತ ಸಿಸಿಟಿವಿ ಕ್ಯಾಮೆರಾ ಮತ್ತು ಸ್ಪೀಕರ್ ಬಳಸುವಂತೆ ಸಚಿವ ಪ್ರಭು ಚವಾಣ್‌ ಹಾಗೂ ಶಾಸಕ ರಾಜೂಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ರಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮಗೌಡ ರೋಟ್ನಡಗಿ, ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿ ಇದ್ದರು.

***

ಶಹಾಪುರದಲ್ಲಿ ಹೈವೋಲ್ಟೇಜ್‌ ಸಮಸ್ಯೆ

‘ಶಹಾಪುರ ಮತಕ್ಷೇತ್ರದಲ್ಲಿ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ವೋಲ್ಟೇಜ್ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರಿಯಾಗಿ 7 ತಾಸು ಏಕೆ ವಿದ್ಯುತ್ ನೀಡುತ್ತಿಲ್ಲ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಜೆಸ್ಕಾಂ ಎಂಜಿನಿಯರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಈ ಕುರಿತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಬಗೆಹರಿಸಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

***

ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗೆ ಬಂದಾಗ ಔಷಧಿಯನ್ನು ಹೊರಗಡೆಯಿಂದ ತರುವಂತೆ ಚೀಟಿ ಬರೆದು ಕೊಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಇನ್ಮುಂದೆ ಹೊರಗಡೆ ಕಳುಹಿಸದೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು

- ಪ್ರಭು ಚವಾಣ್‌,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT