ಶುಕ್ರವಾರ, ಏಪ್ರಿಲ್ 16, 2021
21 °C
ಮಕರ ಸಂಕ್ರಾಂತಿ ಹಬ್ಬ ಸರಳ ಆಚರಣೆ, ಎಳ್ಳು ಬೆಲ್ಲ ಹಂಚಿ ಶುಭಾಶಯ ವಿನಿಮಯ

ಕೃಷ್ಣಾ, ಭೀಮಾ ನದಿಯಲ್ಲಿ ಭಕ್ತರ ಪುಣ್ಯಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಾದ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಬೆಳಿಗ್ಗೆಯೇ ಮನೆ ಮುಂದೆ ವಿವಿಧ ಬಣ್ಣದ ರಂಗೋಲಿ ಬಿಡಿಸಲಾಗಿತ್ತು.

ಎಳ್ಳು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬಂದಿತು. ಸಿಹಿ ತಯಾರಿಸಿರುವುದು ಕಂಡು ಬಂದಿತು.

ಕರಿ, ಬಿಳಿ ಎಳ್ಳು, ಬೆಲ್ಲ, ಪುಟಾಣಿ, ಕೊಬ್ಬರಿ, ಬಾದಾಮಿ, ಕಬ್ಬು, ಬಾಳೆಹಣ್ಣು, ಹಸಿ ಕಡಲೆ ಬೀರಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು’ ಎನ್ನುವುದು ಸಾಮಾನ್ಯವಾಗಿತ್ತು.

ಸಂಜೆ ವೇಳೆ ಹೆಣ್ಣುಮಕ್ಕಳು ಅಕ್ಕಪಕ್ಕದ ಮನೆಗಳಿಗೆ ತೆರಳಿ ಎಳ್ಳು ಹಂಚಿದರು. ಚಿಕ್ಕಮಕ್ಕಳ ಸಂಭ್ರಮ ಎದ್ದುಕಾಣುತ್ತಿತ್ತು.

ನದಿಗಳಲ್ಲಿ ಪುಣ್ಯಸ್ನಾನ: ಜಿಲ್ಲೆಯ ಕೃಷ್ಣಾ, ಭೀಮಾ ನದಿ ತೀರದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸಾರ್ವಜನಿಕರು ಪುಣ್ಯಸ್ನಾನ ಮಾಡಿದರು.

ನಗರದ ಹೊರವಲಯದ ಭೀಮಾ ನದಿ ಸೇತುವೆ ಬಳಿ ಪುಣ್ಯ ಸ್ನಾನ ಮಾಡಿದರು. ಅಲ್ಲದೆ ಭೀಮಾ, ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಹೊಳೆದಂಡಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಹೊಳೆ ದಂಡಿಗೆ ಜನಜಂಗುಳಿ: ವಡಗೇರಾ ತಾಲ್ಲೂಕು ಹಾಲಗೇರಾ ಗ್ರಾಮದ ಹೊರವಲಯದಲ್ಲಿ ಭೀಮಾ ನದಿ ಹೊಳೆದಂಡಿಗೆ ಗ್ರಾಮಸ್ಥರು ಸೇರಿ ಸಾಮೂಹಿಕ ಭೋಜನೆ
ಸವಿದರು.

ವಿವಿಧ ಭಕ್ಷ್ಯಗಳ ತಯಾರಿ: ಮಕರ ಸಂಕ್ರಾಂತಿ ಅಂಗವಾಗಿ ಮನೆಗಳಲ್ಲಿ ವಿವಿಧ ಭಕ್ಷ್ಯ ಭೋಜನ ಸಿದ್ಧ ಮಾಡಲಾಗಿತ್ತು. ನದಿ ದಂಡೆಗೆ ಬುತ್ತಿ ಕಟ್ಟಿಕೊಂಡು ಹೋಗಿ ಕುಟುಂಬ, ಸಂಬಂಧಿಕರು, ಗ್ರಾಮಸ್ಥರು ಸೇರಿ ಭೋಜನ ಸವಿದರು.

ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಹೂರಣ ಹೋಳಿಗೆ, ಬದನೆಕಾಯಿ ಪಲ್ಯೆ, ಬಾರ್ತಾ, ಪುಂಡಿಪಲ್ಯೆ ಸೇರಿದಂತೆ ವಿವಿಧ ಖಾದ್ಯ ತಯಾರಿಸಲಾಗಿತ್ತು.

ಗವಿಸಿದ್ದಲಿಂಗೇಶ್ವರ ದೇವಸ್ಥಾನ ಭಕ್ತರು: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಗವಿಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಕ್ತರು ದೇವರ ದರ್ಶನ
ಪಡೆದರು.

ಗವಿ ಮೇಲೆಗಡೆಯಿಂದ ನೀರು ಧುಮ್ಮಿಕ್ಕುತ್ತಿದ್ದು, ಭಕ್ತರ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಆಟೊ, ಟಂಟಂ, ಕಾರು, ಬೈಕ್‌ಗಳಲ್ಲಿ ಭಕ್ತರು ತೆರಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.