ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಸಮರ್ಪಕವಾಗಿ ಪೂರೈಕೆ ಆಗದ ಕುಡಿಯುವ ನೀರು

ಶಹಾಪುರ ನಗರದಲ್ಲಿ ನಗಣ್ಯವಾದ ನೀರು ಬಿಡುವ ವೇಳಾಪಟ್ಟಿ: ನಾಗರಿಕರ ಆರೋಪ
Published 23 ಏಪ್ರಿಲ್ 2024, 5:10 IST
Last Updated 23 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಶಹಾಪುರ: ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹಿಸಿರುವ ನೀರಿನ ಮೇಲೆ 31 ವಾರ್ಡ್ ಜನತೆ ಅವಲಂಬಿತರಾಗಿದ್ದಾರೆ. ನಗರಕ್ಕೆ ನೀರು ಪೂರೈಕೆ ಮಾಡುವ ಹೊಣೆ ಹೊತ್ತಿರುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಹಣೆಯ ಕಾರ್ಯ ಅಸಮರ್ಪಕವಾಗಿದ್ದರಿಂದ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತೆ ಆಗಿದೆ.

‘ನಗರೋತ್ಥಾನ-3 ಹಂತದಲ್ಲಿ $4 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾಮಗಾರಿ ಪೂರ್ಣಗೊಳಿಸಿತ್ತು. ನಂತರ ಎರಡು ವರ್ಷ ನಿರ್ವಹಣೆ ಮಾಡುವ ಹೊಣೆ ಅದರ ಮೇಲಿದೆ. ನಗರದಲ್ಲಿ ಹಲವು ದಿನದಿಂದ ವಾರದಲ್ಲಿ ಒಮ್ಮೆಯಾದರೂ ಮೋಟಾರ್‌ ಕೆಟ್ಟಿರುತ್ತದೆ. ಪೈಪು ಒಡೆದಿದೆ ಇಲ್ಲವೆ ವಿದ್ಯುತ್ ಮೋಟಾರ್‌ ಸುಟ್ಟಿದೆ. ದುರಸ್ತಿಗಾಗಿ ಕಳುಹಿಸಿದ್ದೇವೆ ಎಂಬ ಹೇಳಿಕೆ ನೀಡುತ್ತಾರೆ. ಇದರಿಂದ ನಿಗದಪಡಿಸಿದ ಅವಧಿಗೆ ನೀರು ಸರಬರಾಜು ಆಗುವುದಿಲ್ಲ. ಬೇಸಿಗೆ ಕಾಲ ಆಗಿದ್ದರಿಂದ ನಗರದ ಜನತೆ ಇದೇ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಅಲ್ಲದೆ ಮದುವೆ ಹಾಗೂ ಇನ್ನಿತರ ಕಾರಣದಿಂದ ನೀರಿನ ಬೇಡಿಕೆಯೂ ಹೆಚ್ಚು ಇದೆ. ನೀರು ಲಭ್ಯತೆ ಇದ್ದರೂ ನಿರ್ವಹಣೆಯಲ್ಲಿ ಮಂಡಳಿ ಎಡವುತ್ತಿದೆ’ ಎಂದು ನಗರದ ನಿವಾಸಿ ಬಸವರಾಜ ಕುಂಬಾರ ಆರೋಪಿಸಿದರು.

‘ಬೇಸಿಗೆ ಕಾಲವಾಗಿದ್ದರಿಂದ ನೀರು ಸರಬರಾಜಿನಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಒಳಚರಂಡಿ ಮಂಡಳಿಯ ಸಿಬ್ಬಂದಿಯು ಹೆಚ್ಚುವರಿಯಾಗಿ ವಿದ್ಯುತ್ ಮೋಟಾರ್ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ ಇಂತಹ ಸಮಸ್ಯೆ ಉದ್ಭವಿಸದು. ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುತ್ತಿದ್ದಾರೆ. ಒಂದು ದಿನ ಸರಬರಾಜಿನಲ್ಲಿ ವ್ಯತ್ಯಸವಾದರೆ ಸಂಕಷ್ಟ ಎದುರಿಸುವಂತೆ ಆಗಿದೆ’ ಎನ್ನುತ್ತಾರೆ ಆಸರ ಮೊಹಲ್ಲಾದ ನಿವಾಸಿ ಯೂಸೂಫ್ ಸಿದ್ದಿಕಿ.

ನಗರಸಭೆಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಆಗಿದ್ದಾರೆ. ಅವರ ನಿರ್ದೇಶನದಂತೆ ಪ್ರತಿ ವಾರ್ಡ್‌ಗೆ ನೀರು ಸರಬರಾಜು ಮಾಡುವ ಸಮಯವನ್ನು ನಿಗದಿಪಡಿಸಿ ಪತ್ರಿಕೆ ಪ್ರಕಟಣೆಯ ಮೂಲಕ ಸೂಚಿಸಿದ್ದರು. ಆದರೆ ವಾಸ್ತವವಾಗಿ ನಿಗದಪಡಿಸಿದ ವೇಳಾಪಟ್ಟಿ ಅಪಹಾಸ್ಯಕ್ಕೆ ಈಡಾಗಿದೆ. ನೀರು ನಿರ್ವಹಣೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಒಳಚರಂಡಿ ಮಂಡಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ನಗರದ ಜನತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರಿಗೆ ಮನವಿ ಮಾಡಿದ್ದಾರೆ.

ನೀರು ಹರಿಸಲು ಮನವಿ

ಶಹಾಪುರ: ನಾರಾಯಣಪೂರ ಎಡದಂಡೆ ಮುಖ್ಯ ಕಾಲುವೆಯ ಮೂಲಕ ಎಸ್ ಬಿಸಿ ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ನಿವೇದಿಸಿಕೊಳ್ಳಲಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನೂ ಐದಾರು ದಿನದಲ್ಲಿ ಕಾಲುವೆಗೆ ನೀರು ಹರಿದು ಬರಲಿವೆ. ಆಗ ಮತ್ತಷ್ಟು ನೀರನ್ನು ಕಾಲುವೆ ಮೂಲಕ ಕೆರೆಗೆ ನೀರು ಸಂಗ್ರಹಿಸಿಕೊಳ್ಳುತ್ತೇವೆ ಎಂದು ನಗರಸಭೆಯ ಹಿರಿಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

ನೀರು ಸರಬರಾಜಿನಲ್ಲಿ ಆಗುತ್ತಿರುವ ನ್ಯೂನತೆ ಸರಿಪಡಿಸಲು ಸೂಚಿಸಲಾಗಿದೆ. ಹೆಚ್ಚುವರಿಯಾಗಿ ವಿದ್ಯುತ್ ಮೋಟಾರ್‌ ಹಾಗೂ ಫುಟ್‌ವಾಲ್‌ ಖರೀದಿಸಲಾಗಿದೆ. ಮುಂದೆ ನೀರು ಸರಬರಾಜಿನಲ್ಲಿ ಲೋಪ ಆಗದಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.
-ನಾನಾ ಸಾಹೇಬ ಮಡಿವಾಳಕರ್, ಎಇಇ ನಗರಸಭೆ
ನೀರಿನ ತಕ್ಕಮಟ್ಟಿಗೆ ಲಭ್ಯತೆ ಇದೆ. ನಿರ್ವಹಣೆಯ ವಿಫಲತೆಯಿಂದ ನಗರದ ಜನತೆ ಸಂಕಷ್ಟ ಎದುರಿಸುವಂತೆ ಆಗಿದೆ. ಬೇಸಿಗೆಯಲ್ಲಿ ನಿಗದಿಪಡಿಸಿದ ದಿನದಂತೆ ನೀರು ಬರದಿದ್ದರೆ ಆತಂಕ ಎದುರಾಗಲಿದೆ.
-ಬಸವರಾಜ ಕುಂಬಾರ, ನಗರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT