ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಬರದ ಕರಿ ನೆರಳಲ್ಲಿ ಅನ್ನದಾತ, ಮಳೆಯಾಶ್ರಿತ ಜಮೀನುಗಳಲ್ಲಿ ಬಾಡಿದ ಬೆಳೆ

Published 21 ನವೆಂಬರ್ 2023, 4:27 IST
Last Updated 21 ನವೆಂಬರ್ 2023, 4:27 IST
ಅಕ್ಷರ ಗಾತ್ರ

ಹುಣಸಗಿ: ಹುಣಸಗಿ ತಾಲ್ಲೂಕು ಎಂದಾಕ್ಷಣ ಇಲ್ಲಿ ಕೃಷ್ಣಾ ನದಿ ಹರಿದಿದೆ, ಬಸವಸಾಗರ ಜಲಾಶಯವೂ ಹೊಂದಿದೆ. ನೀರಾವರಿ ಪ್ರದೇಶವೇ ಎಂದು ಎಲ್ಲರೂ ತಿಳಿಯುವುದು ಸಹಜ. ಆದರೆ, ಈ ತಾಲ್ಲೂಕಿನಲ್ಲಿ ಇಂದಿಗೂ ಮಳೆಯಾಶ್ರಿತ ಜಮೀನುಗಳು ದೊಡ್ಡಮಟ್ಟದಲ್ಲೇ ಇವೆ. ಹಲವಾರು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳು ಕಮರಿಹೋಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಜನ–ಜಾನುವಾರುಗಳು ತೊಂದರೆಗೆ ಸಿಲುಕಿದ್ದು‌ ಸುಳ್ಳಲ್ಲ.

ತಾಲ್ಲೂಕಿನ ಮಾರಲಬಾವಿ, ಶ್ರೀನಿವಾಸಪುರ, ಕನಗಂಡನಹಳ್ಳಿ, ಮಂಜಲಾಪುರ, ಕರಿಬಾವಿ, ಅಗ್ನಿ, ಅಗತೀರ್ಥ, ಗುಂಡಲಗೇರಾ, ಕೋಳಿಹಾಳ, ಕೋಳಿಹಾಳ ತಾಂಡಾ, ಹಗರಟಗಿ, ಮಾರನಾಳ, ಜೋಗುಂಬಾವಿ, ನಾರಾಯಣಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಬರದ ಛಾಯೆ ಆವರಿಸಿದೆ.

‘ಜೂನ್ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಇದರಿಂದಾಗಿ ಬಹುತೇಕ ರೈತರು ಮಳೆಯಾಗುವ ಭರವಸೆಯಲ್ಲಿಯೇ ತೊಗರಿ, ಹತ್ತಿ, ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇದ್ದರಿಂದಾಗಿ ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ದನ ಕರಗಳಿಗೂ ಮೇವು ಇಲ್ಲದಂತಾಗಿದೆ’ ಎಂದು ಮಾರಲಬಾವಿ ಗ್ರಾಮದ ಶಿವಣ್ಣ ರಾಯಪ್ಪ ನಾಯಿಕೊಡಿ ಸಮಸ್ಯೆ ಬಿಚ್ಚಿಡುತ್ತಾರೆ.

ಈ ಕುರಿತು ಈಗಾಗಲೇ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡಿದೆ. ಹುಣಸಗಿ ಹೋಬಳಿ ವ್ಯಾಪ್ತಿಯ 28 ಹಳ್ಳಿಗಳಲ್ಲಿ 5,400ಕ್ಕೂ ಹೆಚ್ಚು ರೈತರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ತೊಗರಿ, ಮೆಣಸಿನಕಾಯಿ, ಹತ್ತಿ, ಸೂರ್ಯಕಾಂತಿ, ಸಜ್ಜೆ ಮತ್ತಿತರ ಬೆಳೆಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

‘5,000ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಬಿತ್ತಿದ ಬೆಳೆ ಹಾನಿಯಾಗಿದ್ದು, ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ಜಮೀನುಗಳಿಗೆ ಭೇಟಿ ನೀಡಿದಾಗ ತೇವಾಂಶ ಕೊರತೆಯಿಂದಾಗಿ ಬೆಳೆಗಳು ಕಮರಿ ಹೋಗಿದ್ದು ಕಂಡು ಬಂದಿದೆ’ ಎಂದು ಹುಣಸಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಬರದ ಸ್ಥಿತಿ ಮೇಲೆ ಬೆಳಕು ಚೆಲ್ಲುತ್ತಾರೆ.

‘ಯಣ್ಣಿವಡಗೇರಿ, ಕುರೇಕನಾಳ, ಬಪ್ಪರಗಿ, ಮದಲಿಂಗನಾಳ, ಜಂಗಿನಗಡ್ಡಿ, ಮೇಲಿನಗಡ್ಡಿ, ಅಮ್ಮಾಪುರ, ಹುಲಿಕೇರಿ ಸೇರಿದಂತೆ ಇತರ 37 ಗ್ರಾಮಗಳ ವ್ಯಾಪ್ತಿಯ ಏಳು ಸಾವಿರ ಸಣ್ಣ ರೈತರು ಸೇರಿದಂತೆ 11 ಸಾವಿರಕ್ಕೂ ಹೆಚ್ಚು ರೈತರ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಯು ಮಳೆಯಿಂದ ಕೈಕೊಟ್ಟಿದೆ’ ಎಂದು ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಮನಗೌಡ ಪಾಟೀಲ ಹೇಳುತ್ತಾರೆ.

‘ಅಕ್ಟೋಬರ್ ತಿಂಗಳಲ್ಲಿ ಶೇ 1.6ರಷ್ಟು ಮಾತ್ರ ಮಳೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮಳೆಯನ್ನೇ ನಂಬಿಕೊಂಡು ಪ್ರತಿ ವರ್ಷದಂತೆ ಈ ಬಾರಿಯೂ 10 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದೆವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದಾಗಿ ಬಿತ್ತಿದ ಬೆಳೆ ಸಂಪೂರ್ಣ ಒಣಗಿಹೋಗಿದ್ದು, ಹೊಲಕ್ಕೆ ಹೋದರೇ ಬೆಳೆಯ ಸ್ಥಿತಿ ನೋಡಿ ಕಣ್ಣೀರು ಬರುತ್ತದೆ’ ಎಂದು ಗುಂಡಲಗೇರಾ ಗ್ರಾಮದ ನಿಂಗಮ್ಮ ಕವಿತಾಳ, ರೈತರಾದ ಬಸವರಾಜ ಕವಿತಾಳ ಹಾಗೂ ಬಸವರಾಜ ಸುರಪುರ ಭಾವುಕರಾಗುತ್ತಾರೆ.

‘ಸಾಲ ಮಾಡಿ ಗೊಬ್ಬರ ಹಾಕಿ, ಸಮಯಕ್ಕೆ ಸರಿಯಾಗಿ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಿದ್ದೆವು. ಆದರೆ, ದೇವರಿಗೆ ನಮ್ಮ ಬಗ್ಗೆ ಕರುಣೆ ಇಲ್ಲ. ಅದಕ್ಕೆ ಈ ಬರದ ಛಾಯೆ ಇದೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ರೈತ ಮಹಿಳೆ ದ್ಯಾಮವ್ವ ನಂದಪ್ಪ ಮೇಟಿ, ಮುಕ್ಕಣ್ಣ ಪರಮಣ್ಣ ಮೇಟಿ, ಹಣಮಂತ್ರಾಯ ಕಂಬಳಿ ಬೇಸರಿಸುತ್ತಾರೆ.

‘ಮೂರು ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಮಳೆ ಬರುವ ಹುಮ್ಮಸ್ಸಿನಲ್ಲಿಯೇ ಎರಡು ಬಾರಿ ಕಳೆ ಕೂಡಾ ತೆಗೆಯಲಾಗಿತ್ತು. ಆದರೆ, ಮಳೆಯ ಕೊರತೆಯಿಂದ ಸಂಪೂರ್ಣ ಒಣಗಿ ಹೋಗಿದೆ’ ಎಂದು ಮಾರಲಬಾವಿ ಗ್ರಾಮದ ಮಡಿವಾಳಪ್ಪ ಸುರಪುರ, ಮಲ್ಲಯ್ಯ ಗುತ್ತೇದಾರ ನೊಂದುಕೊಂಡರು.

‘ಬೆಳೆಗಳು ಹೇಗಾದರೂ ಹಾಳಾದರೂ ನಾವು ತಡೆದುಕೊಳ್ಳುಬಹುದು. ಕೃಷಿಗಾಗಿ ಮಾಡಿಕೊಂಡಿದ್ದ ಸಾಲಗಳನ್ನೂ ಮುಂದಿನ ವರ್ಷ ತೀರಿಸಬಹುದು. ಆದರೆ, ಮುಂದಿನ ದಿನಗಳಲ್ಲಿ ದನ–ಕರುಗಳಿಗೆ ಮೇವು ಹಾಗೂ ನೀರಿನ ಬಗ್ಗೆ ಚಿಂತಿಸುವಂತಾಗಿದೆ. ದನಕರುಗಳನ್ನು ಸಾಕುವುದೇ ಹೇಗೆ?’ ಎಂಬುದು ಸಂಗನಬಸಪ್ಪ ರಾಜವಾಳ, ಗುರುರಾಜ ಪಾಟೀಲ ಅವರ ಕಳವಳ.

ಕೊಡೇಕಲ್ಲ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಬರದಿಂದ ಶೇ 60ರಷ್ಟು ತೊಗರಿ ಬೆಳೆಗೆ ಹಾನಿಯಾಗಿದೆ. ಶೇ20ರಷ್ಟು ಹತ್ತಿ ಸಜ್ಜೆ ಶೇಂಗಾ ಬೆಳೆಗಳಿಗೂ ಹಾನಿಯಾಗಿದೆ
-ರಾಮನಗೌಡ ಪಾಟೀಲ ಕೊಡೇಕಲ್‌ ರೈತ ಸಂಪರ್ಕ ಕೇಂದ್ರದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT