ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೇಘದೂತ, ದಾಮಿನಿ ಆ್ಯಪ್‌ ಬಗ್ಗೆ ರೈತರಿಗೆ ಜಾಗೃತಿ

ಕೃಷಿ ಸಲಹಾ ಸೇವೆಯ ಮೇಘದೂತ, ದಾಮಿನಿ ಆ್ಯಪ್‌ಗಳು
Last Updated 23 ಏಪ್ರಿಲ್ 2021, 5:07 IST
ಅಕ್ಷರ ಗಾತ್ರ

ಯಾದಗಿರಿ: ರೈತ ಒಳ್ಳೆಯ ತಳಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡಿದರೆ ಬೆಳೆಗೆ ಅನುಕೂಲಕರ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಳೆ ಬಾರದಿದ್ದರೆ ಇಳುವರಿ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಚಟುವಟಿಕೆ ಮಾಡಬೇಕೆಂದು ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿಯ ಕೃಷಿ ಹವಾಮಾನಶಾಸ್ತ್ರ ವಿಷಯ ತಜ್ಞೆಡಾ.ಶಿಲ್ಪಾ ವಿ. ತಿಳಿಸಿದರು.

ಜಿಲ್ಲೆಯ ಸುರಪುರ ತಾಲ್ಲೂಕಿನ ಹೆಮ್ಮಡಗಿ ಗ್ರಾಮದಲ್ಲಿ ಹವಾಮಾನ ವೈಪರೀತ್ಯ ಮತ್ತು ಹವಾಮಾನ ಆಧಾರಿತ ಕೃಷಿ ಸಲಹಾ ಸೇವೆಯಲ್ಲಿ ನಿರತವಾದ ಮೇಘದೂತ ಹಾಗೂ ದಾಮಿನಿ ಆ್ಯಪ್‌ನ ಬಳಕೆ ಬಗ್ಗೆ ರೈತರಿಗೆ ಜಾಗೃತಿ ತರಬೇತಿಯಲ್ಲಿಮಾತನಾಡಿದರು.

ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ಜಂಟಿಯಾಗಿ ಬಿಡುಗಡೆಗೊಳಿಸಿದ ‘ಮೇಘದೂತ’ ಮೊಬೈಲ್‌ ಆ್ಯಪ್‌ನ ಬಳಕೆ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು. ಈ ಬಳಗವು (ಆ್ಯಪ್‌) ರೈತರಿಗೆ ಸ್ಥಳೀಯ ಪ್ರಮುಖ ಬೆಳೆಗಳ ಮತ್ತು ಜಾನುವಾರುಗಳಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಜಿಲ್ಲಾವಾರು ಮಾಹಿತಿಯನ್ನು ಒದಗಿಸುತ್ತದೆ. ಈ ಮಾಹಿತಿಯನ್ನು ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ನವೀಕರಿಸಲಾಗುತ್ತಿದ್ದು, ಈ ಮೇಘದೂತ ಆ್ಯಪ್‌ನಲ್ಲಿ ರೈತರಿಗೆ ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ, ಕೃಷಿ ಮತ್ತು ತೋಟಗಾರಿಕೆ ಮಾಹಿತಿಗಷ್ಟೇ ಸೀಮಿತವಾಗದೆ ಹೈನುಗಾರಿಕೆಯ ಮಾಹಿತಿಯನ್ನೂ ಒಳಗೊಂಡಿರುತ್ತದೆಯೆಂದು ಹೇಳಿದರು.

ಸಿಡಿಲು ಅಥವಾ ಮಿಂಚಿನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ‘ದಾಮಿನಿ’ ಅನ್ನುವ ಮೊಬೈಲ್‌ ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ಗುಡುಗು ಸಹಿತ ಮಿಂಚಿನ ಚಲನೆಯ ಬಗ್ಗೆ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲು ಎಚ್ಚರಿಕೆ ನೀಡುತ್ತದೆ. ಸದ್ಯಕ್ಕೆ ಎಚ್ಚರಿಕೆಗಳನ್ನು ಹಿಂದಿ ಮತ್ತು ಇಂಗ್ಲಿಶ್‌ನಲ್ಲಿ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ದಾಮಿನಿ ಆ್ಯಪ್‌ನಲ್ಲಿ ಗುಡುಗು ಮತ್ತು ಸಿಡಿಲಿನ ಕೆಲವು ಸಾಮಾನ್ಯ ಮಾಹಿತಿಯನ್ನೊಳಗೊಂಡಿದ್ದು, ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯ ಪಟ್ಟಿ ಲಭ್ಯವಿರುತ್ತದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿಯ ಮುಖ್ಯಸ್ಥ ಡಾ.ಅಮರೇಶ ವೈ.ಎಸ್. ಮಾತನಾಡಿ, ಹವಾಮಾನದ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ಮಳೆಯು ಸಮನಾಗಿ ಹಂಚಿಕೆಯಾಗದಿರುವುದರಿಂದ ನಾವು ಮೇಲಿಂದ ಮೇಲೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭಗಳನ್ನು ಎದುರಿಸುತ್ತಿದ್ದೇವೆ. ರೈತರು ದೃತಿಗೆಡದೆ ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.

ಹೆಮ್ಮಡಗಿ ಗ್ರಾಮದ ರೈತ ಹಂಪಣ್ಣ ಅಧ್ಯಕ್ಷತೆ ವಹಿಸಿದ್ದರು. ಹಣಮಂತ ಯಾದವ್ ಸ್ವಾಗತಿಸಿನಿರೂಪಿಸಿದರು. ಸುಮಾರು 20 ರಿಂದ 25 ರೈತರು ಭಾಗವಹಿಸಿದ್ದರು.

***

ಯಾವುದೇ ಪ್ರದೇಶದ ಬೆಳೆ ಉತ್ಪಾದನೆಯ ಯಶಸ್ಸು ಮತ್ತು ವೈಫಲ್ಯ ನಿರ್ಧರಿಸುವಲ್ಲಿ ಆಯಾ ಪ್ರದೇಶದ ಹವಾಮಾನ ಪರಿಸ್ಥಿತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ.
-ಡಾ.ಶಿಲ್ಪಾ ವಿ., ಹವಾಮಾನಶಾಸ್ತ್ರ ವಿಷಯ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT