ಚಿತ್ತಾಪುರ: ತಾಲ್ಲೂಕಿನಲ್ಲಿ ಹರಿಯುತ್ತಿರುವ ಕಾಗಿಣಾ ನದಿಗೆ ಗುರುವಾರ ಸಂಜೆ ಉಕ್ಕೇರಿ ಬಂದ ಪ್ರವಾಹದಿಂದಾಗಿ ದಂಡೋತಿ ಗ್ರಾಮದ ಕಾಗಿಣಾ ಸೇತುವೆ ಮುಳುಗಡೆಯಾಗಿತ್ತು. ಶುಕ್ರವಾರ ಬೆಳಿಗ್ಗೆಯು ಸೇತುವೆ ಮೇಲೆ ಪ್ರವಾಹ ಹರಿಯುತ್ತಿದ್ದು ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಸೇತುವೆಯು ಮುಳುಗಿದ ಸ್ಥಿತಿಯಲ್ಲಿರುವುದರಿಂದ ಸೇತುವೆಯ ಉತ್ತರಕ್ಕಿರುವ ಗ್ರಾಮಗಳಿಂದ ಪಟ್ಟಣವು ಸಂಪರ್ಕ ಕಡಿದುಕೊಂಡಿದೆ. ಅನೇಕ ಗ್ರಾಮಗಳಿಂದ ಬೆಳಿಗ್ಗೆ ಪಟ್ಟಣದ ಶಾಲಾ ಕಾಲೇಜುಗಳಿಗೆ ದಿನಾಲೂ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಶುಕ್ರವಾರ ಬರಲಾಗದೆ ಪರದಾಡಿದರು.
ಸೇಡಂ ತಾಲ್ಲೂಕಿನ ಮಳಖೇಡ ಹತ್ತಿರದ ಸೇತುವೆಯು ಮುಳುಗಡೆಯಾಗಿದ್ದರಿಂದ ಆ ಮಾರ್ಗದ ಸಂಚಾರ ಬಂದ್ ಆಗಿದೆ. ಚಿತ್ತಾಪುರ ತಾಲ್ಲೂಕಿನ ಅನೇಕ ಗ್ರಾಮಗಳ ಜನರು ಕಲಬುರಗಿಗೆ ಹೋಗಲು ಪರದಾಡಿದರು.
ದಂಡೋತಿ, ಮಲಕೂಡ, ತೊನಸನಹಳ್ಳಿ, ಗುಂಡಗುರ್ತಿ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಿಂದ ಕಲಬುರಗಿ ನಗರದ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.
ಚಿತ್ತಾಪುರದಿಂದ ಕಲಬುರಗಿಗೆ ಬಸ್ ಶಹಾಬಾದ್ ಮಾರ್ಗವಾಗಿ ಸಂಚರಿಸಿದವು. ಮಳೆ ಮತ್ತು ಪ್ರವಾಹದಿಂದ ಮೊಹರಂ ಹಬ್ಬದ ಸಂಭ್ರಮ ಕಳೆಗುಂದಿದೆ. ಇಂದು ಹಬ್ಬದ ಒಂಭತ್ತನೆ ದಿನವಾಗಿದ್ದರಿಂದ ಜನರು ಬೀಗರು, ನೆಂಟರು ಮಾಡುವ ಕಾರ್ಯಕ್ರಮಗಳಿಗೆ ಹೋಗಲಾಗದೆ ಸಮಸ್ಯೆ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.