ಬುಧವಾರ, ಮಾರ್ಚ್ 3, 2021
25 °C
ಯಾದಗಿರಿಯಲ್ಲಿ ಮಹಾತ್ಮ ಗಾಂಧೀಜಿ ಪ್ರಭಾವ, ಹೋರಾಟಕ್ಕೆ ಪ್ರೇರಣೆ

‘ಹೈದರಾಬಾದ್ ಕರ್ನಾಟಕದ ಗಾಂಧಿ’ ಕೊಲೂರು ಮಲ್ಲಪ್ಪ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊಲೂರು ಮಲ್ಲಪ್ಪ ಅವರು ‘ಹೈದರಾಬಾದ್ ಕರ್ನಾಟಕದ ಗಾಂಧಿ’ ಎಂದೇ ಖ್ಯಾತಿ ಗಳಿಸಿದವರು. ಮಹಾತ್ಮ ಗಾಂಧೀಜಿಯವರ ಅಹಿಂಸಾ ಚಳವಳಿಯ ಪ್ರಭಾವದಿಂದ ಸ್ವಾತಂತ್ರ್ಯಮತ್ತು ಹೈ.ಕ ವಿಮೋಚನಾ ಹೋರಾಟಕ್ಕೆ ಧುಮಕಿದವರು. ಈ ಸ್ವಾತಂತ್ರ್ಯ ಸೇನಾನಿಯ ಸಮಾಧಿ ಈಗ ಪಾಳು ಬಿದ್ದಿದೆ. ಅನುದಾನ ಇದ್ದರೂ ಯಾವುದೇ ಕಾಮಗಾರಿ ನಿರ್ವಹಣೆ ಮಾಡಿಲ್ಲ. 

1905ರಲ್ಲಿ ಯಾದಗಿರಿ ತಾಲ್ಲೂಕಿನ ಪೊಗಲಾಪುರದಲ್ಲಿ ಜನಿಸಿದ ಮಲ್ಲಪ್ಪ ಅವರು ಲಿಂಗಪ್ಪ-ಭೀಮವ್ವ ದಂಪತಿ ಪುತ್ರ. 1946 ರಲ್ಲಿ ‘ನಿಜಾಮರರೇ ಸರ್ವರಿಗೂ ಸಾಂತಂತ್ರ್ಯ ಕೊಡಿ’ ಎಂದು ಘೋಷಣೆ ಕೂಗುತ್ತಾ ಯಾದಗಿರಿಯಲ್ಲಿ ಚಳವಳಿ ಆರಂಭಿಸಿದ್ದರು. ನಿಜಾಮ ಸರ್ಕಾರ ಇದನ್ನು ತಡೆಗಟ್ಟಲು ಮುಂದಾದರೂ ಅವರ ದಬ್ಬಾಳಿಕೆಗೆ ಮಲ್ಲಪ್ಪ ಮಣಿಯಲಿಲ್ಲ.

ಅಪರೂಪದ ರಾಜಕಾರಣಿಯಾಗಿದ್ದ ಕೊಲೂರು ಮಲ್ಲಪ್ಪ ಅವರು 1952ರಲ್ಲಿ ಸುರಪುರ, 1957ರಲ್ಲಿ ಸೇಡಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1954 ರಲ್ಲಿ ನಡೆದ ಹೈದರಾಬಾದ್‌ ಸ್ಟೇಟ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ, ಮೈಸೂರು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಖಾದಿ ಉಣ್ಣೆ ಕೈಗಾರಿಕೆ, ಭೂ ಸುಧಾರಣೆ, ಗುಡಿ ಕೈಗಾರಿಕೆ, ಬಾಂಬೆ ಮತ್ತು ಮೈಸೂರು ಗಡಿ ಹೊಂದಾಣಿಕೆ, ಅಂತರ್‌ ರಾಜ್ಯ ನೀರು ವಿವಾದ ಮಸೂದೆ ಮುಂತಾದ ಪ್ರಮುಖ ವಿಷಯಗಳಿಗೆ ವಿಧಾನಸಭೆಯಲ್ಲಿ ಆದ್ಯತೆ ನೀಡಿದ್ದರು.

ಗಾಂಧೀಜಿ ಭೇಟಿ: ಮಲ್ಲಪ್ಪ 1934ರಲ್ಲಿ ಸಬರಮತಿಯಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧಮುಕಿದರು. ಇದು ಅಂದಿನ ಹೈದರಾಬಾದ್ ನಿಜಾಮನ ಕಂಗೆಣ್ಣಿಗೆ ಗುರಿಯಾಯಿತು. ನಂತರ 1940 ರಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು.

₹2 ಕೋಟಿ ಬಿಡುಗಡೆ: ಕೊಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣಕ್ಕಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಸರ್ಕಾರ ₹2 ಕೋಟಿ ಕೋಟಿ ಅನುದಾನ ನೀಡಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ರೀತಿಯ ಕಾಮಗಾರಿ ಆರಂಭ ಆಗಿಲ್ಲ. ಇದರಿಂದ ಸಮಾಧಿಯೂ ಹಾಳಾಗಿದೆ. ಮಲ್ಲಪ್ಪ ಅವರ ಕನಸಾಗಿದ್ದ ಕುಷ್ಠ ರೋಗಿಗಳ ಕೇಂದ್ರವು ಪಾಳು ಬಿದ್ದಿದೆ. ಅಲ್ಲಿ ವಾಸ ಮಾಡಲು ಕೂಡ ಆಗುತ್ತಿಲ್ಲ ಎಂದು ಅವರ ಅಭಿಮಾನಿಗಳು ಆರೋಪಿಸಿದ್ದಾರೆ.

ಅಲ್ಲಿ ಸ್ಮಾರಕದ ಜೊತೆಗೆ ಮೂರ್ತಿ ಸ್ಥಾಪನೆ, ಉದ್ಯಾನ ನಿರ್ಮಿಸಿ ಆಕರ್ಷಕ ಸ್ಥಳ ಮಾಡಲು ಸಾಕಷ್ಟು ಜಾಗವಿದೆ. ಆದರೆ, ಅಧಿಕಾರಿಗಳಿಗೆ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಇಲ್ಲವಾಗಿದೆ.

*
ಅಧಿಕಾರಿಗಳು, ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಮಾರಕ ನಿರ್ಮಾಣ ಕೆಲಸ ಪ್ರಾರಂಭವಾಗದೇ ಹಾಗೆಯೇ ಉಳಿದಿದೆ. ಸಮಾಧಿಯೂ ಅನಾಥವಾಗಿದೆ.
– ಹಣಮಂತರಾಯಗೌಡ ಮಾಲೀಪಾಟೀಲ, ‌ಮಲ್ಲಪ್ಪಾಜಿ ಅಭಿಮಾನಿಗಳ ಸಂಘದ ಅಧ್ಯಕ್ಷ

*
ಸ್ಮಾರಕಕ್ಕೆ ಮೀಸಲಾದ ಜಾಗವನ್ನು ಪರಿಶೀಲಿಸಲಾಗುವುದು. ಬಡಾವಣೆ ಬಗ್ಗೆ ನಗರಸಭೆ ವತಿಯಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ನಂತರ ಅದಕ್ಕೆ ಬೇಕಾದ ಸೌಕರ್ಯ ಕಲ್ಪಿಸಲಾಗುವುದು.
– ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು