ಬುಧವಾರ, ಸೆಪ್ಟೆಂಬರ್ 18, 2019
25 °C
ಮನೆಗಳಲ್ಲಿ ಗಣೇಶ ಪ್ರತಿಷ್ಠಾಪಿಸಿ ಪೂಜೆ, ಸಂಜೆ ಸಾಂಸ್ಕೃತಿಕ ಸ್ಪರ್ಧೆ

ಜಿಲ್ಲೆಯಾದ್ಯಂತ ಸಂಭ್ರಮದ ಗಣೇಶ ಪ್ರತಿಷ್ಠಾಪನೆ

Published:
Updated:
Prajavani

ಯಾದಗಿರಿ: ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಡಗರದಿಂದ ನಡೆಯಿತು.

ಸೋಮವಾರ ಬೆಳಿಗ್ಗೆಯಿಂದಲೇ ಜನ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಖರೀದಿ ಮಾಡುತ್ತಿರುವುದು ಕಂಡುಬಂತು. ಅಲ್ಲದೇ ಪೂಜೆಗೆ ಹೂವು, ಹಣ್ಣು, ಅಲಂಕಾರಿಕ ಸಾಮಾನು ಮಾರಾಟವೂ ನಡೆಯಿತು.

ಸೋಮವಾರ ಬೆಳಿಗ್ಗೆ ಕೆಲವರು ಟ್ರ್ಯಾಕ್ಟರ್, ಕಾರು, ಬೈಕ್‌, ಟಂಟಂ ಆಟೋಗಳ ಮೂಲಕ ಗಣೇಶ ಮೂರ್ತಿಯನ್ನು ಕೊಂಡೊಯ್ದರು. 

ನಗರದ ಗಾಂಧಿ ಚೌಕ್, ಸ್ಟೇಷನ್ ಏರಿಯಾ, ಚಿತ್ತಾಪುರ ರಸ್ತೆ, ಹೊಸ ಬಸ್‌ ನಿಲ್ದಾಣ, ಚಕ್ರಕಟ್ಟಾ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್‌, ಗಂಜ್‌ ಪ್ರದೇಶ ಸೇರಿದಂತೆ ವಿವಿಧೆಡೆ ಸಂಜೆ ಸಾಮೂಹಿಕ ಪೂಜೆ ನೆರವೇರಿಸಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಯಿತು. ನೈವೇದ್ಯಕ್ಕೆ ಕಡಬು, ಲಾಡು, ಕರ್ಚಿಕಾಯಿ, ಹೋಳಿಗೆ ತಯಾರಿಸಿ ಅರ್ಪಿಸಲಾಯಿತು.

ಪೂಜೆ: ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಗಣೇಶ ಪೂಜೆ ಮಾಡಲಾಯಿತು. ಗಂಗಾಸ್ನಾನ, ವಸ್ತ್ರಾಧಾರಣೆ, ದೀಪರಾಧನೆ, ಅಭಿಷೇಕ, ಪಂಚಾಮೃತ, ಪ್ರಸಾದ, ಐದು ತರದ ಹಣ್ಣು ಇಟ್ಟು ಪೂಜೆಯ ನಂತರ ಮಹಾ ಮಂಗಲ ಆರತಿ ಮಾಡಲಾಯಿತು.

ಸೋಮವಾರ ಬೆಳಿಗ್ಗೆ ಮನೆಗಳಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು ಸಂಜೆ ವಿಸರ್ಜನೆ ಮಾಡಿದರು. ಇನ್ನೂ ಕೆಲವರು 5,7,9,11 ದಿನಗಳು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುತ್ತಾರೆ ಎಂದು ಎಸ್‌.ಆರ್.ಹೀರೆಮಠ ತಿಳಿಸಿದರು.

ಲಕ್ಷ್ಮಿ ನಗರದಲ್ಲಿ ಜನಜಂಗುಳಿ: ಲಕ್ಷ್ಮಿ ನಗರದಲ್ಲಿ ಗಣೇಶ ಮೂರ್ತಿ ಪೂಜೆ ವೇಳೆ ಒಂದು ತೆಂಗಿನ ಕಾಯಿಯಲ್ಲಿ ಅವಳಿ ತೆಂದಿನ ಕಾಯಿ ಕಂಡು ಬಂದಿದ್ದು, ಇದನ್ನು ನೋಡಲು ಭಕ್ತರು ಮುಗಿಬಿದ್ದಿದ್ದರು. ಪೂಜೆ ವೇಳೆ ತೆಂಗಿನಕಾಯಿ ಒಡೆದ ನಂತರ ಗಮನಿಸಲಾಗಿ ಒಂದರಲ್ಲಿ ಅವಳಿ ತೆಂಗಿನ ಕಾಯಿ ಕಂಡು ಬಂದಿದ್ದು, ಎಲ್ಲರ ಆಕರ್ಷಣೆ ಕೇಂದ್ರವಾಗಿತ್ತು. 

ಸಾಂಸ್ಕೃತಿಕ ಕಾರ್ಯಕ್ರಮ: ಗಣೇಶ ಪ್ರತಿಷ್ಠಾಪನೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಸಂಜೆ ಸಂಗೀತ, ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿವೆ. ರಾತ್ರಿ ಭಜನೆ ಕಾರ್ಯಕ್ರಮ ನಡೆದವು.

ನಗರದ ರಾಟಿ ಭವನದ ಬಳಿ ಲಾಡು ಇಟ್ಟು ಗಣೇಶ ವಿಸರ್ಜನೆ ದಿನ ಅದನ್ನು ಹರಾಜು ಮಾಡಲಾಗುತ್ತಿದೆ. ಅಲ್ಲದೆ ಮೈಲಾಪುರ ಬೇಸ್‌ ಬಳಿ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಉಪನ್ಯಾಸ ಆಯೋಜಿಸಲಾಗುತ್ತಿದೆ. 

Post Comments (+)