ಸೋಮವಾರ, ಮೇ 17, 2021
23 °C
ನೆರೆ ರಾಜ್ಯಗಳ ವ್ಯಾಪಾರಿಗಳಿಂದ ಹೆಚ್ಚಿನ ಬೇಡಿಕೆ; ಒಂದು ಕೆಜಿಗೆ ₹18 ಧಾರಣೆ

ಪಪ್ಪಾಯಿಗೆ ಭರ್ಜರಿ ಬೆಲೆ; ರೈತರು ಹರ್ಷ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಪ್ರಸಕ್ತ ವರ್ಷ ಪಪ್ಪಾಯಿಗೆ ಭರ್ಜರಿ ಧಾರಣೆ ಬಂದಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಕಳೆದ ವರ್ಷ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದ ಬೆಳೆಗಾರರು ಈ ವರ್ಷ ಪಪ್ಪಾಯ ಬೆಳೆದಿರಲಿಲ್ಲ. ಈ ಬಾರಿ ಕೆಲವೇ ರೈತರು ಪಪ್ಪಾಯಿ ಬೆಳೆದಿದ್ದು, ಖುಷಿ ತಂದಿದೆ.

ರಂಜಾನ್ ಉಪವಾಸ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಪಪ್ಪಾಯಿ ಹೆಚ್ಚು ಸೇವಿಸುತ್ತಾರೆ. ಅಲ್ಲದೆ ಔಷಧಿಗೂ ಉಪಯೋಗಿಸುತ್ತಾರೆ. ಪ್ರತಿ ಕೆಜಿಗೆ ಈಗ ₹18 ಬೆಲೆ ಇದೆ. ಸಂಪೂರ್ಣ ಲಾಕ್‌ಡೌನ್ ಇಲ್ಲದ ಕಾರಣ ಸಾಗಣೆಗೆ ಸಮಸ್ಯೆ ಉಂಟಾಗಿಲ್ಲ.

‘ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹೈದರಾಬಾದ್, ದೆಹಲಿ ಮುಂತಾದ ಕಡೆಯ ವ್ಯಾಪಾರಿಗಳು ಜಿಲ್ಲೆಗೆ ಬಂದು ಪಪ್ಪಾಯಿ ಖರೀದಿಸುತ್ತಿದ್ದಾರೆ. ಸರಕು ಸಾಗಣೆಗೆ ತೊಂದರೆ ಇಲ್ಲದ ಕಾರಣ ಉತ್ತಮ ಧಾರಣೆ ಸಿಕ್ಕಿದೆ’ ಎನ್ನುತ್ತಾರೆ ರೈತ ಹಣಮಂತರಾಯ ಟೋಕಾಪುರ.

‘ತಾಲ್ಲೂಕಿನಲ್ಲಿ ಮರಕಲ್, ಕೊಳ್ಳೂರ, ಚಾಮನಾಳ, ಹಳಿಸಗರ, ಆಲ್ದಾಳ ಮುಂತಾದ ಕಡೆ ರೈತರು ಪಪ್ಪಾಯಿ ಬೆಳೆ ಬೆಳೆದಿದ್ದಾರೆ. 9 ತಿಂಗಳ ಬೆಳೆ ಇದಾಗಿದ್ದು, ಜುಲೈ ತಿಂಗಳಲ್ಲಿ ಸೊಲ್ಲಾಪುರದಿಂದ ರೆಡೆ ಲೇಡಿ 786 ತಳಿ ಪಪ್ಪಾಯಿ ಸಸಿಯನ್ನು ₹13 ಒಂದು ಖರೀದಿಸಿ ತರುತ್ತೇವೆ. 1 ಎಕರೆಗೆ 1,100 ಸಸಿ ನಾಟಿ ಮಾಡುತ್ತೇವೆ. ಎಕರೆಗೆ ₹1.50ಲಕ್ಷ ವೆಚ್ಚ ತಗುಲುತ್ತದೆ. ಒಂದು ಗಿಡಕ್ಕೆ 70 ಕೆಜಿ ಇಳುವರಿ ಬಂದಿದೆ. ಎಕರೆಗೆ ₹ 3 ಲಕ್ಷ ನಿವ್ವಳ ಲಾಭ ಸಿಗುವ ನಿರೀಕ್ಷೆ ಇದೆ’ ಎಂದು ಪಪ್ಪಾಯಿ ಬೆಳೆದ ರೈತ ಶ್ರೀನಿವಾಸರಡ್ಡಿ ಹಾಗೂ ಜಾಕೀರಹುಸೇನಿ ಮುನ್ಸಿ ತಿಳಿಸಿದರು.

‘ಕಳೆದ ವರ್ಷ ಪಪ್ಪಾಯಿ ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಸರಕು ಸಾಗಣೆ ಸಮಸ್ಯೆಯಾಗಿತ್ತು. ನಷ್ಟವಾಗಿತ್ತು.  ಪಪ್ಪಾಯಿ ಬೆಳೆ ಕೊಳೆತು ಹೋಗಿತ್ತು. ಇದರಿಂದ ಹೆಚ್ಚಿನ ರೈತರು ಪಪ್ಪಾಯಿ ಬೆಳೆ ಬೆಳೆಯುವುದನ್ನು ಕೈ ಬಿಟ್ಟಿದ್ದರು. ಪ್ರಸಕ್ತ ವರ್ಷ ಬೆಳೆದ ಪ್ರದೇಶವು ಕಡಿಮೆ ಇದೆ. ಬೆಲೆ ಮಾತ್ರ ಉತ್ತಮವಾಗಿದೆ’ ಎನ್ನುತ್ತಾರೆ ರೈತ ಮಲ್ಲಪ್ಪ.

*ಶಹಾಪುರ ತಾಲ್ಲೂಕಿನಲ್ಲಿ 75 ಹೆಕ್ಟೇರ್ ಪಪ್ಪಾಯಿ ಬೆಳೆಯಲಾಗಿದೆ. ಪ್ರಸಕ್ತ ಬಾರಿ ಪಪ್ಪಾಯಿ ಬೆಳೆಗೆ ಉತ್ತಮ ಧಾರಣೆ ಇದೆ. ಮಾರುಕಟ್ಟೆ ಸಮಸ್ಯೆ ಉಂಟಾಗಿಲ್ಲ. ರೈತರು ಸಂತಸದಲ್ಲಿದ್ದಾರೆ

ದತ್ತಾತ್ರೇಯ ಪಾಟೀಲ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಶಹಾಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.