ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಅನಗತ್ಯ ಓಡಾಟ ನಡೆಸಿದವರಿಗೆ ಪೊಲೀಸರಿಂದ ಜಾಗೃತಿ
Last Updated 16 ಜುಲೈ 2020, 17:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರದಿಂದ ಆರಂಭವಾದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಂಗಡಿ ಮುಂಗಟ್ಟು ಮುಚ್ಚಿದ್ದು, ಮಧ್ಯಾಹ್ನ ಒಂದು ಗಂಟೆಯ ನಂತರ ಬಹುತೇಕ ಕಡೆ ಜನ ಸಂಚಾರ ವಿರಳವಾಗಿತ್ತು.

ಪೊಲೀಸರು ಮೈಕ್‌ಗಳ ಮೂಲಕ ಲಾಕ್‌ಡೌನ್‌ ಇರುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಯ ನಂತರ ಮನೆ ಬಿಟ್ಟು ಬಾರದಂತೆ ತಿಳಿಸುತ್ತಿದ್ದರು.

ಹೋಟೆಲ್‌, ಖಾನಾವಳಿ ಬಂದ್‌: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಬಹುತೇಕ ಹೋಟೆಲ್‌, ಖಾನಾವಳಿ, ಸಣ್ಣಪುಟ್ಟ ತಳ್ಳುಗಾಡಿಗಳ ಹೋಟೆಲ್‌ಗಳು ಬಂದ್‌ ಆಗಿದ್ದವು. ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಿದ್ದರಿಂದ ಬಹುತೇಕ ಮಾಲಿಕರು ತೆರೆಯುವ ಗೋಜಿಗೆ ಹೋಗಿಲ್ಲ.

ತರಕಾರಿ ವ್ಯಾಪಾರಿ, ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 1 ಗಂಟೆ ವರೆಗೆ ತೆರೆಯಲು ಅನುಮತಿ ನೀಡಿದ್ದರೂ ಬಹುತೇಕ ಅಂಗಡಿಗಳು ಬಾಗಿಲು ಹಾಕಿದ್ದವು. ಕಾರ್ಪೆಂಟರ್, ಪೆಂಟ್‌, ಪೀಠೋಪಕರಣಗಳ ಅಂಗಡಿ ಸ್ವಯಂ ಪ್ರೇರಿತವಾಗಿ ಬಂದ್‌ ಆಗಿದ್ದರು.

ಬಿಸಿ ಮುಟ್ಟಿಸಿದ ಪೊಲೀಸರು:

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಪೊಲೀಸರು ರಸ್ತೆಗಿಳಿದುನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು. ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಏಕಮುಖ ಸಂಚಾರ ಆರಂಭಿಸಿ ದಟ್ಟಣೆ ಆಗದಂತೆ ನಿಯಂತ್ರಿಸುತ್ತಿದ್ದರು.

ಹೊಸಳ್ಳಿ ಕ್ರಾಸ್‌, ಗಂಜ್‌ ವೃತ್ತ, ಸುಭಾಷ ವೃತ್ತ, ಶಾಸ್ತ್ರಿ, ಗಾಂಧಿ ವೃತ್ತ, ಪದವಿ ಕಾಲೇಜು ವೃತ್ತ ಸೇರಿದಂತೆ ವಿವಿಧ ಕಡೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ.

ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಓಡಾಟ ನಡೆಸುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೊರಿಸಿ, ಬಸ್ಕಿ ಹೊಡಿಸಿ ಲಾಕ್ ಡೌನ್ ಜಾಗೃತಿ ಮೂಡಿಸಿದರು. ಹಲವಾರು ಯುವಕರು ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಓಡಾಡುತ್ತಿದ್ದರು. ಮಾಸ್ಕ್‌ ಧರಿಸುವಂತೆ ಹೇಳುತ್ತಿರುವುದು ಕಂಡು ಬಂತು.

ನಗರದ ಅಲ್ಲಲ್ಲಿ ಪಾನ್‌ಶಾಪ್‌ಗಳು ತೆಗೆದುಕೊಂಡಿದ್ದು, ಜನರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸರು ದಾಳಿ ಮಾಡಿ ಜನರನ್ನು ಚದುರಿಸಿದರು. ಅಂಗಡಿ ಮಾಲಿಕರಿಗೂ ಕಾನೂನು ಉಲ್ಲಂಘಿಸಿ ಅಂಗಡಿ ತೆಗೆದರೆ, ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT