ಭಾನುವಾರ, ಅಕ್ಟೋಬರ್ 25, 2020
24 °C
ವಡಗೇರಾ ತಾಲ್ಲೂಕು ಕೇಂದ್ರದ ಕಚೇರಿಗಳ ಗೊಂದಲ, ಕೆಬಿಜೆಎನ್ಎಲ್ ಇಲಾಖೆಯ ಕಟ್ಟಡದಲ್ಲಿ ಅವಕಾಶವಿದ್ದರೂ ಬಳಸಿಕೊಳ್ಳದ ಅಧಿಕಾರಿಗಳು

ವಡಗೇರಾ: ಸರ್ಕಾರಿ ಕಟ್ಟಡವಿದ್ದರೂ ಬಾಡಿಗೆಗೆ ಮೊರೆ

ದೇವಿಂದ್ರಪ್ಪ ಬಿ ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ವಡಗೇರಾ ಕೇಂದ್ರವಾಗಿ ರಚಿಸಿದ ನೂತನ ತಾಲ್ಲೂಕು ಕಚೇರಿಗಳನ್ನು ಬಾಡಿಗೆ ಕಟ್ಟಡದಲ್ಲೇ ಆರಂಭಿಸಲಾಗುತ್ತಿದೆ. ಪಟ್ಟಣದಲ್ಲಿ ಸುಸಜ್ಜಿತ ಸರ್ಕಾರಿ ಕಟ್ಟಡಗಳು ಸಿದ್ಧವಿದ್ದರೂ ಬಾಡಿಗೆ ಕಟ್ಟಡಗಳನ್ನೇ ಏಕೆ ಆಶ್ರಯಿಸಲಾಗುತ್ತಿದೆ ಎಂಬ ಪಟ್ಟಣವಾಸಿಗಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ವಡಗೇರಾ ತಾಲ್ಲೂಕು ಕೇಂದ್ರವಾಗಿ ಮೂರು ವರ್ಷಗಳ ಬಳಿಕ ಒಂದೊಂದಾಗಿ ಇಲಾಖೆಗಳು ಕಾರ್ಯ ನಿರ್ವಹಿಸಲು ಆರಂಭಿಸಿವೆ. ಆದರೆ, ಅವು ಕೂಡ ಬಾಡಿಗೆ ಕಟ್ಟಡದ ಮೊರೆ ಹೋಗುತ್ತಿವೆ. ಕೆಬಿಜೆಎನ್ಎಲ್ ಇಲಾಖೆಯ ಕಚೇರಿಯಲ್ಲಿ ಕಾರ್ಯ ಆರಂಭಿಸಲು ಅನೂಕುಲ ಇದ್ದರೂ ಬಾಡಿಗೆ ಕಟ್ಟಡದ ಮೊರೆ ಹೋಗುತ್ತಿರುವುದು ಅಚ್ಚರಿ ಮೂಡಿಸಿದೆ.

‘ಕೆಬಿಜೆಎನ್ಎಲ್ ಇಲಾಖೆಯ ಕಟ್ಟಡದಲ್ಲಿ ಪಟ್ಟಣದ ನಿವಾಸಿಗಳು ಅಕ್ರಮವಾಗಿ ವಾಸವಾಗಿದ್ದಾರೆ. ಅವರನ್ನು ಬಿಡಿಸಿ ನೂತನವಾಗಿ ಬಂದ ಕಚೇರಿಗಳನ್ನು ಅಲ್ಲಿ ಆರಂಭಿಸಬೇಕು. ಇದರಿಂದ ಸರ್ಕಾರ ಬಾಡಿಗೆಗಾಗಿ ಮಾಡುವ ದುಂದುವೆಚ್ಚ ನಿಲ್ಲುತ್ತದೆ’ ಎನ್ನುತ್ತಾರೆ ಸಾರ್ವಜನಿಕರು.

ಸರ್ಕಾರದಿಂದ ತಾಲ್ಲೂಕು ಕೇಂದ್ರದ ಪ್ರಮುಖ ಕಚೇರಿಗೆ ಮಿನಿ ವಿಧಾನಸೌದ ಕಟ್ಟಕ್ಕೆ ಜಾಗದ ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಮಿನಿವಿಧಾನಸೌದ ಕಟ್ಟಡದ ನಿರ್ಮಾಣದವರೆಗೂ ಪಟ್ಟಣದಲ್ಲಿ ಇರುವ ಕೆಬಿಜೆಎನ್ಎಲ್ ಕಟ್ಟಡದಲ್ಲಿ ಅಲ್ಪಸ್ವಲ್ಪ ದುರಸ್ತಿ ಮಾಡಿಕೊಂಡು ನೂತನ ಕಚೇರಿಗಳ ಆಡಳ ನಡೆಸಬಹುದು.

‘ಈಗಾಗಲೇ ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಹಣಕಾಸು ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಆಡಳಿತ ನಡೆಸಲು ಸಿದ್ಧತೆ ನಡೆಸಿವೆ. ಇನ್ನೂ ಕೆಲವು ಇಲಾಖೆಗಳು ಕಟ್ಟಡ ಅಭಾವದಿಂದ ಮತ್ತು ಹೆಚ್ಚಿನ ಬಾಡಿಗೆಯಿಂದ ಕಾರ್ಯ ಆರಂಭಿಸಲು ಹಿಂದೆಮುಂದೆ ನೋಡುತ್ತಿವೆ. ಆದ್ದರಿಂದ ಈ ಕೆಬಿಜೆಎನ್ಎಲ್ ಎಲ್ಲ ಕಟ್ಟಡಗಳನ್ನು ಖಾಸಗಿಯವರಿಂದ ವಶಪಡಿಸಿಕೊಂಡ ಎಲ್ಲಾ ಇಲಾಖೆಗಳನ್ನು ಆರಂಭಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಜೆಡಿಎಸ್ ಮುಖಂಡ ಹಣಮೆಗೌಡ ಬಿರನಕಲ ಒತ್ತಾಯಿಸಿದ್ದಾರೆ.

‘ಈ ಭಾಗದ ಅಭಿವೃದ್ಧಿಗಾಗಿ ವಡಗೇರಾವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಇಲಾಖೆಗಳು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಆದಷ್ಟು ಬೇಗ ಎಲ್ಲ ಇಲಾಖೆಗಳನ್ನು ನಮ್ಮ ಕೇಂದ್ರದಲ್ಲಿ ಆರಂಭಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂಬುದು ಎಂದು ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ನಾಟೇಕಾರ ವರ ಆಗ್ರಹ.

‘ನೂತನವಾಗಿ ಕಚೇರಿಗಳನ್ನು ಆರಂಭಿಸಲು ಇಲಾಖೆಯವರು; ಕೃಷ್ಣ ಭಾಗ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್‌ಗೆ ಪತ್ರ ಬರೆಯಬೇಕು. ಹಾಗಾದಾಗ ನಾವು ಅವರಿಗೆ ಕಚೇರಿ ಆರಂಭಿಸಲು ಕಟ್ಟಡವನ್ನು ಕೊಡುತ್ತೇವೆ’ ಎಂದು ಕೆಬಿಜೆಎನ್ಎಲ್ ಇಲಾಖೆಯ ಅಧಿಕಾರಿ ರಾಜಶೇಖರ ಮಾಗ ಮಾಹಿತಿ ನೀಡಿದರು.

ಈ ಬಗ್ಗೆ ಸ್ಪಷ್ಟ ಮಾಹಿತಿ ಕೇಳಲು ಆಡಳಿತಾಧಿಕಾರಿ ಮುಕ್ಕಣ್ಣ ಕರಿಗಾರ ಅವರ ಕಚೇರಿಗೆ ಹೋದರೆ ಅವರು ಒಳಗೆ ಬಿಡಲಿಲ್ಲ. ದೂರವಾಣಿ ಕರೆಗೂ ಸ್ಪಂದಿಸಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.