ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಚವಾರ: ಸರ್ಕಾರಿ ಶಾಲೆಯ ಮಾದರಿ ಗ್ರಂಥಾಲಯ

Last Updated 29 ಡಿಸೆಂಬರ್ 2021, 6:33 IST
ಅಕ್ಷರ ಗಾತ್ರ

ಬಾಚವಾರ (ಯರಗೋಳ): ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯ ಮತ್ತು ಪ್ರಯೋಗಾಲಯ ಮಾದರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.

ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಗ್ರಾಮದಲ್ಲಿ 3 ಸಾವಿರ ಜನಸಂಖ್ಯೆ ಇದೆ. ಗ್ರಾಮದ ಸುತ್ತ ಗುಡ್ಡ ಇದ್ದು, ಸರಿಯಾದ ಸಾರಿಗೆ ಸಂಪರ್ಕ ಇಲ್ಲ. ಹೀಗಾಗಿ, ಶಿಕ್ಷಿತರ ಪ್ರಮಾಣ ತುಸು ಕಡಿಮೆ ಇದೆ.

ಗ್ರಾಮದ ಹೊರವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿವರೆಗೂ ಇದ್ದು, 180 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಐವರು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.

ಶಾಲೆಯಲ್ಲಿನ ಗ್ರಂಥಾಲಯದ ವ್ಯವಸ್ಥೆ ಉತ್ತಮವಾಗಿದ್ದು, ಕಲಿಕಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. 540 ಪುಸ್ತಕಗಳಿರುವ ಗ್ರಂಥಾಲಯವನ್ನು
ವಿದ್ಯಾರ್ಥಿಗಳೇ ನಿರ್ವಹಣೆ ಮಾಡುತ್ತಾರೆ.

ಕತೆ, ಕವನ, ಆಹಾರ, ವಿಜ್ಞಾನ, ದೇಶಭಕ್ತಿ, ವೈಜ್ಞಾನಿಕ ವಿಷಯಗಳ ಪುಸ್ತಕಗಳಿವೆ. ಮಕ್ಕಳು ಬಿಡುವಿನ ವೇಳೆಯಲ್ಲಿ ಅವುಗಳನ್ನು ಓದುತ್ತಾರೆ. ಪುಸ್ತಕ ಪರಿಚಯ, ಓದಿನ ಮೂಲಕ ಪಾತ್ರಗಳ ಅಭಿನಯ, ಕಥೆಗಳ ವಾಚನ ಮುಂತಾದ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಾರೆ.

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹರಿದ ಪುಸ್ತಕಗಳನ್ನು ವಿದ್ಯಾರ್ಥಿಗಳು ಅಂಟು ಹಚ್ಚಿ ದುರಸ್ತಿ ಮಾಡುತ್ತಾರೆ.

ಗೋಡೆಯ ಮೇಲೆ ಪುಸ್ತಕಗಳ ಮಹತ್ವದ ಕುರಿತು ಚಿಂತಕರ, ಸಾಹಿತಿಗಳು, ಶಿಕ್ಷಣ ತಜ್ಞರ ಉಕ್ತಿಗಳನ್ನು ಬರೆಯಲಾಗಿದೆ. ಪರಿಸರಕ್ಕೆ ಸಂಬಂಧಿಸಿದ ಪ್ರಾಣಿ, ಪಕ್ಷಿ, ಮರಗಳ ಚಿತ್ರಗಳನ್ನೂ ಚಿತ್ರಿಸಲಾಗಿದೆ.

ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ಹೆಸರನ್ನು ಗ್ರಂಥಾಲಯದ ನೋಂದಣಿ ಪುಸ್ತಕದಲ್ಲಿ ದಾಖಲಿಸಿ, ತೆಗೆದುಕೊಂಡು ಹೋಗುತ್ತಾರೆ.
ಕಲಿಕಾ ಸಂಸ್ಥೆಯು ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳ ನೆರವು ನೀಡುತ್ತಿದೆ.

ಶಾಲೆಯಲ್ಲಿ ಪ್ರಯೋಗಲಾಯವಿದ್ದು ಜೀವಶಾಸ್ತ್ರ, ರಸಯಾನ ಶಾಸ್ತ್ರ, ಭೌತಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಟೆಲಿಸ್ಕೋಪ್, ರಾಸಾಯನಿಕ ಕ್ರಿಯೆಗಳು, ವಸ್ತುವಿನ ಬದಲಾವಣೆ, ದ್ಯುತಿ ಸಂಶ್ಲೇಷಣ ಕ್ರಿಯೆ, ಕ್ಯಾಮೆರಾ ತಯಾರಿಕೆ ಕಾಂತಗಳು, ತೂಕ ,ಅಳತೆ, ವಿದ್ಯುತ್ ವಿಭಜನೆ, ವಿದ್ಯುತ್ ಮಂಡಲಗಳ ಪ್ರಯೋಗಳಂತಹ ಚಟುವಟಿಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತಾರೆ.

ರಾಜ್ಯ, ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಶಾಲೆಗೆ ಕೀರ್ತಿ ತಂದಿದ್ದಾರೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

*ಶಾಲೆಯಲ್ಲಿ 14 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಯಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ. ಕಲಿಕಾ, ಅಜೀಂ ಪ್ರೇಮ್‌ಜಿ ಸಂಸ್ಥೆಯ ಸಹಕರವೂ ಇದೆ

-ಬಂಗಾರಪ ಕುಂಬಾರ, ಶಿಕ್ಷಕ

*ಕಲಿಕಾ ಸಂಸ್ಥೆಯಿಂದ ಗ್ರಂಥಾಲಯಕ್ಕೆ ಪುಸ್ತಕಗಳು ಒದಗುಸುತ್ತಿದ್ದೇವೆ. ವಿದ್ಯಾರ್ಥಿಗಳು, ಶಿಕ್ಷಕರು ಇದರ ಉಪಯೋಗ ಪಡೆದು, ಅವುಗಳ ಅಧ್ಯಯನ ಮಾಡುತ್ತಿದ್ದಾರೆ

-ಸಂತೋಷ ಪಸರ್, ಕಲಿಕಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT