ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಆನೆಕಾಲು ರೋಗಿಗಳು ಯಾದಗಿರಿ ತಾಲ್ಲೂಕಿನಲ್ಲೇ ಹೆಚ್ಚು

ಶಹಾ‍ಪುರ ತಾಲ್ಲೂಕಿನಲ್ಲಿ ಕಡಿಮೆ ರೋಗಿಗಳು, ತ್ರಿವಳಿ ಮಾತ್ರೆ ಸೇವನೆಗೆ ಆರೋಗ್ಯ ಅಧಿಕಾರಿಗಳ ಸಲಹೆ
Last Updated 3 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲೇ ಯಾದಗಿರಿ ತಾಲ್ಲೂಕಿನಲ್ಲೇ ಅತಿಹೆಚ್ಚು ಆನೆಕಾಲು ರೋಗ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಅತಿಹೆಚ್ಚು ಆನೆಕಾಲು ರೋಗದಿಂದ ಬಳಲುತ್ತಿರುವ ಜಿಲ್ಲೆಗಳಲ್ಲಿ ಯಾದಗಿರಿ ಜಿಲ್ಲೆ ಒಂದಾಗಿದೆ. ಅದರಲ್ಲೂ ಯಾದಗಿರಿ ತಾಲ್ಲೂಕಿನಲ್ಲಿ 2021ರ ಸಾಲಿನಲ್ಲಿ 930 ಆನೆಕಾಲು ರೋಗಿಗಳು ಪತ್ತೆಯಾಗಿದ್ದಾರೆ.

ಗುರುಮಠಕಲ್‌ ತಾಲ್ಲೂಕಿನ ಕೆಲ ಭಾಗಗಳಲ್ಲಿ ಆನೆಕಾಲು ರೋಗಿಗಳು ಪತ್ತೆಯಾಗಿದ್ದಾರೆ. ಆನೆಕಾಲು ರೋಗ ಬಂದರೆ ಕಾಲು ದಪ್ಪವಾಗಿ ಓಡಾಡಲು ಕಷ್ಟವಾಗುತ್ತದೆ. ಕೆಲಸ ಮಾಡಲು ತೊಂದರೆ ಆಗುತ್ತದೆ. ಕಾಲಿಗೆ ಗಾಯಗಳಾಗಿ ಕೀವು ತುಂಬುವುದು, ಅತೀವ ನೋವು ಉಂಟಾಗುವುದು, ಜ್ವರ ಬರುವುದು, ನಿಶ್ಯಕ್ತಿ ಲಕ್ಷಣಗಳು ಕಂಡುಬರುತ್ತವೆ.

ಮಾತ್ರೆ ನುಂಗಿಸುವ ಕಾರ್ಯಕ್ರಮ:ಆನೆಕಾಲು ರೋಗಮುಕ್ತ ಸಮಾಜಕ್ಕಾಗಿ ಜಿಲ್ಲೆಯಾದ್ಯಂತ ಪ್ರತಿ ವರ್ಷ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವತಿಯಿಂದ ಡಿಇಸಿ, ಐವರ್‌ಮೆಕ್ಟಿನ್ ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ವರ್ಷ ಜನವರಿ 5ರಿಂದ 30ರ ವರೆಗೆ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ನಡೆಸಲಾಗಿದೆ.

ವರ್ಷದಲ್ಲಿ 1 ಬಾರಿ ಐವರ್‌ಮೆಕ್ಟಿನ್ ಮತ್ತು ಡಿಇಸಿ ಮಾತ್ರೆಗಳನ್ನು ಸೇವಿಸುವುದರಿಂದ ಆನೆಕಾಲು ರೋಗವನ್ನು ತಡೆಗಟ್ಟಬಹುದಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾತ್ರೆ ನುಂಗಿಸುತ್ತಿದ್ದಾರೆ. ಎತ್ತರ, ವಯೋಮಿತಿಗೆ ಅನುಗುಣವಾಗಿ ಮಾತ್ರ ನೀಡಲಾಗುತ್ತಿದೆ.

ಏನಿದು ಆನೆಕಾಲು ರೋಗ:ಆನೆಕಾಲು ರೋಗವು ಸೋಂಕಿತ ಕ್ಯೂಲೆಕ್ಸ್‌ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದರಿಂದ ಕ್ರಮೇಣ ಕೈ, ಕಾಲುಗಳು ಅಥವಾ ವೃಷಣಗಳು ದಪ್ಪವಾಗುತ್ತವೆ. ಈ ರೋಗದ ಲಕ್ಷಣಗಳು ಕಾಣಿಸಿದ ನಂತರ ಗುಣಮುಖ ಕಷ್ಟ ಸಾಧ್ಯ. ಹೀಗಾಗಿ ವರ್ಷಕ್ಕೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ತ್ರಿವಳಿ ಮಾತ್ರೆಗಳನ್ನು ಸೇವಿಸಿ ಈ ರೋಗವನ್ನು ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿವರಣೆಯಾಗಿದೆ.

ಆನೆಕಾಲು ರೋಗ ಆರಂಭದಲ್ಲಿ ಯಾವುದೇ ಲಕ್ಷಣ ತೋರದಿರುವ ಕಾರಣ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಬೇಕು. ದೇಹದಲ್ಲಿದ್ದ ರೋಗ ತರುವ ಮೈಕ್ರೋ ಫೈಲೇರಿಯಾ ರೋಗಾಣುಗಳು ನಾಶವಾಗುತ್ತವೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗಿ, ಚಿಕೂನ್‌ ‍ಗುನ್ಯಾ, ಆನೆಕಾಲು ರೋಗಗಳು ಬರುತ್ತವೆ. ಆದ್ದರಿಂದ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ನೀಡುವ ಸಲಹೆಯಾಗಿದೆ.

ಮಾತ್ರೆ ನುಂಗಿಸುವ ಕಾರ್ಯಕ್ರಮದ ವಿವರ:ಈ ಬಾರಿ ಜಿಲ್ಲೆಯಲ್ಲಿ 13,03,956 ಲಕ್ಷ ಜನರಿಗೆ ತ್ರಿವಳಿ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿತ್ತು. ಆದರೆ, 11,86,418 ಜನರಿಗೆ ಮಾತ್ರೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಮಾತ್ರೆ ವಿತರಣೆ ನಡೆದಿದೆ. ಆದರೆ, ನಗರ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದ ಹಿನ್ನಡೆಯಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ ಯಾದಗಿರಿ ತಾಲ್ಲೂಕಿನಲ್ಲಿ 4,56,228 ಜನರ ಗುರಿ ಇದ್ದರೆ 4,13,804 ಜನ ಸಂಖ್ಯೆಗೆ ತಲುಪಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 4,00,387 ಗುರಿ ಇದ್ದು, 3,55,741 ಜನರಿಗೆ ಮಾತ್ರೆ ವಿತರಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ 4,47,341 ಗುರಿ ಇದ್ದು, 4,16,873 ಜನರನ್ನು ತಲುಪಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ ಶೇ 91ರಷ್ಟು, ಶಹಾಪುರ ತಾಲ್ಲೂಕಿನಲ್ಲಿ ಶೇ 89, ಸುರಪುರ ತಾಲ್ಲೂಕಿನಲ್ಲಿ ಶೇ 93 ಒಟ್ಟಾರೆ ಜಿಲ್ಲೆಯಲ್ಲಿ ಸಾಮೂಹಿಕ ಮಾತ್ರೆ ನುಂಗಿಸುವ ಶೇಕಡವಾರು 91 ರಷ್ಟಾಗಿದೆ.

***

ಅಂಕಿ ಅಂಶ
ಜಿಲ್ಲೆಯಲ್ಲಿರುವ ಆನೆಕಾಲು ರೋಗಿಗಳ ವಿವರ
ತಾಲ್ಲೂಕು; ಆನೆಕಾಲು ರೋಗಿಗಳ ಸಂಖ್ಯೆ
ಶಹಾಪುರ
; 457
ಸುರಪುರ; 589
ಯಾದಗಿರಿ: 930
ಒಟ್ಟು; 1,976
ಆಧಾರ: ಆರೋಗ್ಯ ಇಲಾಖೆ

****

ಜಿಲ್ಲೆಯಲ್ಲಿ ಆನೆಕಾಲು ರೋಗ ಮುಕ್ತಕ್ಕಾಗಿ ಶ್ರಮಿಸಲಾಗುತ್ತಿದೆ. ರೋಗ ಪೀಡಿತರಿಗೆ ಆರೋಗ್ಯ ಇಲಾಖೆಯಿಂದ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ.
-ಲಕ್ಷ್ಮೀಕಾಂತ ಒಂಟಿಪೀರ, ಆರ್‌ಸಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT