‘ತಾಯಿ–ಮಗುವಿನ ಆರೋಗ್ಯ ಕಾಪಾಡಿ’

7
ಕಲಾತಂಡಗಳಿಂದ ಜಿಲ್ಲೆಯ 30 ಹಳ್ಳಿಗಳಲ್ಲಿ ಅರಿವು ಕಾರ್ಯಕ್ರಮ

‘ತಾಯಿ–ಮಗುವಿನ ಆರೋಗ್ಯ ಕಾಪಾಡಿ’

Published:
Updated:
Prajavani

ಯಾದಗಿರಿ:‘ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಜನಪದ ಮತ್ತು ಬೀದಿ ನಾಟಕಗಳ ಮೂಲಕ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 2018-19-ನೇ ಸಾಲಿನಲ್ಲಿ ಜಾನಪದ ಕಲಾ ತಂಡಗಳ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಜಿಲ್ಲೆಯ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜ.16ರಿಂದ 25ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಲಾತಂಡಗಳು ತಮಗೆ ನಿಗದಿಪಡಿಸಿದ ಹಳ್ಳಿಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಅನುಸರಿಸಬೇಕಾದ ಕ್ರಮಗಳು, ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ ಉಸ್ಮಾನ್ ಪಟೇಲ್ ಮಾತನಾಡಿ,‘ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಮೂರು ಕಲಾತಂಡಗಳಿಂದ ಜಿಲ್ಲೆಯಲ್ಲಿ ಒಟ್ಟು 30 ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಾವಿದರೊಂದಿಗೆ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಹಿರಿಯ, ಕಿರಿಯ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರು ಇರುತ್ತಾರೆ’ ಎಂದು ತಿಳಿಸಿದರು.

‘ಜ್ಯೋತಿಬಾ ಫುಲೆ ಕಲಾತಂಡ ಶಹಾಪುರ ತಾಲ್ಲೂಕಿನ ದರ್ಶನಾಪುರ, ನಾಗನಟಿಗಿ, ಬಾಣಂತಿಹಾಳ, ಬಿರನೂರ, ತಂಗಡಿಗಿ, ಬೆಂಡೆಬೆಂಬಳಿ, ಜೋಳದಡಗಿ, ಕೊಂಕಲ್, ಟಿ.ವಡಗೇರಾ, ಉಳ್ಳೆಸೂಗೂರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಿದೆ. ಸಿದ್ಧಾರ್ಥ ಕಲಾತಂಡ ಸುರಪುರ ತಾಲ್ಲೂಕಿನಲ್ಲಿ ಮಾಚಗುಂಡಳ, ಮುದನೂರ ತಾಂಡಾ, ಸೋನಾಪುರ ತಾಂಡಾ, ಚನ್ನೂರ ತಾಂಡಾ, ಪರಸನಳ್ಳಿ, ಬೂದಿಹಾಳ, ಗೋಡಿಹಾಳ, ಜಾಲಿಬೆಂಚಿ, ಅಮ್ಮಾಪುರ ಎಸ್.ಕೆ, ಕೋಳಿಹಾಳ ಎಂ.ತಾಂಡಾ ಗ್ರಾಮಗಳಲ್ಲಿ ಮತ್ತು ಭೀಮಜ್ಯೋತಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಜ.21ರಿಂದ ಜ.25ರ ವರೆಗೆ ಯಾದಗಿರಿ ತಾಲ್ಲೂಕಿನ ಕಾಕಲವಾರ, ಬೂದೂರ, ಚಿನ್ನಕಾರ, ಮುದ್ಗಾಪುರ, ಕಣೆಕಲ್, ಅಶೋಕನಗರ, ಅಲ್ಲಿಪುರ, ಮೊಟ್ನಳ್ಳಿ, ಹೊಸಳ್ಳಿ ತಾಂಡಾ ಶೆಡ್, ಭೀಮಳ್ಳಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಿವೆ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಆರೋಗ್ಯ ಮೇಲ್ವಿಚಾರಕ ಸತ್ಯನಾರಾಯಣ, ಹಿರಿಯ ಆರೋಗ್ಯ ಸಹಾಯಕ ಗಂಗಾಧರ, ಕಿರಿಯ ಆರೋಗ್ಯ ಸಹಾಯಕ ಭಾಗಪ್ಪ, ಭೀಮಜ್ಯೋತಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಭೀಮಾಶಂಕರ ಯರಗೋಳ, ಮಹಾತ್ಮ ಜ್ಯೋತಿಬಾ ಫುಲೆ ಕಲಾ ತಂಡದ ಅಮಲಪ್ಪ ನಾಯ್ಕರ ಹಾಗೂ ಕಲಾವಿದರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !