ಬುಧವಾರ, ನವೆಂಬರ್ 13, 2019
22 °C

11 ತಿಂಗಳಿಂದ ಗೌರವಧನ ಸ್ಥಗಿತ: ಮಾಜಿ ಪಾಟೀಲ, ಶಾನುಭೋಗ, ಪಟವಾರರ ಪರದಾಟ

Published:
Updated:
prajavani

ಯಾದಗಿರಿ: ಮಾಜಿ ಪೊಲೀಸ್ ಪಾಟೀಲ, ಶಾನುಭೋಗ, ಪಟವಾರಿಗಳಿಗೆ 11 ತಿಂಗಳಿಂದ ಗೌರವಧನ ಇಲ್ಲದೆ ಚಿಕಿತ್ಸೆಗಾಗಿ ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ.

ಈ ಬಗ್ಗೆ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆದಾದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗೌರವಧನದ ಮೇಲೆ ಆಧಾರವಾಗಿದ್ದವರಿಗೆ ದಿಕ್ಕೇ ತೋಚದಂತಾಗಿದೆ.

ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಎರಡು, ಮೂರು ತಿಂಗಳಿಗೊಮ್ಮೆ ಪತ್ರ ಬರೆಯುತ್ತಿದ್ದರೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಇವರು ನಿರಾಶರಾಗಿ ಹಣ ಬರುವ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದಾರೆ.

₹100 ರಿಂದ ಆರಂಭ: ಹಿಂದೆ ಪ್ರತಿಯೊಂದು ಗ್ರಾಮದಲ್ಲಿ ಶಾನುಭೋಗರು, ಪಟೇಲರಾಗಿ ಸೇವೆ ಸಲ್ಲಿಸುತ್ತಿದ್ದವರಿಗೆ ಸರ್ಕಾರವೇ ಆರಂಭದಲ್ಲಿ ₹100 ಗೌರವ ಧನ ನಿಗದಿಪಡಿಸಿ ವಿತರಿಸುತ್ತಿತ್ತು. ₹100 ರೂಪಾಯಿಯಿಂದ ಸದ್ಯ ₹3,000 ನೀಡುತ್ತಿದೆ. ತಹಶೀಲ್ದಾರ್ ಮುಖಾಂತರ ಮಾಜಿ ಪಾಟೀಲರಿಗೆ ₹3,000, ಶಾನುಭೋಗರಿಗೆ ₹1,000 ನೀಡಲಾಗುತ್ತಿತ್ತು.

ಆದರೆ, ಏಕಾಏಕಿ 11 ತಿಂಗಳಿಂದ ಗೌರವಧನ ನಿಂತುಹೋಗಿದೆ. ಪಾಟೀಲರು, ಶಾನುಭೋಗರು ಜೀವಂತ ಇರುವವರೆಗೆ ಗೌರವಧನ ನೀಡಲಾಗುತ್ತದೆ ಎಂದು ಸರ್ಕಾರವೇ ತಿಳಿಸಿದೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದರೆ ಬಜೆಟ್ ಇಲ್ಲ. ಹೀಗಾಗಿ ನೀಡುತ್ತಿಲ್ಲ ಎನ್ನಲಾಗುತ್ತದೆ.

ಇದರಿಂದ ಇವರು ವಿಚಲಿತರಾಗಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಯವರು ಬೆಂಗಳೂರಿನ ಕಂದಾಯ ಇಲಾಖೆಗೆ ಪತ್ರ ಬರೆದು ಇವರಿಗೆ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದರೂ ಇಲ್ಲಿಯವರೆಗೆ ಪ್ರಯೋಜನ ಆಗಿಲ್ಲ.

ಸುರಪುರ ತಾಲ್ಲೂಕಿನ ಬಾದ್ಯಾಪುರದ ದೇವಿಂದ್ರಪ್ಪಗೌಡ ಅವರು ಜಿಲ್ಲಾಧಿಕಾರಿಗೆ ಖಾರವಾಗಿ ಪತ್ರ ಬರೆದಿದ್ದಾರೆ. ಪಾಟೀಲ ವೃತ್ತಿ ಮಾಡಿದ ತಮಗೆ ಗೌರವಧನ ಬಿಡುಗಡೆ ಮಾಡದೆ ಸರ್ಕಾರ ಅವಮಾನ ಮಾಡಿದೆ. ಇದು ಸರಿಯಲ್ಲ. ತಕ್ಷಣ ಗೌರವಧನ ಬಿಡುಗಡೆ ಮಾಡಿಸಬೇಕು. ಮುಂದೆ ನಾನು ಜೀವಂತ ಇರುವವರೆಗೆ ಗೌರವ ಧನ ಒದಗಿಸಿಕೊಟ್ಟು ತಮ್ಮ ಗೌರವಕ್ಕೆ ಧಕ್ಕೆ ಆಗದಂತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಾನುಭೋಗರು ಗ್ರಾಮಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಪಟೇಲರು ಗ್ರಾಮಾಧಿಕಾರಿಗಳಲ್ಲಿ ಮುಖ್ಯವಾಗಿದ್ದರು. 

ಚಿಕಿತ್ಸೆಗಾಗಿ ಪರದಾಟ: ಪೊಲೀಸ್ ಪಾಟೀಲ ಮತ್ತು ಶಾನುಭೋಗರಿಗೆ ಸುಮಾರು 70 ರಿಂದ 85 ವರ್ಷ ವಯಸ್ಸಾಗಿದೆ. ಅವರಿಗೆ ವಯೋ ಸಹಜ ಕಾಯಿಲೆಗಳು ಅಂಟಿಕೊಂಡಿವೆ. ಇವುಗಳಿಗೆ ಪ್ರತಿ ತಿಂಗಳೂ ಆಸ್ಪತ್ರೆ, ಔಷಧಿ ವೆಚ್ಚಕ್ಕಾಗಿ ಸಾವಿರಾರು ರೂಪಾಯಿ ಬೇಕಾಗುತ್ತದೆ‌. ಕೆಲ ತಿಂಗಳಿಂದ ಹಣ ಇಲ್ಲದಿದ್ದರಿಂದ ಚಿಕಿತ್ಸೆ, ಔಷಧಿಗಾಗಿ ಪರದಾಟುತ್ತಿದ್ದಾರೆ. ಕೆಲವರಿಗೆ ಕಿವಿ ಕೇಳುವುದಿಲ್ಲ. ಇನ್ನೂ ಕೆಲವರು ಹಾಸಿಗೆ ಹಿಡಿದಿದ್ದಾರೆ. ಇನ್ನೂ ಕೆಲವರಿಗೆ ಮಕ್ಕಳು ದೂರದಲ್ಲಿದ್ದಾರೆ. ಹೀಗಾಗಿ ಇವರನ್ನು ನೋಡಿಕೊಳ್ಳುವವರು ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ಗೌರವಧನ ತಡೆ ಹಿಡಿದಿದ್ದರಿಂದ ಇವರೆಲ್ಲರೂ ಆತಂಕಗೊಂಡಿದ್ದಾರೆ.

***

ನಮ್ಮನ್ನು ಸರ್ಕಾರ ಅಲಕ್ಷ್ಯ ಮಾಡಿರುವುದು ಸರಿಯಲ್ಲ. ಶೀಘ್ರ ಹಣ ಬಿಡುಗಡೆ ಮಾಡಲಿ.
– ನಾಗನಗೌಡ ಪೊಲೀಸ್ ಪಾಟೀಲ ಬೋನಾಳ, ತಾಲ್ಲೂಕು ಪಾಟೀಲರ ಸಂಘದ ಅಧ್ಯಕ್ಷ.

***

ಉಚಿತವಾಗಿ ಸೇವೆ ನೀಡಿದ್ದಕ್ಕೆ ಸರ್ಕಾರ ಗೌರವಧನವನ್ನು ಕೆಜಿಬಿ ಬ್ಯಾಂಕ್‌ಗೆ ನೀಡುತ್ತಿತ್ತು. ಈಗ 11 ತಿಂಗಳಿಂದ ಗೌರವಧನ ತಡೆಹಿಡಿಯಲಾಗಿದೆ. ಕಾರಣ ಗೊತ್ತಿಲ್ಲ
– ದೇವಿಂದ್ರಪ್ಪಗೌಡ, ಮಾಜಿ ಪಾಟೀಲರು.

***

ಗೌರವಧನ ಇಲ್ಲದೆ ನಮ್ಮ ಆರೋಗ್ಯ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಆರೋಗ್ಯ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದೇವೆ. ಸರ್ಕಾರ ಶೀಘ್ರ ಹಣ ಬಿಡುಗಡೆ ಮಾಡಬೇಕು. 
– ನರಸಿಂಗರಾವ್ ಕಾಮನಟಗಿ, ಮಾಜಿ ಪೊಲೀಸ್ ಪಾಟೀಲ.

***

ಮಾಜಿ ಪೊಲೀಸ್ ಪಾಟೀಲರು, ಶಾನುಭೋಗರಿಗೆ ಗೌರವಧನ ಸಿಗದಿರುವ ಬಗ್ಗೆ ವಿಚಾರಿಸುತ್ತೇನೆ. ಯಾಕೆ ವಿಳಂಬವಾಗಿದೆ ಎನ್ನುವುದರ ಬಗ್ಗೆಯೂ ಪರಿಶೀಲಿಸಲಾಗುವುದು. 

–ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ 

 

ಪ್ರತಿಕ್ರಿಯಿಸಿ (+)