ಬುಧವಾರ, ಅಕ್ಟೋಬರ್ 21, 2020
24 °C
ಕಂದಾಯ ಇಲಾಖೆ ವಿಳಂಬ ಧೋರಣೆಗೆ ಖಂಡನೆ

10ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಆಸ್ತಿ ದಾಖಲೆ ನೀಡುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಂಗಂಪೇಟೆಯ ಅಮರಣ್ಣ ಸಜ್ಜನ್ ಕುಟುಂಬದವರು ತಹಶೀಲ್ದಾರ್ ಕಚೇರಿ ಎದುರು ಆರಂಭಿಸಿರುವ ಸರದಿ ಉಪವಾಸ ಸತ್ಯಾಗ್ರಹ ಮಂಗಳವಾರ 10 ನೇ ದಿನಕ್ಕೆ ಮುಂದುವರೆದಿದೆ.

ಪ್ರತಿಭಟನೆಗೆ ಬೆಂಬಲಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಬೆಂಬಲಿಸಿ ಭಾಗವಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ಸಜ್ಜನ್ ಅವರ ಆಸ್ತಿ ವಿಷಯ ಕುರಿತು ಈಗಾಗಲೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆ ನೀಡುವಂತೆ ಸಜ್ಜನ್ ಕುಟುಂಬದವರು ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಸೂಕ್ತ ದಾಖಲೆ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ ಮಾತನಾಡಿ, ‘ಎಸಿ, ಡಿಸಿ ಮತ್ತು ಪ್ರಾದೇಶಿಕ ಆಯುಕ್ತರಿಗೂ ಈ ಕುರಿತು ಮನವಿ ಮಾಡಿದ್ದಾರೆ. ದಾಖಲೆ ಕೊಡುವಂತೆ ಅವರು ಆದೇಶಿಸಿದ್ದಾರೆ. ಆದರೆ ಕಂದಾಯ ಇಲಾಖೆಯವರು ರಾಜಕೀಯ ಒತ್ತಡಕ್ಕೆ ಮಣಿದು ದಾಖಲೆ ನೀಡಲು ವಿಳಂಬ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮುಗ್ಧರಾದ ಸಜ್ಜನ್ ಕುಟುಂಬದ ಆಸ್ತಿ ನುಂಗಿ ಹಾಕುವ ಷಡ್ಯಂತ್ರ ನಡೆದಿದೆ’ ಎಂದು ದೂರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ್ರಾಯ ಮಡಿವಾಳರ ಮಾತನಾಡಿದರು. ಸಜ್ಜನ್ ಕುಟುಂಬದ ರವಿಕುಮಾರ, ಜಗದೀಶ, ಅಶೋಕ ಮತ್ತು ರೈತ ಸಂಘದ ಮಹಿಳಾ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.