ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬೇವಿನ ಮರಗಳಿಗೆ ಕೀಟ ಬಾಧೆ

Last Updated 5 ಡಿಸೆಂಬರ್ 2021, 5:13 IST
ಅಕ್ಷರ ಗಾತ್ರ

ಸುರಪುರ: ಕಳೆದ ಎಳೆಂಟು ತಿಂಗಳಿಂದ ಈ ಭಾಗದ ಬೇವಿನ ಮರಗಳು ವಿಚಿತ್ರ ರೋಗದಿಂದ ಒಣಗುತ್ತಿವೆ.

ಎಲ್ಲ ಬೇವಿನ ಮರಗಳ ಎಳೆಯ ಎಲೆಗಳು ರೋಗಕ್ಕೆ ತುತ್ತಾಗಿ ಹಿಂಡು ಹಿಂಡಾಗಿ ಬಾಡಿ ತೂಗಾಡುತ್ತಿವೆ. ರೈತರು, ಸಾರ್ವಜನಿಕರು ಏನು ಮಾಡಲಾಗದೆ ನಿಸ್ಸಹಾಯಕರಾಗಿದ್ದಾರೆ. ನೆರಳು, ತಂಪು ಮತ್ತು ಆಮ್ಲಜನಕ ನೀಡುವ ಮರಕ್ಕೆ ಹೀಗಾದರೆ ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.

ವರ್ಷದ ಹಿಂದೆ ಕೊಪ್ಪಳ ಭಾಗದಲ್ಲಿ ರೈತರು ಗೋಡಂಬಿ ಕೃಷಿ ಮಾಡಲು ತೊಡಗಿದರು. ಗೋಡಂಬಿ ಬೀಜಗಳನ್ನು ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಂಡಿದ್ದಾರೆ. ಗೋಡಂಬಿಯ ಜೊತೆಗೆ ಅಲ್ಲಿನ ‘ಡಿ. ಮೊಸ್ಕಾಟೊ ಬಗ್’ ಎಂಬ ಕೀಟ ಬಂದಿದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.‌

ಈ ಕೀಟ ಎಳೆಯ ಬೇವಿನ ಎಲೆಯ ಮಧುರವಾದ ರಸಕ್ಕೆ ಆಕರ್ಷಿತವಾಗುತ್ತದೆ. ರಸವನ್ನು ಹೀರುವುದರಿಂದ ಬೇವಿನ ಎಲೆಗಳು ಬಾಡುತ್ತಿವೆ. ವಿವಿಧೆಡೆ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದು ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಪೂಜೆಗೆ ಮೊರೆ ಹೋದ ಜನ: ಬೇವಿನ ಮರಕ್ಕೂ ಗ್ರಾಮೀಣ ಜನರಿಗೂ ಬಿಡಿಸಲಾರದ ನಂಟು. ಬೇವಿನ ಎಲೆಗಳನ್ನು ಎಲ್ಲಮ್ಮದೇವಿಯ ಅವತಾರವೆಂದು ನಂಬಿರುವ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಎಲ್ಲಮ್ಮದೇವಿ ಪೂಜೆಗೆ ಬೇವಿನ ಎಲೆ ಬೇಕೆ ಬೇಕು. ಎಲ್ಲಮ್ಮನ ಉಡಿ ತುಂಬಿ ಬೇವಿನ ಎಲೆಯಿಂದ ಮೈತುಂಬಾ ಇಳಿಸಿಕೊಂಡರೆ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಇದೆ.

ಬೇವಿನ ಮರಕ್ಕೆ ಕೊರೊನಾ ತಗುಲಿದೆ ಎಂದು ದಟ್ಟವಾಗಿ ಸುದ್ದಿ ಹರಿದಾಡುತ್ತಿದೆ. ಇನ್ನು ಕೆಲವು ಭಾಗಗಳಲ್ಲಿ ಬೇವಿನ ಮರ ಕೊರೊನಾವನ್ನು ಹೀರಿಕೊಂಡು ವಿಷಕಂಠನಂತೆ ಭಕ್ತರನ್ನು ಕಾಪಾಡು ತ್ತಿದೆ. ಅಂತೇಯೇ ಬೇವಿನ ಮರ ಒಣಗುತ್ತಿದೆ ಎಂದು ನಂಬುತ್ತಿದ್ದಾರೆ.

ಬೇವಿನ ಮರಕ್ಕೆ ಹಬ್ಬಿರುವ ಕೊರೊನಾ ಬಿಡಿಸಲು ಅಥವಾ ಕೊರೊನಾ ಹೀರಿಕೊಂಡು ಭಕ್ತರನ್ನು ಕಾಪಾಡುತ್ತಿರುವ ಮರಕ್ಕೆ ಹರಕೆ ಸಲ್ಲಿಸಲು ಪೂಜೆ ಸಲ್ಲಿಸಬೇಕೆಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಅಮವಾಸ್ಯೆಯಂದು ಪೂಜೆ ಸಲ್ಲಿಸಿದರೆ ಹೆಚ್ಚಿನ ಪ್ರತಿಫಲ ಲಭಿಸುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಮಾತುಗಳು ವ್ಯಾಪಕ ಪ್ರಚಾರ ಪಡೆದುಕೊಂಡಿವೆ.

ರೈತರು, ಮಹಿಳೆಯರು, ವಿಶೇಷವಾಗಿ ಗ್ರಾಮೀಣರು ಶನಿವಾರ ತಂಡೋಪ ತಂಡವಾಗಿ ತೆರಳಿ ಬೇವಿನ ಮರಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಕೊರೊನಾ ತೊಲಗಲಿ, ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥನೆ ಸಲ್ಲಿಸುವುದು ಕಂಡು ಬಂತು.

*ಒಣಗಿದ ಎಲೆ ಉದುರಿ ಮತ್ತೆ ಚಿಗುರುವುದು ಕಂಡು ಬರುತ್ತಿದೆ. 3 ವರ್ಷದ ಮರಗಳಿಗೆ ಬೆವೆರಿಯಾ ಬ್ಯಾಸಿಯಾನಾ ಕ್ರಿಮಿನಾಶಕವನ್ನು ಪ್ರತಿ ಲೀ ನೀರಿಗೆ 4 ಗ್ರಾಂ ಬೆರೆಸಿ ಸಿಂಪಡಿಸಿರಿ.

-ಡಾ. ಅಮರೇಶ ವೈ.ಎಸ್. ಕೃಷಿ ವಿಜ್ಞಾನಿ, ಕೃಷಿ ಸಂಶೋಧಾನಾ ಕೇಂದ್ರ, ಕವಡಿಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT