ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget 2024 | ಯಾದಗಿರಿ: ಅನುಷ್ಠಾನವಾಗದ ಹಳೆ ಘೋಷಣೆಗಳು

Published 17 ಫೆಬ್ರುವರಿ 2024, 7:18 IST
Last Updated 17 ಫೆಬ್ರುವರಿ 2024, 7:18 IST
ಅಕ್ಷರ ಗಾತ್ರ

ಯಾದಗಿರಿ: 2023ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ 6 ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. 2024ರಲ್ಲಿ ಐದು ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಇದು ಕೂಡ ಹಳೆ ಯೋಜನೆಗಳನ್ನು ಮತ್ತೆ ಬಜೆಟ್‌ನಲ್ಲಿ ಮಂಡಿಸಲಾಗಿದೆ.

ಕಳೆದ ಬಾರಿ ತೊಗರಿ ಬೆಳೆಗೆ ನೆಟೆರೋಗಕ್ಕೆ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ಘೋಷಣೆ ಮಾಡಿದ್ದು ಮಾತ್ರ ಅನುಷ್ಠಾನವಾಗಿದೆ. ಉಳಿದ ಐದು ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತವಾಗಿವೆ.

ಈ ಬಾರಿ ಘೋಷಣೆ ಮಾಡಿರುವ ಎಲ್ಲ ಯೋಜನೆಗಳು ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಾಗಿವೆ. ಕೆರೆ ತುಂಬಿಸುವ ಯೋಜನೆ ಹಲವಾರು ವರ್ಷಗಳಿಂದ ಬಜೆಟ್‌ನಲ್ಲಿ ಹೇಳಿದರೂ ಅನುಷ್ಠಾನವಾಗುತ್ತಿಲ್ಲ.

2018ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಯಾವುದೂ ಕಾರ್ಯಗತವಾಗಿಲ್ಲ. ಆ ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಕೇವಲ ಘೋಷಣೆಗಳು ಮಾತ್ರ ಕೇಳಿ ಬಂದಿದ್ದು, ಅನುಷ್ಠಾನವಾಗಿಲ್ಲ ಎನ್ನುವುದು ಜನತೆಯ ಆರೋಪವಾಗಿದೆ.

ಜಿಲ್ಲೆಗೆ ಏನು ಘೋಷಣೆ?:

ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜಿಲ್ಲೆಗೆ ಹಳೆ ಯೋಜನೆ ಸೇರಿ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ಕೆರೆ ತುಂಬುವ ಯೋಜನೆಗಳು ಅದೇ ವರ್ಷವೇ ಪೂರ್ಣ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಅದು ಅನುಷ್ಠಾನವಾಗಿಲ್ಲ. ಇದು ಹಳೆ ಯೋಜನೆಯಾಗಿದ್ದು, ಮತ್ತೆ ಬಜೆಟ್‌ನಲ್ಲಿ ಸೇರಿಸಲಾಗಿತ್ತು. ಆದರೂ ಈ ಯೋಜನೆ ಪೂರ್ಣಗೊಂಡಿಲ್ಲ.

ಸಿಗಡಿ ಕೃಷಿ ಕ್ಲಸ್ಟ‌ರ್ ಅನ್ನು ಯಾದಗಿರಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿತ್ತು. ಆದರೆ, ಅನುಷ್ಠಾನವಾಗಿಲ್ಲ.

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್‌ ಕೇರ್ ಬ್ಲಾಕ್ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿತ್ತು. ಆದರೆ, ಇದನ್ನು ಜಾರಿಗೆ ತರಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಬೇಕಾಗುತ್ತದೆ. ನೇಮಕವಾಗದೇ ಕ್ರಿಟಿಕಲ್‌ ಕೇರ್ ಬ್ಲಾಕ್ ಸ್ಥಾಪನೆ ಮಾಡಲು ಆಗಿಲ್ಲ ಎನ್ನುವುದು ಆಸ್ಪತ್ರೆಯಲ್ಲಿ ಸಿಬ್ಬಂದಿ ಹೇಳುವ ಮಾತಾಗಿದೆ.

ಅಲ್ಲದೇ  ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಜಾನಪದ ಹಬ್ಬದ ಅಯೋಜನೆ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದು ಕೂಡ ಅನುಷ್ಠಾನವಾಗಿಲ್ಲ. ಯಾದಗಿರಿ ಮತ್ತು ಕಲಬುರಗಿಯಲ್ಲಿ ₹443 ಕೋಟಿ ವೆಚ್ಚದಲ್ಲಿ 138 ಸಣ್ಣ ನೀರಾವರಿ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ, ಅನುಷ್ಠಾನವಾಗಿಲ್ಲ.

ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ಸಮರ್ಪಕವಾಗಿ ನೀರಾವರಿ ಯೋಜನೆಗಳು ಅನುಷ್ಠಾನವಾಗಿಲ್ಲ. ಅಲ್ಲದೇ ಕೈಗಾರಿಕೆಗಳಿಲ್ಲದೇ ಜನ ಗುಳೆ ಹೋಗುವುದು ಸಾಮಾನ್ಯವಾಗಿದೆ. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದೇ ಸಾಧನೆಯಾಗಿದೆ. ಇಲ್ಲಿಯತನಕ ನಿರೀಕ್ಷಿತ ಮಟ್ಟದಲ್ಲಿ ಕಂಪನಿಗಳು ಬಂದಿಲ್ಲ.

ಹೆಸರಿಗೆ ಮಾತ್ರ ಯಾದಗಿರಿ ನೂತನ ಜಿಲ್ಲೆ. ಆದರೆ, ಈ ಜಿಲ್ಲೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಇಂದಿಗೂ ಮೂಲಸೌಲಭ್ಯಗಳಿಗೆ ಪರದಾಡುವಂತ ಪರಿಸ್ಥಿತಿ ಇದೆ. ಶಿಕ್ಷಣ, ಸಾರಿಗೆ, ಆರೋಗ್ಯ ಇಲಾಖೆಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿವೆ. ಹಲವಾರು ಕ್ಷೇತ್ರಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಸ್ಥಾನವನ್ನು ಹೊಂದಿದ್ದು, ಮೂಲಸೌಲಭ್ಯಗಳು ಇಂದಿಗೂ ಜನರಿಗೆ ತಲುಪುತ್ತಿಲ್ಲ.

ರಾಜ್ಯದ ಸರ್ವ ಸಮುದಾಯದ ಕಲ್ಯಾಣ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಮುನ್ನೋಟವಿರುವ ಜನಪರ ಗ್ಯಾರಂಟಿ ಬಜೆಟ್ ಇದಾಗಿದೆ

– ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ ಯಾದಗಿರಿ ಮತಕ್ಷೇತ್ರ

ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಈ ಬಜೆಟ್ ಹೆಣ್ಣು ಮಕ್ಕಳಿಗೆ ವಿಶೇಷ ಸಾಲ ಸೌಲಭ್ಯ ನೀಡಿರುವುದು ಸಂತೋಷ ಸಂಗತಿ

– ಸರಿತಾ ಗೃಹಿಣಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅದರಲ್ಲೂ ಹಿಂದುಳಿದ ಜಿಲ್ಲೆ ಯಾದಗಿರಿಗೆ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ

–ಅಶೋಕ ಮಲ್ಲಾಬಾದಿ ರೈತ ಮುಖಂಡ

ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಯುವ ಸಮುದಾಯಕ್ಕೆ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದ ಯುವ ಶಕ್ತಿ ಬಲ ಹೊಂದಲಿದೆ

– ಅವಿನಾಶ ಜಗನ್ನಾಥ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಕಾರ್ಯದರ್ಶಿ

ಕರ್ನಾಟಕ ರೈತ ಸಮೃದ್ಧಿ ಯೋಜನೆ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಆಯುಕ್ತಾಲಯ ಸ್ಥಾಪನೆ ಸೇರಿದಂತೆ ರೈತರಿಗೆ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ

– ಶಾಂತಗೌಡ ಮುಡಬೂಳ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ

ವಡಗೇರಾ ತಾಲ್ಲೂಕು ಕೇಂದ್ರವಾಗಿ ಸುಮಾರು 8 ವರ್ಷಗಳು ಕಳೆದರೂ ಇಲ್ಲಿಯವರೆಗೆ ತಾಲ್ಲೂಕು ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಆರಂಭ ಮಾಡದಿರುವುದು ನೂತನ ತಾಲ್ಲೂಕಿನ ಜನತೆಗೆ ಸರ್ಕಾರ ಮಲತಾಯಿ ಧೋರಣೆ ಮಾಡಿದೆ

– ಅಬ್ದುಲ್ ಚಿಗಾನೂರ ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲ್ಲೂಕು ಅಧ್ಯಕ್ಷ

ಬರಗಾಲ ಇರುವುದರಿಂದ ರಾಜ್ಯ ರೈತರ ಹಿತಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅವಕಾಶಗಳನ್ನು ನೋಡುವ ನಿರೀಕ್ಷೆಯನ್ನು ಪ್ರಸಕ್ತ ಬಜೆಟ್‌ ಹುಸಿಗೊಳಿಸಿದೆ. ಇದು ರೈತರ ಮೂಗಿಗೆ ತುಪ್ಪ ಸವರುವ ಬಜೆಟ್

- ಭೀಮರಾಯ ಎಲ್ಹೇರಿ ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ಗುರುಮಠಕಲ್‌

ಜಿಲ್ಲೆಗೆ ಸಿಕ್ಕಿದ್ದೇನು?

  • ಕೃಷ್ಣಾ ಭಾಗ್ಯ ಜಲ ನಿಗಮದ ಏತ ನೀರಾವರಿ ಯೋಜನೆಗಳಾದ ಯಾದಗಿರಿ ಭೀಮಾ ಫ್ಲ್ಯಾಂಕ್‌ ಯೋಜನೆ ಪ್ರಸಕ್ತ ಸಾಲಿನಲ್ಲಿ ₹3779 ಕೋಟಿ ವೆಚ್ಚದಲ್ಲಿ ಅನುಷ್ಠಾನ

  • ಬೂದಿಹಾಳ–ಪಿರಾಪುರ ಯೋಜನೆಗೆ ಹಂತ–1

  • ಗುರುಮಠಕಲ್‌ ಕೆರೆ ತುಂಬಿಸುವ ಯೋಜನೆ

  • ಕೆಕೆಆರ್‌ಡಿಬಿಯಿಂದ ಸ್ನಾತಕೋತ್ತರ ಕೇಂದ್ರ ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪನೆ

  • ವಿಜ್ಞಾನ ಕೇಂದ್ರ ಹಾಗೂ ತಾರಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT